ಪಂಚ ಗ್ಯಾರಂಟಿ ಯೋಜನೆಗಳಿಂದ ಶಿವಮೊಗ್ಗ ಜಿಲ್ಲೆಗೆ 3023.95 ಕೋಟಿ ರು.ಹಣವನ್ನು ಕಾಂಗ್ರೆಸ್ ಸರ್ಕಾರ ವೆಚ್ಚ ಮಾಡುವ ಮುಖಾಂತರ ಜಿಲ್ಲೆಯ ಜನತೆಗೆ ಬದುಕಿನ ಗ್ಯಾರಂಟಿಯನ್ನು ನೀಡಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದರು.
ಶಿವಮೊಗ್ಗ: ಪಂಚ ಗ್ಯಾರಂಟಿ ಯೋಜನೆಗಳಿಂದ ಶಿವಮೊಗ್ಗ ಜಿಲ್ಲೆಗೆ 3023.95 ಕೋಟಿ ರು.ಹಣವನ್ನು ಕಾಂಗ್ರೆಸ್ ಸರ್ಕಾರ ವೆಚ್ಚ ಮಾಡುವ ಮುಖಾಂತರ ಜಿಲ್ಲೆಯ ಜನತೆಗೆ ಬದುಕಿನ ಗ್ಯಾರಂಟಿಯನ್ನು ನೀಡಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಗ್ಯಾರಂಟಿಗಳಿಗಾಗಿ ರಾಜ್ಯ ಸರ್ಕಾರ ಇದುವರೆಗೂ 1 ಲಕ್ಷದ 10 ಸಾವಿರ ಕೋಟಿ ರು. ಹಣ ವ್ಯಯಿಸಿದೆ. ಇದರಿಂದ ರಾಜ್ಯದ ತಲಾದಾಯ ಹೆಚ್ಚಲು ಸಹಕಾರಿಯಾಯಿತು ಎಂದರು.2013-14ರಲ್ಲಿ ರಾಜ್ಯದ ತಲಾದಾಯ 1,05,000 ರು.ಗಳಷ್ಟಿತ್ತು. ಕಳೆದ ಮೂರು ತಿಂಗಳ ಹಿಂದೆ ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ರಾಜ್ಯದ ತಲಾದಾಯ 2,04,485 ರು.ಗಳಿಗೆ ಏರಿಕೆಯಾಗಿದೆ. ಇದಕ್ಕೆ ಗ್ಯಾರಂಟಿಗಳೇ ಪ್ರಮುಖ ಕಾರಣ. ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಭರವಸೆ, ಭದ್ರತೆ ಮತ್ತು ಗೌರವವನ್ನು ತರಲು ನೆರವಾಗಿವೆ. ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಇದು ಒಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಸಾಮಾನ್ಯ ಜನರ ದಿನನಿತ್ಯದ ಬದುಕಿಗೆ ನೇರ ಸ್ಪರ್ಶ ನೀಡಿವೆ. 1,24,10,685 ಮಹಿಳೆಯರಿಗೆ ಪ್ರತಿ ತಿಂಗಳು 2500 ಕೋಟಿ ರು. ಹಣವನ್ನು ನೇರವಾಗಿ ಅವರ ಖಾತೆಗೆ ಹಾಕಲಾಗುತ್ತಿದೆ. ಇದುವರೆಗೆ ಗೃಹಲಕ್ಷ್ಮಿ ಯೋಜನೆಯಡಿ 57,381 ಕೋಟಿ ರು. ಹಣವನ್ನು ಸರ್ಕಾರ ಪಾವತಿಸುವ ಮೂಲಕ ಪ್ರತಿ ಮಹಿಳೆಗೆ 48 ಸಾವಿರ ಗೃಹಲಕ್ಷ್ಮಿ ಹಣ ತಲುಪಿದೆ ಎಂದು ಮಾಹಿತಿ ನೀಡಿದರು.ಗೃಹಜ್ಯೋತಿ ಯೋಜನೆಯಡಿ 21,500 ಕೋಟಿ, ಅನ್ನಭಾಗ್ಯ ಯೋಜನೆಯಡಿ 18 ಸಾವಿರ ಕೋಟಿ ರು., ಯುವನಿಧಿ ಯೋಜನೆಯಡಿ 800 ಕೋಟಿ ರು.ಹಣವನ್ನು ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ 656 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದರ ಟಿಕೆಟ್ ಮೌಲ್ಯ 17 ಸಾವಿರ ಕೋಟಿ ರು.ಗಳನ್ನು ಸಾರಿಗೆ ನಿಗಮಗಳಿಗೆ ಸರ್ಕಾರ ಭರಿಸಿದೆ. ದರ ಏರಿಕೆ, ಉದ್ಯೋಗ ಅಸ್ಥಿರತೆ ಮತ್ತು ಆದಾಯ ಅಸಮಾನತೆಗಳ ನಡುವೆ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಈ ಯೋಜನೆಗಳು ಆರ್ಥಿಕ ಭರವಸೆಯಾಗಿ ಪರಿಣಮಿಸಿವೆ ಎಂದರು.
ಡಿಪೋಗಳ ಸ್ಥಾಪನೆಗೆ ಚರ್ಚೆ:ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಹಾವಳಿ ಹೆಚ್ಚಾಗಿದ್ದು, ಸರ್ಕಾರಿ ಬಸ್‌ಗಳು ಸಕಾಲಕ್ಕೆ ಬರುತ್ತಿಲ್ಲ. ಇದರಿಂದ ಶಕ್ತಿ ಯೋಜನೆಗೆ ಹಿನ್ನಡೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಅಧಿಕಾರಿಗಳು ಕೂಡಲೇ ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಸೊರಬ, ತೀರ್ಥಹಳ್ಳಿ, ಹೊಸನಗರದಲ್ಲಿ ಡಿಪೋಗಳ ಸ್ಥಾಪನೆ ಸಂಬಂಧ ಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಜಿಪಂ ಸಿಇಒ ಎನ್. ಹೇಮಂತ್ ಮಾತನಾಡಿ, ಬಸ್‌ಗಳ ಓಡಾಟದಲ್ಲಿ ತೊಂದರೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಸೊರಬ, ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಬಸ್‌ಗಳು ಸಕಾಲದಲ್ಲಿ ಸಂಚರಿಸುತ್ತಿಲ್ಲ ಎಂಬ ದೂರುಗಳು ವ್ಯಕ್ತವಾಗುತ್ತಿವೆ. ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು, ಸಮಿತಿ ಸಭೆಗೆ ಅಧಿಕಾರಿಗಳು ತಪ್ಪದೆ ಹಾಜರಾಗಬೇಕೆಂದು ಸೂಚಿಸಿದರು.ಗೃಹಜ್ಯೋತಿ ಯೋಜನೆಯಡಿ ನೋಂದಾಯಿತ ಫಲಾನುಭವಿಗಳು ಮನೆ ಬಳಕೆಗೆ ಮಾತ್ರ ವಿದ್ಯುತ್ ಬಳಕೆ ಮಾಡಬೇಕು. ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಕಂಡುಬಂದರೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸೂಚೆನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜಪ್ಪ, ಶಿವಣ್ಣ, ಇಕ್ಕೇರಿ ರಮೇಶ್, ಹಾಗೂ ಜಿಲ್ಲಾ, ತಾಲೂಕುಮಟ್ಟದ ಸದಸ್ಯರು ಉಪಸ್ಥಿತರಿದ್ದರು.