ಚನ್ನಪಟ್ಟಣ: ಸರ್ಕಾರ ಗ್ಯಾರಂಟಿ ಕೊಡುತ್ತದೆ ಆದರೆ, ರೈತರಿಗೆ ಬೆಳೆ ಗ್ಯಾರಂಟಿ ಇಲ್ಲವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಸಂಕಷ್ಟಕ್ಕೀಡಾಗಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭೇಟಿ ಮಾಡಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ರಾಮನಗರ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ತಾಂಡವವಾಡುತ್ತಿದೆ. ಜಿಲ್ಲೆಗೆ ೧೨೦ ಕಿಲೋ ಮೀಟರ್‌ ರೈಲ್ವೆ ಬ್ಯಾರಿಕೇಡ್ ಬೇಕಿದೆ. ಆದರೆ ಬಜೆಟ್‌ನಲ್ಲಿ ಕಾಡಾನೆ ನಿಯಂತ್ರಣಕ್ಕೆ ಕೊಟ್ಟಿರುವ ಹಣ ಯಾವುದಕ್ಕೂ ಸಾಲದಾಗಿದೆ. ಸರ್ಕಾರ ಇಡೀ ರಾಜ್ಯಕ್ಕೆ ಮೀಸಲಿಟ್ಟಿರುವುದು ಕೇವಲ ೨೬೦ ಕೋಟಿ ರು. ಮಾತ್ರ ಎಂದು ತಿಳಿಸಿದರು.

ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಸ್ಥಳೀಯ ಶಾಸಕರು ಅಸಹಾಯಕರಾಗಿದ್ದಾರೆ. ಅರಣ್ಯ ಸಚಿವರನ್ನು ಇಲ್ಲಿಗೆ ಕರೆತರುವ ಕೆಲಸ ಆಗಿಲ್ಲ. ಈ ಜಿಲ್ಲೆಯನ್ನು ಸ್ವತಃ ಉಪ ಮುಖ್ಯಮಂತ್ರಿಗಳೇ ಪ್ರತಿನಿಧಿಸುತ್ತಿದ್ದರೂ ರೈತರಿಗೆ ರಕ್ಷಣೆ ಸಿಕ್ಕಿಲ್ಲ. ಆದರೆ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಕೇಂದ್ರ ಅರಣ್ಯ ಸಚಿವರನ್ನು ಕರೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಬೆಳೆ ಗ್ಯಾರಂಟಿ ಇಲ್ಲ:

ರಾಜ್ಯ ಸರ್ಕಾರದ ಅರಣ್ಯ ಸಚಿವರನ್ನು ಇಲ್ಲಿಗೆ ಕರೆತರುವ ಕೆಲಸ ಆಗುತ್ತಿಲ್ಲ. ಇಲ್ಲಿಗೆ ಬಂದು ರೈತರ ಕಷ್ಟ ಕೇಳುವ ಸೌಜನ್ಯವೂ ಸಚಿವರಿಗೆ ಇಲ್ಲ. ನಿತ್ಯ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರ ''''''''ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ'''''''' ಎನ್ನುತ್ತದೆ, ಆದರೆ ಅನ್ನದಾತರಿಗೆ ಯಾವ ಗ್ಯಾರಂಟಿಯೂ ಇಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಈ ಸಮಸ್ಯೆಗಳ ಬಗ್ಗೆ ಗಮನಹರಿಸಲು ಸಮಯವೇ ಇಲ್ಲ ಎಂದು ಕಿಡಿಕಾರಿದರು.


ರೈತರ ಈ ನ್ಯಾಯಯುತ ಹೋರಾಟಕ್ಕೆ ಪಕ್ಷತೀತವಾಗಿ ನಮ್ಮ ಸಂಪೂರ್ಣ ಬೆಂಬಲವಿದೆ. ಈ ಸರ್ಕಾರಕ್ಕೆ ರೈತರ ಕುರಿತು ಕಿಂಚಿತ್ತು ಕಾಳಜಿ ಇದ್ದರೆ ಈ ಕೂಡಲೇ ಎಚ್ಚೆತ್ತು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಆಗ್ರಹಿಸಿದರು.

ಇದೇ ವೇಳೆ ರೈತರು ಕಾಡಾನೆ ದಾಳಿಯಿಂದ ಆಗುತ್ತಿರುವ ಸಮಸ್ಯೆ ಹಾಗೂ ಹಾನಿ ಕುರಿತು ಅಳಲುತೋಡಿಕೊಂಡರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡರಾದ ಕುಕ್ಕೂರುದೊಡ್ಡಿ ಜಯರಾಮು, ಬೋರೆಗೌಡ ಸೇರಿದಂತೆ ಹಲವು ಉಪಸ್ಥಿತರಿದ್ದರು.

ಬಾಕ್ಸ್..........

ಕೇಂದ್ರ ಅರಣ್ಯ ಸಚಿವರೊಡಗೆ ವಿಸ್ತೃತ ಚರ್ಚೆ: ಎಚ್‌ಡಿಕೆ

ಚನ್ನಪಟ್ಟಣ: ರೈತರು ಬೀದಿಗೆ ಬಂದು ಕೂರುವುದು ನಮಗೆ ಇಷ್ಟವಿಲ್ಲ. ನಿಮ್ಮ ನೋವು, ಸಂಕಷ್ಟ ನನಗೆ ಸಂಪೂರ್ಣವಾಗಿ ಅರ್ಥವಾಗಿದೆ. ಶೀಘ್ರದಲ್ಲೇ ಕೇಂದ್ರ ಅರಣ್ಯ ಸಚಿವರನ್ನು ಕರ್ನಾಟಕಕ್ಕೆ ಕರೆತಂದು, ರಾಜ್ಯದ ಕಾಡಾನೆ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸುತ್ತೇನೆ. ದಯವಿಟ್ಟು ಪ್ರತಿಭಟನೆ ಕೈಬಿಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರೈತರಿಗೆ ಮನವಿ ಮಾಡಿದರು.

ಪ್ರತಿಭಟನಾ ಸ್ಥಳದಲ್ಲಿದ್ದ ನಿಖಿಲ್ ಕುಮಾರಸ್ವಾಮಿ ಅವರ ಮೊಬೈಲ್‌ಗೆ ಕರೆ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಲೌಡ್‌ ಸ್ಪೀಕರ್ ಮೂಲಕ ರೈತರೊಂದಿಗೆ ಮಾತನಾಡಿದ ಅವರು, ತಕ್ಷಣಕ್ಕೆ ಅರಣ್ಯ ಇಲಾಖೆಗೆ ತಾತ್ಕಾಲಿಕ ಕ್ರಮಕ್ಕೆ ಸೂಚಿಸಿದ್ದೇನೆ. ಈ ಬಿಸಿಲಿನಲ್ಲಿ ಪ್ರತಿಭಟನೆ ಬೇಡ, ದಯವಿಟ್ಟು ಕೈಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತರು ತಮ್ಮ ಅಹೋರಾತ್ರಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಬಾಕ್ಸ್...............

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ್ದು ಖಂಡನೀಯ: ನಿಖಿಲ್

ಚನ್ನಪಟ್ಟಣ: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಘಟನೆಯನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳು ವಿಷಾದನೀಯ. ಕಳೆದ ವರ್ಷವೂ ಇದೇ ರೀತಿಯ ಘಟನೆ ನಡೆದಿತ್ತು. ಈಗಲೂ ಅಂತಹದ್ದೇ ಘಟನೆ ಮರು ಕಳಿಸೋದು ಈ ಸರ್ಕಾರದ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐವರು ವಿದ್ಯಾರ್ಥಿಗಳ ಜನಿವಾರ ತೆಗೆಸಿರೋದು ಖಂಡನೀಯ. ವಿದ್ಯಾರ್ಥಿಗಳಲ್ಲಿ ಒಡಕು ಮೂಡಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪೊಟೋ೨೪ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ರೈತರ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.