ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಲೋಕಸಭಾ ಚುನಾವಣೆ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ತಮ್ಮ ಕರ್ತವ್ಯ ವಿಭಾಯಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಸೂಚಿಸಿದರು.ಲೋಕಸಭಾ ಚುನಾವಣೆಗೆ ನಿಯೋಜಿಸಿದ್ದ ನೋಡಲ್ ಅಧಿಕಾರಿಗಳೊಂದಿಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
ಈಗಾಗಲೇ ನಿಯೋಜಿಸಿದ ತಂಡಗಳ ಅಧಿಕಾರಿಗಳು ಸರ್ವರೀತಿಯಲ್ಲಿ ಸನ್ನದ್ಧಗೊಂಡು ತಮ್ಮ ಕರ್ತವ್ಯಕ್ಕೆ ಸಂಬಂಧಿಸಿದ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಚುನಾವಣಾ ಕಾರ್ಯ ಅನುಷ್ಠಾನಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರರು, ಎಸ್.ಎಸ್.ಟಿ ಎಫ್‌ಎಸ್‌ಟಿ, ವಿಎಸ್‌ಟಿ, ವಿವಿಟಿ ಹಾಗೂ ಇತರೆ ತಂಡಗಳು, ತಕ್ಷಣ ಕ್ರಿಯಾಶೀಲರಾಗಬೇಕು, ಚುನಾವಣೆ ಘೋಷಿಸಿದ ತಕ್ಷಣ 24 ಗಂಟೆಯೊಳಗೆ, 48 ಹಾಗೂ 72 ಗಂಟೆಯೊಳಗೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮ ತಕ್ಷಣ ಕೈಗೊಳ್ಳಬೇಕು. ರಿಪೋರ್ಟಿಂಗ್ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ, ನಿಗಾ ಇಡಬೇಕು. ಕಾನೂನು ಸುವ್ಯವಸ್ಥೆ ಕಾಪಡಲು ಕ್ರಮ, ಮತದಾನ ಕೇಂದ್ರಗಳಿಗೆ ಕನಿಷ್ಠ ಮೂಲ ಸೌಕರ್ಯ ತಕ್ಷಣ ಕಲ್ಪಿಸಬೇಕು. ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಅನುಮತಿ ಇಲ್ಲದೇ ಯಾವೋಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ಕೇಂದ್ರಸ್ಥಾನ ಬಿಡದಿರಲು ತಿಳಿಸಿದರು.ಜಿಪಂ ಸಿಇಓ ಗರಿಮಾ ಪನ್ವಾರ ಅವರು ಆಯಾ ಮತದಾನ ಕೇಂದ್ರಗಳಿಗೆ ತಕ್ಷಣ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತೀವ್ರ ನಿಗಾ ಇಡಲು ಸಂಬಂಧಿಸಿದ ತಂಡಗಳಿಗೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಕಾನೂನು ಸುವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ತೀವ್ರ ನಿಗಾ ಇಡಲಾಗಿದೆ ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿಭಾಯಿಸುವಂತೆ ಹೇಳಿದರು.
ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಎಲ್ಲ ಚೆಕ್‌ಪೋಸ್ಟ್ ಸುಸ್ಥಿತಿಯಲ್ಲಿಡಲು, ಕ್ಷೇತ್ರ ಮಟ್ಟದ ಭೇಟಿ ಚುರುಕುಗೊಳಿಸಲು, ಅಧಿಕಾರಿಗಳ ಮಧ್ಯ ಸಮನ್ವಯತೆ ಇರಬೇಕು. ರಿಪೋರ್ಟಿಂಗ್ ಸರಿಯಾಗಿ ಆಗಬೇಕು. ಮೊಬೈಲ್ ಆನ್ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಚುನಾವಣಾ ತಹಸೀಲ್ದಾರ್ ಸಂತೋಷರಾಣಿ ಇದ್ದರು.