ಕೋವಿಡ್‌ಗಿಂತಲೂ ಕ್ಯಾನ್ಸರ್ ಮಹಾಮಾರಿ ಭಯಾನಕ: ಡಾ.ನಿತೇಶ್

| Published : Feb 05 2024, 01:47 AM IST

ಸಾರಾಂಶ

ಜಾಗತಿಕವಾಗಿ ಮರಣಕ್ಕೆ ಕ್ಯಾನ್ಸರ್ ಪ್ರಮುಖವಾಗಿದೆ. 2020 ರಲ್ಲಿ ಒಂದು ಕೋಟಿಗೂ ಹೆಚ್ಚು ಸಾವುಗಳಿಗೆ ಕ್ಯಾನ್ಸರ್ ಕಾರಣವಾಗಿದೆ. ದೇಶದಲ್ಲಿ ಕಳೆದ ಎರಡು‌ ವರ್ಷಗಳಲ್ಲಿ ಸುಮಾರು 19 ರಿಂದ 20 ಲಕ್ಷ ಪ್ರಕರಣಗಳು ವರದಿಯಾಗಿದೆ. ತಂಬಾಕು ಬಳಕೆ, ದೀರ್ಘ ಕಾಲದ ಮದ್ಯಪಾನ, ಧೂಮಪಾನ, ಅನಾರೋಗ್ಯಕರ ಆಹಾರ ಅಭ್ಯಾಸಗಳು, ದೈಹಿಕ ವ್ಯಾಯಾಮದ ಕೊರತೆ ಮತ್ತು ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಇವೆಲ್ಲವೂ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಕನ್ನಡ ಪ್ರಭ ವಾರ್ತೆ ನಾಗಮಂಗಲ

ಕ್ಯಾನ್ಸರ್ ಎಂಬ ಮಹಾಮಾರಿ ಕೋವಿಡ್ ಗಿಂತಲೂ ಭಯಾನಕ ಎಂದು ಸಿಸಿಆರ್ ವೈಎನ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದ ಸಂಶೋಧನಾ ಅಧಿಕಾರಿ ಡಾ.ನಿತೇಶ್ ತಿಳಿಸಿದರು.

ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭಾರತೀಯ ಯುವ ರೆಡ್ ಕ್ರಾಸ್ ಘಟಕ ಹಾಗೂ ಸಿಸಿಆರ್ ವೈಎನ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸಹಯೊಗದೊಂದಿಗೆ ಶನಿವಾರ ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಹದಲ್ಲಿ ಕೆಲವು ಜೀವಕೋಶಗಳು ಅನಿಯಂತ್ರಿತವಾಗಿ ಅಭಿವೃದ್ಧಿ ಹೊಂದುವ ಮತ್ತು ದೇಹದ ಇತರ ಭಾಗಗಳಿಗೆ ಹರಡುವ ಸ್ಥಿತಿಯನ್ನು ಕ್ಯಾನ್ಸರ್ ಎನ್ನಲಾಗುವುದು. ದೇಹದಲ್ಲಿ ತಡವಾಗಿ ಗಮನಕ್ಕೆ ಬರುವ ಕ್ಯಾನ್ಸರ್ ಗೆ ಆರಂಭದಲ್ಲೇ ಚಿಕಿತ್ಸೆ ಕೊಡಿಸದಿದ್ದರೆ ಸಾವು ಖಂಡಿತ ಎಂದು ಎಚ್ಚರಿಸಿದರು.

ಜಾಗತಿಕವಾಗಿ ಮರಣಕ್ಕೆ ಕ್ಯಾನ್ಸರ್ ಪ್ರಮುಖವಾಗಿದೆ. 2020 ರಲ್ಲಿ ಒಂದು ಕೋಟಿಗೂ ಹೆಚ್ಚು ಸಾವುಗಳಿಗೆ ಕ್ಯಾನ್ಸರ್ ಕಾರಣವಾಗಿದೆ. ದೇಶದಲ್ಲಿ ಕಳೆದ ಎರಡು‌ ವರ್ಷಗಳಲ್ಲಿ ಸುಮಾರು 19 ರಿಂದ 20 ಲಕ್ಷ ಪ್ರಕರಣಗಳು ವರದಿಯಾಗಿದೆ. ತಂಬಾಕು ಬಳಕೆ, ದೀರ್ಘ ಕಾಲದ ಮದ್ಯಪಾನ, ಧೂಮಪಾನ, ಅನಾರೋಗ್ಯಕರ ಆಹಾರ ಅಭ್ಯಾಸಗಳು, ದೈಹಿಕ ವ್ಯಾಯಾಮದ ಕೊರತೆ ಮತ್ತು ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಇವೆಲ್ಲವೂ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ತಿಳಿಸಿದರು.

ವಿಶ್ವ ಕ್ಯಾನ್ಸರ್ ದಿನವನ್ನು ಕ್ಯಾನ್ಸರ್ ರೋಗ ಪತ್ತೆ, ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸುವ, ಜನರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಆಚರಿಸಲಾಗುತ್ತಿದೆ ಎಂದರು.

ಕ್ಯಾನ್ಸರ್ ತಡೆಗಟ್ಟಲು ಪ್ಲಾಸ್ಟಿಕ್, ತಂಬಾಕು ಉತ್ಪನ್ನ, ಆಲ್ಕೋಹಾಲ್ ಸೇವನೆ ತ್ಯಜಿಸಬೇಕು. ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳು ಮತ್ತು ಕಡಿಮೆ ಸಂಸ್ಕರಿಸಿದ ಮತ್ತು ಪೌಷ್ಟಿಕಾಂಶ ಆಹಾರವನ್ನು ಸೇವಿಸುವುದು ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ತೂಕದ ನಿರ್ವಹಣೆ ಮಾಡಬೇಕು ಎಂದರು.

ಡಾ.ಎ.ಟಿ ಸಿಂಧುಶ್ರೀ ಮಾತನಾಡಿ, ಕ್ಯಾನ್ಸರ್‌ನಲ್ಲಿ ಚರ್ಮದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಮೂತ್ರಪಿಂಡದ ಕ್ಯಾನ್ಸರ್‌ ಸೇರಿದಂತೆ ಸುಮಾರು ನೂರಕ್ಕಿಂತ ಹೆಚ್ಚು ವಿಧಗಳಿವೆ. ಆದರೆ ಭಾರತದಲ್ಲಿ ಬಾಯಿ, ಗರ್ಭಾಶಯ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತವೆ ಎಂದರು.

ಬಳಿಕ ಎಂ.ಕಾಂ ವಿಭಾಗದ ಹೆಣ್ಣುಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಅರಿವು ಮೂಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಆರ್.ಮೋಹನ್ ಕುಮಾರ್, ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕ ಎನ್.ಆರ್.ದೇವಾನಂದ್, ಸಿ.ಸಿ.ಆರ್.ವೈ.ಎನ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಕಚೇರಿ ಸಿಬ್ಬಂದಿ ಚೈತ್ರಾ, ಎಂ.ಕಾಂ.ವಿಭಾಗದ ಮುಖ್ಯಸ್ಥೆ ನವೇರಿಯಾ,‌ ಉಪನ್ಯಾಸಕಿ ಇಂಧುಶ್ರೀ,‌ ಪಲ್ಲವಿ ಸೇರಿದಂತೆ‌ ಹಲವರಿದ್ದರು.