ಸಾರಾಂಶ
ಶಹಾಪುರ ತಾಪಂ ಕಚೇರಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೂತನ ಕಚೇರಿಯನ್ನು ಉದ್ಘಾಟನೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಶಹಾಪುರ
ಇಲ್ಲಿನ ತಾಪಂ ಕಚೇರಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೂತನ ಕಚೇರಿಯನ್ನು ಇತ್ತೀಚೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಅವರು ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ಶಕ್ತಿ ಯೋಜನೆ, ಮನೆಯ ಒಡತಿಗೆ ₹2000 ನೀಡುವ ಗೃಹ ಲಕ್ಷ್ಮೀ ಯೋಜನೆ, ಗೃಹಜ್ಯೋತಿ, ಉಚಿತ ವಿದ್ಯುತ್ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಜಾರಿಗೆ ತಂದಿರುವ ಸರ್ಕಾರ ಈ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಮಿತಿ ರಚಿಸುವ ಮೂಲಕ ಒಂದು ಮಹತ್ವದ ಹೆಜ್ಜೆ ಇಟ್ಟಿದೆ ಎಂದರು.
ರಾಜ್ಯ ಮಟ್ಟದಲ್ಲಿ ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.ತಾಲೂಕು ಮಟ್ಟದ ಸದಸ್ಯರಾದ ರಮೇಶ್ ಗುರಿಕಾರ ಕಕ್ಕಸಗೇರಾ, ಮೌನೇಶ್ ಶೇಟ್ಟಿಕೇರಾ, ಹುಸೇನ್ ಭಾಷಾ ಹೋತಪೇಠ್, ತಾಯಮ್ಮ ದೋರನಳ್ಳಿ, ವಿಜಯ ಕುಮಾರ ರಾಠೋಡ, ಶರಣಗೌಡ ಅಣಬಿ, ರಾಯಪ್ಪ ಹೊಸ್ಮನಿ ಗಂಗನಾಳ, ಬಸ್ಸಣ್ಣ ಮಲ್ಲಯ್ಯ ಭಂಗಿ ಸೇರಿದಂತೆ ಇತರರಿದ್ದರು.