ಲಕ್ಷಾಂತರ ಭಕ್ತರ ಮಧ್ಯೆ ಅಜ್ಜನ ಮಹಾರಥೋತ್ಸವ

| Published : Jan 16 2025, 12:47 AM IST

ಸಾರಾಂಶ

ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ೨೦೯ನೇ ಮಹಾರಥೋತ್ಸವ ಬುಧವಾರ ಸಂಜೆ ನೆರೆದಿದ್ದ ಸುಮಾರು 8 ಲಕ್ಷ ಭಕ್ತರ ಹರ್ಷೋದ್ಗಾರದ ಮಧ್ಯೆ ಸಾಂಗವಾಗಿ ನೆರವೇರಿತು.

ಪದ್ಮಶ್ರೀ ಪುರಸ್ಕೃತ ಪಂಡಿತ ಎಂ. ವೆಂಕಟೇಶ ಕುಮಾರ ರಥೋತ್ಸವಕ್ಕೆ ಚಾಲನೆ । ಇಕ್ಕೆಲೆಗಳಿಂದ ಹರಿದು ಬಂದ ಜನಸಾಗರ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ೨೦೯ನೇ ಮಹಾರಥೋತ್ಸವ ಬುಧವಾರ ಸಂಜೆ ನೆರೆದಿದ್ದ ಸುಮಾರು 8 ಲಕ್ಷ ಭಕ್ತರ ಹರ್ಷೋದ್ಗಾರದ ಮಧ್ಯೆ ಸಾಂಗವಾಗಿ ನೆರವೇರಿತು.

ಗಾನಯೋಗಿ ಪದ್ಮಶ್ರೀ ಪುರಸ್ಕೃತ ಪಂಡಿತ ಎಂ. ವೆಂಕಟೇಶ ಕುಮಾರ ಅವರು ಹಸಿರು ನಿಶಾನೆ ತೋರುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಬಸವಪಟ ಆರೋಹಣದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಗಜಗಾಂಭಿರ್ಯದಲ್ಲಿ ಮಹಾರಥೋತ್ಸವ ಸಾಗಿತು.

ಇದಕ್ಕೂ ಮೊದಲು ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಥೋತ್ಸವ ರಥ ಬೀದಿಯಲ್ಲಿ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಕಟ್ಟಪ್ಪಣೆಯ ನಡುವೆಯೂ ಬಾಳೆ ಹಣ್ಣು ಎಸೆಯುತ್ತಿದ್ದರು. ಅಚ್ಚರಿ ಎಂದರೇ ಶ್ರೀ ಗಳ ಜೊತೆಯಲ್ಲಿ ವೇದಿಕೆ ಹಂಚಿಕೊಂಡ ಕೆಲವರು ಬಾಳೆ ಹಣ್ಣು ಎಸೆಯುತ್ತಿರುವುದು ಕಂಡು ಬಂದಿತು.

ಪ್ರತಿ ವರ್ಷವೂ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ರಥೋತ್ಸವಕ್ಕೆ ಬಾಳೆ ಹಣ್ಣು ಎಸೆಯಬೇಡಿ ಎಂದು ಪ್ರಕಟಣೆ ನೀಡುತ್ತಾರೆ ಆದರೂ ಈ ವರ್ಷವೂ ಎಸೆಯುತ್ತಿರುವುದು ಕಂಡು ಬಂದಿತು.

ಮುಗಿಲು ಮುಟ್ಟಿದ ಕರತಾಡನ:

ಗವಿಸಿದ್ಧೇಶ್ವರ ಮಹಾರಥೋತ್ಸವ ಸಾಂಗವಾಗಿ ಸಾಗಿ, ಪಾದಗಟ್ಟೆ ತಲುಪಿ ಮರಳಿ ಬಂದು ಮೂಲ ಸ್ಥಾನಕ್ಕೆ ತಲುಪುತ್ತಿದ್ದಂತೆ ಲಕ್ಷ ಲಕ್ಷ ಭಕ್ತರ ಕರತಾಡನ ಮುಗಿಲು‌ ಮುಟ್ಟಿತ್ತು.

ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹಾಗೂ ವಿಜಯಪುರದ ಹುಬ್ಬಳ್ಳಿ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಸುಮಾರು ೮-೧೦ ಲಕ್ಷ ಭಕ್ತರು ಭಾಗಿಯಾಗಿದ್ದಾರೆ ಎಂದು ರಥೋತ್ಸವಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಶಿವರಾಜ ತಂಗಡಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಯಂದ್ರ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು‌.ಬೆಂಗಳೂರಿನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ, ಹಿರಿಯ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಯಂದ್ರ, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ದೊಡ್ಡನಗೌಡ ಪಾಟೀಲ, ರಾಘವೇಂದ್ರ ಹಿಟ್ನಾಳ, ಹಂಪನಗೌಡ ಬಾದರ್ಲಿ, ಎಂಎಲ್‌ಸಿ ಹೇಮಲತಾ ನಾಯಕ, ಮಾಜಿ ಸಚಿವರಾದ ಹಾಲಪ್ಪ ಆಚಾರ, ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಸಂಗಣ್ಣ ಕರಡಿ, ಪ್ರಮುಖರಾದ ಡಾ. ಬಸವರಾಜ ಕ್ಯಾವಟರ್‌, ಸಿ.ವಿ. ಚಂದ್ರಶೇಖರ, ಜಿಲ್ಲಾಧಿಕಾರಿ ನಲಿನ್ ಅತುಲ್, ಎಸ್ಪಿ ಡಾ.‌ ರಾಮ ಎಲ್. ಅರಸಿದ್ದಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಇದ್ದರು.