ಜಿನಗಲಗುಂಟೆ ಅರಣ್ಯ ಒತ್ತುವರಿ ಭೂಮಿ ಜಂಟಿ ಸರ್ವೇ ಪ್ರಾರಂಭ

| Published : Jan 16 2025, 12:47 AM IST

ಜಿನಗಲಗುಂಟೆ ಅರಣ್ಯ ಒತ್ತುವರಿ ಭೂಮಿ ಜಂಟಿ ಸರ್ವೇ ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಪ್ರಭಾವಿ ರಾಜಕಾರಣಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅರಣ್ಯಭೂಮಿ ಒತ್ತುವರಿ ಜಂಟಿ ಸರ್ವೇ ಕಾರ್ಯ ಬುಧವಾರದಿಂದ ಕಂದಾಯ ಮತ್ತು ಅರಣ್ಯ ಇಲಾಖೆ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಮ್ಮುಖದಲ್ಲಿ ನಡೆಯುತ್ತಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಪ್ರಭಾವಿ ರಾಜಕಾರಣಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅರಣ್ಯಭೂಮಿ ಒತ್ತುವರಿ ಜಂಟಿ ಸರ್ವೇ ಕಾರ್ಯ ಬುಧವಾರದಿಂದ ಕಂದಾಯ ಮತ್ತು ಅರಣ್ಯ ಇಲಾಖೆ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಮ್ಮುಖದಲ್ಲಿ ನಡೆಯುತ್ತಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಬಳಿಯ ಜಿನಗಲಗುಂಟೆ ಅರಣ್ಯದ ಸರ್ವೇ ನಂ.೧ ಮತ್ತು ೨ರಲ್ಲಿ ೬೧.೩೯ ಎಕರೆ ಪ್ರದೇಶ ಒತ್ತುವರಿಯಾಗಿದೆ ಎಂದು ರಮೇಶ್ ಕುಮಾರ್ ವಿರುದ್ಧ ಅರಣ್ಯ ಇಲಾಖೆ ಆರೋಪ ಮಾಡಿದ್ದು, ಈ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಜಂಟಿ ಸರ್ವೇ ನಡೆಸಿ ಭೂಮಿ ಗುರುತಿಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸುವಂತೆ ಆದೇಶ ನೀಡಿತ್ತು.

ಕೋರ್ಟ್ ಆದೇಶದಂತೆ ನ.೬, ಡಿ.೨೦ ಹಾಗೂ ಜ.೨ರಂದು ಜಂಟಿ ಸರ್ವೇಗೆ ದಿನಾಂಕ ನಿಗದಿಪಡಿಸಿದ್ದರೂ ಮೂರು ಬಾರಿಯೂ ಕಂದಾಯ ಇಲಾಖೆಯವರು ಸರ್ವೇಯನ್ನು ಮುಂದೂಡಿದ್ದರು. ಈಗ ೪ನೇ ಬಾರಿ ಹೈಕೋರ್ಟ್ ಆದೇಶದಂತೆ ಜಂಟಿ ಸರ್ವೇಗೆ ಜಿಲ್ಲಾಡಳಿತ ಮುಂದಾಗಿ ಬುಧವಾರ ಬೆಳಗ್ಗೆ ೯ ಗಂಟೆಯಿಂದ ಸರ್ವೇ ಕಾರ್ಯ ಶುರುವಾಗಿದೆ.

ಕಂದಾಯ ಇಲಾಖೆಯವರು ೪ ತಂಡಗಳಲ್ಲಿ ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಸರ್ವೇ ಕಾರ್ಯವನ್ನು ಮುಂದುವರಿಸಿದ್ದಾರೆ. ಹೊಸಹುಡ್ಯ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್‌ಅನ್ನು ಏರ್ಪಡಿಸಲಾಗಿದೆ.

ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಶಿರೀನ್, ಎಸ್ಪಿ ಬಿ.ನಿಖಿಲ್, ಉಪವಿಭಾಗಾಧಿಕಾರಿ ಡಾ.ಮೈತ್ರಿ ಸೇರಿ ಅರಣ್ಯ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ವೇ ಜಾಗದಲ್ಲಿ ಉಪಸ್ಥಿತರಿದ್ದರು.

ಒಂದಿಂಚೂ ಅರಣ್ಯ ಭೂಮಿಯೂ ನನಗೆ ಬೇಡ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ವೇ ನಡೆಸುತ್ತಿರುವ ಸ.ನಂ.೧ ಮತ್ತು ೨ರ ಜಾಗದಲ್ಲಿ ಅವರ ತೋಟವಿದ್ದು, ತೋಟದ ಬಳಿ ಹಾಜರಾಗಿ ಸರ್ವೇ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ನಾನೇ ಧಾವೆ ಹೂಡಿ ೨೦೦೨ರಲ್ಲೇ ಜಂಟಿ ಸರ್ವೇ ನಡೆಸಿ ನಾನು ಖರೀದಿಸಿರುವ ಜಾಗವನ್ನು ಗುರುತಿಸಿಕೊಡುವಂತೆ ಮನವಿ ಮಾಡಿದ್ದೆ, ನನಗೆ ಒಂದೇ ಒಂದು ಇಂಚೂ ಅರಣ್ಯ ಭೂಮಿ ಬೇಡ, ನೀವೆ ಸರ್ವೇ ಮಾಡಿ ಜಮೀನು ಗುರುತಿಸಿ ಎಂದು ಸರ್ವೇಗೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಆರ್. ರವಿ ಮತ್ತು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಜಿನಗಲಗುಂಟೆ ಅರಣ್ಯ ಒತ್ತುವರಿ ಜಂಟಿ ಸರ್ವೇ ಕಾರ್ಯ ಮುಂದೂಡಿಕೆ: ಹೊಸಹುಡ್ಯ ಬಳಿಯ ಜಿನಗಲಗುಂಟೆ ಅರಣ್ಯ ಒತ್ತುವರಿ ಜಂಟಿ ಸರ್ವೇ ಕಾರ್ಯವನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೂ ಜಂಟಿ ಸರ್ವೇ ಕಾರ್ಯ ಮುಂದುವರಿದಿತ್ತು.

ಹೊಸಹುಡ್ಯ ಸರ್ವೇ ನಂ.೧ ಮತ್ತು ೨ರ ಗಡಿ ಗುರುತಿಸುವ ಕೆಲಸ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದರಾದರೂ ಸಂಜೆಯಾದ ಕಾರಣ ಗುರುವಾರಕ್ಕೆ ಮುಂದೂಡಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ತೋಟದಲ್ಲೇ ಇದ್ದು ಸರ್ವೇ ಕಾರ್ಯಕ್ಕೆ ಸಹಕಾರ ನೀಡಿದರು.

ಘರ್ಷಣೆ ಮಾಡುವ ಅವಶ್ಯಕತೆ ನನಗಿಲ್ಲ: ನನಗೆ ಘರ್ಷಣೆ ಅವಶ್ಯಕತೆಯಿಲ್ಲ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ಇದು ರಾಜಕೀಯ ಪ್ರೇರಿತವಾಗಿದೆ. ಸರ್ಕಾರ ಮಂಜೂರು ಮಾಡಿರುವ ಜಮೀನು ಇದಾಗಿದ್ದು, ಮಂಜೂರುದಾರರಿಂದ ನಾನು ಜಮೀನನ್ನು ಖರೀದಿಸಿದ್ದೇನೆ. ದುರಸ್ಥಿಯೂ ಆಗಿಲ್ಲ, ೨೦೧೩ರಲ್ಲಿ ಜಂಟಿ ಸರ್ವೇ ನಡೆದಿದೆ. ಸರ್ಕಾರಕ್ಕೆ ವರದಿಯೂ ಸಲ್ಲಿಸಲಾಗಿದೆ. ಈಗ ಚೈನ್‌ಗಳಲ್ಲಿ ವ್ಯತ್ಯಾಸ ಇದೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಮತ್ತೊಂದು ಬಾರಿ ಜಂಟಿ ಸರ್ವೇಗೂ ಸಹಕರಿಸಿದ್ದೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿದರು.

ಹೈಕೋರ್ಟ್ ಆದೇಶದಂತೆ ಜಂಟಿ ಸರ್ವೇ ಮಾಡಲಾಗುತ್ತಿದೆ, ೪ ತಂಡಗಳಾಗಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಸರ್ವೇ ತಂಡವು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮಗಳಲ್ಲಿ ಗಡಿ ಗುರುತಿಸಲಾಗುತ್ತಿದೆ. ೪ ಗಡಿಗಳಲ್ಲಿ ರೊವರ್ ಮೂಲಕ ಕ್ಯಾಪ್ಚರ್ ಮಾಡಿ ಸರ್ವೇ ರೀಡಿಂಗ್ ಮಾಡಲಾಗುತ್ತಿದೆ. ಮೊದಲಿಗೆ ಗ್ರಾಮದ ಗಡಿ ನಂತರ ಅರಣ್ಯಭೂಮಿ ಸರ್ವೇ ಮಾಡಿ ಬಳಿಕ ಅರಣ್ಯಗಡಿ ಗುರುತಿಸಲಾಗುವುದು. ಇದು ಸಂಪೂರ್ಣ ತಾಂತ್ರಿಕತೆಯಿಂದ ಕೂಡಿದೆ. ಮೊದಲು ಕಂದಾಯ ಬಳಿಕ ಅರಣ್ಯ ಅಧಿಕಾರಿಗಳ ಸರ್ವೇ ನಡೆಸಲಾಗುವುದು. ರೀಡಿಂಗ್ ಸರ್ವೇ ನಂತರ ಎಲ್ಲವೂ ತಿಳಿಯಲಿದೆ. ಜಂಟಿ ಸರ್ವೇಯ ಮುಖ್ಯ ಉದ್ದೇಶ ಹೊಸಹುಡ್ಯ ಮತ್ತು ಅದರ ಸ್ಥಿತಿ ಅರಿಯುವುದಾಗಿದೆ. ಸರ್ವೇ ನಂತರ ಒತ್ತುವರಿಯಾಗಿದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ.

ಜಿಲ್ಲಾಧಿಕಾರಿ ಎಂ.ಆರ್.ರವಿ.