ಹುಬ್ಬಳ್ಳಿಯಲ್ಲಿ ಮಹಾ ಸ್ವಚ್ಛತಾ ಅಭಿಯಾನ

| Published : Feb 05 2024, 01:47 AM IST / Updated: Feb 05 2024, 05:06 PM IST

ಸಾರಾಂಶ

ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಹುಬ್ಬಳ್ಳಿಯಲ್ಲಿ 14 ಸಾವಿರಕ್ಕೂ ಅಧಿಕ ಸ್ವಯಂಸೇವಕರಿಂದ 3 ಗಂಟೆಗಳ ಕಾಲ ನಡೆದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಹುಬ್ಬಳ್ಳಿ: ಭಾನುವಾರ ನಗರ ಮಹಾ ಸ್ವಚ್ಛತಾ ಅಭಿಯಾನಕ್ಕೆ ಸಾಕ್ಷಿಯಾಯಿತು. ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಹುಬ್ಬಳ್ಳಿಯ 164 ಪ್ರದೇಶಗಳಲ್ಲಿ ಕೈಗೊಂಡ ಸ್ವಚ್ಛತಾ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. 

ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ವಿವಿಧ ನಗರಗಳ 14,644 ಸ್ವಯಂಸೇವಕರು ಪಾಲ್ಗೊಂಡು ಯಶಸ್ವಿಗೊಳಿಸಿದರು.

ನಗರದ 16 ಮುಖ್ಯರಸ್ತೆಗಳು, 7 ಪೊಲೀಸ್‌ ಠಾಣೆ, 13 ಮಾರುಕಟ್ಟೆ, 3 ಬಸ್‌ ನಿಲ್ದಾಣ, 11 ಸರ್ಕಾರಿ ಕಚೇರಿಗಳು ಸೇರಿ ಒಟ್ಟು 164 ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. 

ಹುಬ್ಬಳ್ಳಿ ನಗರವನ್ನು 4 ಸೆಕ್ಟರ್‌ಗಳಲ್ಲಿ ವಿಂಗಡಿಸಿ ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು. ಒಟ್ಟು 297 ಎಕರೆ ಪ್ರದೇಶದಲ್ಲಿದ್ದ ಕಸವನ್ನು ಸ್ವಚ್ಛಗೊಳಿಸಿ 2032 ಟನ್‌ ಕಸ ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳಿಸಲಾಯಿತು.

ಕಸ ವಿಲೇವಾರಿಗಾಗಿ ಪಾಲಿಕೆಯಿಂದ 4 ಕ್ರೇನ್‌, 80 ಟಿಪ್ಪರ್‌, 100ಕ್ಕೂ ಅಧಿಕ ಟ್ರ್ಯಾಕ್ಟರ್‌ ವ್ಯವಸ್ಥೆ ಮಾಡಲಾಗಿತ್ತು. ಸ್ವಯಂಸೇವಕರನ್ನು ಕರೆದುಕೊಂಡು ಹೋಗುವ ಸಲುವಾಗಿಯೇ ಸೊಲ್ಲಾಪುರದಿಂದ 2 ಹಾಗೂ ಮುಂಬೈದಿಂದ 2 ಒಟ್ಟು 4 ರೈಲುಗಳ ವ್ಯವಸ್ಥೆ ಮಾಡಲಾಗಿತ್ತು.

ಸತಾರದಿಂದ 168 ಕಾರುಗಳು, ಕಲಬುರ್ಗಿಯಿಂದ 2 ಬಸ್‌, ವಿಜಯಪುರದಿಂದ 4 ಬಸ್‌ ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ನೂರಾರು ಬಸ್‌ಗಳು, ಟಿಟಿ, ಟೆಂಪೋಗಳಲ್ಲಿ ಸ್ವಯಂಸೇವಕರು ಹುಬ್ಬಳ್ಳಿಗೆ ಆಗಮಿಸಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗಿ: ಭಾನುವಾರ ಬೆಳಗ್ಗೆ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಬಳಿಯ ಅಂಚಟಗೇರಿ ಓಣಿಯಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗಿಯಾಗಿ, ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಕೈಗೊಂಡ ಈ ಸ್ವಚ್ಛತಾ ಮಹಾ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಾಜಿ ಸಚಿವ ಪ್ರಮೋದ್ ಮದ್ವರಾಜ್‌, ಪಾಲಿಕೆ ಮೇಯರ್ ವೀಣಾ ಭರದ್ವಾಡ, ಉಪಮೇಯರ್ ಸತೀಶ‌ ಹಾನಗಲ್, ಟ್ರಸ್ಟ್‌ನ ಸದಸ್ಯರಾದ ಸುಭಾಷಸಿಂಗ್‌ ಜಮಾದಾರ, ವಿಜಯ ಲಕ್ಕುಂಡಿ, ಸುನೀಲ ಅರಮನಿ, ಗಿರೀಶ ಚವರಗಿ, ವಿಜಯ ಹಿರೇಮಠ, ಮಹಾಂತೇಶ ಕುಬಸದ, ಪ್ರಸಾದ ಕರನಂದಿ, ಅಭಿಷೇಕ ಮಹ್ತಾ ಸೇರಿದಂತೆ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.