ಸಾರಾಂಶ
- ಹೊನ್ನಾಳಿಯಲ್ಲಿ ಗ್ಯಾರಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ । ಅಧ್ಯಕ್ಷ ಗದ್ದಿಗೇಶ್ ಅಧ್ಯಕ್ಷತೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಗ್ಯಾರಂಟಿ ಯೋಜನಾ ಅಧ್ಯಕ್ಷ ಎಚ್.ಎ.ಗದ್ದಿಗೇಶ್ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಪಂಚ ಗ್ಯಾರಂಟಿ ಯೋಜನೆಗಳ ವ್ಯಾಪ್ತಿಗೆ ಒಳಪಡುವ ಯೋಜನೆ ಅನುಷ್ಠಾನ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿ, ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಪ್ರಗತಿ ಪರಿಸೀಲನಾ ವರದಿಗಳನ್ನು ಪ್ರಸ್ತುತಪಡಿಸಿದರು.ಸಭೆ ಆರಂಭದಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಅಧಿಕಾರಿ ಜ್ಯೋತಿ ಮಾಹಿತಿ ನೀಡಿ, ಈ ಯೋಜನೆಯಡಿ 36483 ಫಲಾನುಭವಿಗಳು ನೋಂದಣೆಯಾಗಿದ್ದಾರೆ. ಈ ಪೈಕಿ ಹಣ ಪಾವತಿ ಆಗಿರುವವರ ಸಂಖ್ಯೆ 35445. ಉಳಿದ 3253 ಫಲಾನುಭವಿಗಳು ಜಿ.ಎಸ್.ಟಿ., ಆದಾಯ ತೆರಿಗೆ ಪಾವತಿದಾರರು ಸೇರಿದಂತೆ ವಿವಿಧ ಕಾರಣಗಳಿಂದ ಯೋಜನೆಯಿಂದ ಹೊರಗೆ ಉಳಿದಿದ್ದಾರೆ. ಯಾರು ಈ ಯೋಜನೆ ವ್ಯಾಪ್ತಿಗೆ ಬರುವುದಿಲ್ಲವೋ ಅಂತಹವರಿಗೆ ಅಧಿಕಾರಿಗಳು ಹಿಂಬರಹ ನೀಡಬಹುದು ಎಂದು ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಯೋಜನೆ ಅರಂಭಗೊಂಡಾಗಿನಿಂದ ಜೂನ್ 2025ರವರೆಗೆ ಫಲಾನುಭವಿಗಳಿಗೆ ಪಾವತಿಯಾದ ಮೊತ್ತ ₹1433260000.00 ಎಂದ ಅವರು, 2023ರಿಂದ ಇಲ್ಲಿಯವರೆಗೆ ಮರಣ ಹೊಂದಿದ ಫಲಾನುಭವಿಗಳ ಸಂಖ್ಯೆ 408 ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಗಳೋಂದಾಗ ಯುವ ನಿಧಿ ಯೋಜನೆಯಲ್ಲಿ ಒಟ್ಟು ಫಲಾನುಭವಿಗಳು 5691 ಇದ್ದು, ಇದರಲ್ಲಿ ಪದವಿಧರರ ಸಂಖ್ಯೆ5604 ಇವರಿಗೆ ಮಾಹೆಯಾನ ₹.3 ಸಾವಿರ,87 ಜನ ಡಿಪ್ಲೋಮಾ ದವರು ಇವರಿಗೆ ಪ್ರತಿ ತಿಂಗಳು ₹1500 ರಂತೆ ಯುವನಿಧಿ ಯೋಜನೆಯಡಿ ಹಣ ಪಾವತಿ ಮಾಡಲಾಗುವುದು ಇದರಂತೆ ಒಟ್ಟು. ₹16942500.00 ಹಣ ಪಾವತಿಯಾಗಿದೆ ಎಂದರು.ಅನ್ನಭಾಗ್ಯ ಯೋಜನೆ ಕುರಿತು ವಿಷಯ ಪ್ರಸ್ತಾಪ ಆಗುತ್ತಿದ್ದಂತೆ ಸಭೆಯಲ್ಲಿದ್ದ ಗ್ಯಾರಂಟಿ ಯೋಜನೆಯ ಸದಸ್ಯರು ಗ್ರಾಮೀಣ ಪ್ರದೇಶಗಳಲ್ಲಿ ನ್ಯಾಯಾಬೆಲೆ ಅಂಗಡಿಗಳಲ್ಲಿ ನಿಗದಿತ ಪ್ರಮಾಣದ ಅಕ್ಕಿಗಿಂತ 1 ಅಥವಾ 2 ಕೆ.ಜಿ. ಅಕ್ಕಿಯನ್ನು ಕಡಿಮೆ ಕೂಡುತ್ತಿರುವ ಬಗ್ಗೆ ಸಾರ್ವಜನಿಕರು ತಮ್ಮ ಬಳಿ ದೂರುತ್ತಿದ್ದಾರೆ ಎಂದರು. ಆಗ ಅಹಾರ ಇಲಾಖೆ ಶಿರಸ್ತೇದಾರ ಸಂಜಯ್ ಮಾತನಾಡಿ, ಯಾವುದೇ ಕಾರಣಕ್ಕೂ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಅಕ್ಕಿ ಕೊಡುವಂತಿಲ್ಲ. ಆ ರೀತಿಯಾಗಿ ಯಾವ ನ್ಯಾಯ ಬೆಲೆ ಅಂಗಡಿಯವರು ಕಡಿಮೆ ಕೂಡುತ್ತಿದ್ದಾರೆ ಎನ್ನುವ ಬಗ್ಗೆ ಲಿಖಿತ ದೂರು ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಬಿ.ಪಿ.ಎಲ್, ಎ.ಎ.ವೈ. ಕಾರ್ಡುಗಳಲ್ಲಿ 713 ಕಾರ್ಡುಗಳು ಎ.ಪಿ.ಎಲ್. ಆಗಿ ಪರಿವರ್ತನೆಯಾಗಿವೆ. ಇನ್ನು 22 ಬಿಪಿಎಲ್ ಕಾರ್ಡುಗಳು ವಿವಿಧ ಕಾರಣಗಳಡಿ ರದ್ದಾಗಿವೆ ಎಂದು ಸಭೆಗೆ ಮಾಹಿತಿ ನೀಡಿದರು.ಈ ಸಂದರ್ಭ ಗ್ಯಾರಂಟಿ ಯೋಜನಾ ಅನುಷ್ಠಾನ ಅಧ್ಯಕ್ಷ ಗದ್ದಿಗೇಶ್ ಮಾತನಾಡಿ, ಮುಂದಿನ ಸಭೆ ವೇಳೆ ನ್ಯಾಯಬೆಲೆ ಅಂಗಡಿಗಳ ಮಾಲೀಕರನ್ನು ಸಭೆಗೆ ಕರೆಯಿಸೋಣ. ಆಗ ಈ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.
ಇನ್ನು ಶಕ್ತಿ ಯೋಜನೆ ಕುರಿತು ಸಾರಿಗೆ ಇಲಾಖೆ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿ, ಯೋಜನೆ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ 1,09,21,539 ಜನ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದಾರೆ ಎಂದು ಹೇಳಿದರು. ಗೃಹ ಜ್ಯೋತಿಗೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿ ಜಯಪ್ಪ ಮಾಹಿತಿ ನೀಡಿ, ಜುಲೈ 2025 ರವರೆಗೆ ನೋಂದಣೆ ಆಗಿರುವುದು 37962, ಅರ್ಹ ಫಲಾನುಭವಿಗಳು 37685 ಇದ್ದಾರೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ಕಚೇರಿ ವ್ಯವಸ್ಥಾಪಕ ರಫೀಕ್, ಭೋಜಾ ಹಾಗೂ ಗ್ಯಾರಂಟಿ ಯೋಜನಾ ಸಮಿತಿ ಸದಸ್ಯರು ಹಾಜರಿದ್ದರು.
- - --26ಎಚ್.ಎಲ್.ಐ2.:
ಹೊನ್ನಾಳಿ ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಭದಲ್ಲಿ ಶುಕ್ರವಾರ ಸರ್ಕಾರದ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಚ್.ಎ. ಗದ್ದಿಗೇಶ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.