ಶಿಕ್ಷಣವಂತರಾಗಿ ಸಮಸಮಾಜ ನಿರ್ಮಾಣಕ್ಕಾಗಿ ಸಂಘಟಿತರಾಗಬೇಕು: ಕುಲಸಚಿವ ಡಾ.ಬಸವರಾಜ್

| Published : Feb 05 2024, 01:47 AM IST

ಶಿಕ್ಷಣವಂತರಾಗಿ ಸಮಸಮಾಜ ನಿರ್ಮಾಣಕ್ಕಾಗಿ ಸಂಘಟಿತರಾಗಬೇಕು: ಕುಲಸಚಿವ ಡಾ.ಬಸವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ಶಿಕ್ಷಣ ಸಮಾಜದ ಮೇಲೆ ಅತ್ಯಧಿಕ ಪರಿಣಾಮಗಳನ್ನು ಬೀರುತ್ತಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ವಕೀಲರ ಪಾತ್ರ ಮಹತ್ವದಾಗಿದೆ. ಸಮಾಜದಲ್ಲಿ ಅನೇಕರು ನಿಜವಾದ ನ್ಯಾಯದಿಂದ ವಂಚಿತರಾಗಿದ್ದಾರೆ. ವಂಚನೆಗೊಳಗಾದವರಿಗೆ ಸಂವಿಧಾನದ ಪ್ರತಿಯೊಂದು ಆಶಯಗಳು ತಲುಪುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕಾನೂನು ವಿದ್ಯಾರ್ಥಿಗಳ ಮೇಲಿದೆ. ನಾವು ಕಲಿತ ಶಿಕ್ಷಣದ ಮೂಲಕ ಸಮಸಮಾಜ ನಿರ್ಮಾಣ ಮಾಡಲು ಸಂಘಟಿತರಾಗಿ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ. ಸಿ.ಬಸವರಾಜ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾವು ಕಲಿತ ಶಿಕ್ಷಣದ ಮೂಲಕ ಸಮಸಮಾಜ ನಿರ್ಮಾಣ ಮಾಡಲು ಸಂಘಟಿತರಾಗಿ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ. ಸಿ.ಬಸವರಾಜ್ ಹೇಳಿದರು.

ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಿ.ಭೀಮಸೇನ ರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ ಹಾಗೂ ಕಾನೂನು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಶಿಕ್ಷಣ ಸಮಾಜದ ಮೇಲೆ ಅತ್ಯಧಿಕ ಪರಿಣಾಮಗಳನ್ನು ಬೀರುತ್ತಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ವಕೀಲರ ಪಾತ್ರ ಮಹತ್ವದಾಗಿದೆ. ಸಮಾಜದಲ್ಲಿ ಅನೇಕರು ನಿಜವಾದ ನ್ಯಾಯದಿಂದ ವಂಚಿತರಾಗಿದ್ದಾರೆ. ವಂಚನೆಗೊಳಗಾದವರಿಗೆ ಸಂವಿಧಾನದ ಪ್ರತಿಯೊಂದು ಆಶಯಗಳು ತಲುಪುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕಾನೂನು ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.

ಸಂವಿಧಾನದ ಆಶಯ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತಿಲ್ಲ. ಅನಿಷ್ಠ ಪದ್ಧತಿಗಳಿಂದ ಅಸಮತೋಲನ ಉಂಟಾಗಿದೆ. ಮರ್ಯಾದೆ ಹತ್ಯೆ, ದೌರ್ಜನ್ಯಗಳು ಇಂದಿಗೂ ನಮ್ಮ ನಡುವೆ ಬದುಕುತ್ತಿದೆ. ನೂರಾರು ವಕೀಲರು ನಮ್ಮ ನಡುವೆ ಇದ್ದರೂ ನೊಂದವರಿಗೆ ಸರಿಯಾದ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಇಂತಹ ಅನೇಕ ಘಟನೆಗಳು ಮೌಲ್ಯಾಧಾರಿತ ಶಿಕ್ಷಣದ ಅತ್ಯವಶ್ಯಕತೆ ಸಾರುತ್ತಿದೆ‌ ಎಂದರು.

ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅಷ್ಟೇ ವೇಗದಲ್ಲಿ ಮೌಲ್ಯಗಳು ಕಳೆದುಕೊಳ್ಳುತ್ತಿದೆ. ಮೌಲ್ಯಗಳಿಲ್ಲದ ಶಿಕ್ಷಣ ಚುಕ್ಕಾಣಿಯಿಲ್ಲದ ಹಡಗಿನಂತೆ. ಉದ್ಯೋಗ ನೀಡುವ ಶಿಕ್ಷಣವಷ್ಟೆ ಸಮಾಜಕ್ಕೆ ಬೇಕಾಗಿಲ್ಲ. ಮೌಲ್ಯಗಳನ್ನು ಬಿತ್ತುವ ಜವಾಬ್ದಾರಿ ಶಿಕ್ಷಕರು ವಿದ್ಯಾಸಂಸ್ಥೆಗಳ ಮೇಲಿದ್ದು, ಕ್ರಿಯಾಶೀಲತೆ ಉನ್ನತಿಕರಿಸುವ ಯಾವುದೇ ಪೂರಕ ವೇದಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಿ ಎಂದು ಹೇಳಿದರು.

ರಾಷ್ಟ್ರದ ಸಂಪತ್ತು ಕೆಲವರಿಗೆ ಮಾತ್ರ ಅನುಭವಿಸಲು ಸಿಗುತ್ತಿದೆ. ಜಾತಿ ಧರ್ಮ ಸಮುದಾಯದ ಬೇಧವಿಲ್ಲದೆ ಆ ಸಂಪತ್ತು ಸರಿಸಮಾನವಾಗಿ ಎಲ್ಲರಿಗೂ ಹಂಚಿಕೆಯಾಗಬೇಕು. ಅದುವೇ ಸಂವಿಧಾನದ ಮೂಲ ಆಶಯವಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಇತರರಿಗಿಂತ ಭಿನ್ನ. ಕಾರಣ ಸಮಾಜದ ಅನೇಕ ಸ್ಥರಗಳ ಬದಲಾವಣೆ ಮಾಡುವ ಜವಾಬ್ದಾರಿ ಕಾನೂನು ವಿದ್ಯಾರ್ಥಿಗಳ ಮೇಲಿದೆ. ಕಾನೂನು ಪದವಿ ಪಡೆದು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುವ ಮುಕ್ತ ಅವಕಾಶಗಳಿದ್ದು, ವಿದ್ಯಾರ್ಥಿ ಸಂಘಗಳಿಂದ ಕಲಿತ ಅನೇಕ ಸಮಾಜಮುಖಿ ವಿಚಾರಗಳನ್ನು ಸಮಾಜದ ಅಭ್ಯುದಯಕ್ಕೆ ಸಮರ್ಪಿಸಿ ಎಂದು ಹೇಳಿದರು.

ಎನ್ಇಎಸ್ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್. ರಾಮಚಂದ್ರ, ಐಕ್ಯೂಎಸಿ ಸಂಯೋಜಕರಾದ ಡಾ. ಎಸ್.ಕಾಂತರಾಜ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಅನಲ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ. ಬಿ.ಸಿ. ಬಸಪ್ಪ ಸ್ವಾಗತಿಸಿ, ಎಚ್‌.ಎಸ್‌.ಸೌಮ್ಯ ನಿರೂಪಿಸಿದರು.

- - -

-2ಎಸ್‌ಎಂಜಿಕೆಪಿ01:

ಸಮಾರಂಭವನ್ನು ಉದ್ಘಾಟಿಸಿ ಕರ್ನಾಟಕ ಕಾನೂನು ವಿವಿ ಕುಲಪತಿ ಡಾ. ಸಿ.ಬಸವರಾಜ್ ಮಾತನಾಡಿದರು.