ಗುರುಮಠಕಲ್: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

| Published : Aug 18 2024, 01:57 AM IST

ಸಾರಾಂಶ

Gurumatkal: Election for Municipal President, Vice President

-2ನೇ ಅವಧಿಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಪ್ರಕಟ । ಮೈತ್ರಿ ಅಭ್ಯರ್ಥಿಗೆ ಮಣೆ, ಪುರಸಭೆ ಅಧ್ಯಕ್ಷರ ಆಯ್ಕೆ ಅವಿರೋಧ ಸಾಧ್ಯತೆ ?

--------

ಮೊಗುಲಪ್ಪ ಬಿ. ನಾಯಕಿನ್

ಕನ್ನಡಪ್ರಭ ವಾರ್ತೆ ಗುರುಮಠಕಲ್

ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ 2ನೇ ಅವಧಿಗಾಗಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ ಸಾಧ್ಯತೆಯಿದ್ದು, ಉಪಾಧ್ಯಕ್ಷ ಪಟ್ಟಕ್ಕಾಗಿ ಪೈಪೋಟಿ ನಡೆದಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಗುರುಮಠಕಲ್ ನಲ್ಲಿಯೂ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿಯೂ ಮುಂದುವರೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪಟ್ಟಣದಲ್ಲಿ ಒಟ್ಟು 23 ಪುರಸಭೆ ಸದಸ್ಯರ ಪೈಕಿ, ಕಾಂಗ್ರೆಸ್ ಸದಸ್ಯರು 12, ಜೆಡಿಎಸ್ ಸದಸ್ಯರು 8 ಜನ, ಬಿಜೆಪಿ ಇಬ್ಬರು ಹಾಗೂ ಒಬ್ಬರು ಸ್ವತಂತ್ರ ಸದಸ್ಯರು ಇದ್ದಾರೆ.

ಕಳೆದ ಬಾರಿ ಮಾಜಿ ಶಾಸಕ ದಿ. ನಾಗನಗೌಡ ಕಂದಕೂರು ಮತ್ತು ಹಾಲಿ ಶಾಸಕರಾದ ಶರಣಗೌಡ ಕಂದಕೂರು ಅವರ ಚಾಣಾಕ್ಷತನದಿಂದ ಜೆಡಿಎಸ್ ಪಕ್ಷಕ್ಕೆ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬೇಕಾಗಿರುವ ಬೆಂಬಲ ಇಲ್ಲದಿದ್ದರೂ ಬಿಜೆಪಿ ಮತ್ತು ಸ್ವತಂತ್ರ ಸದಸ್ಯರು ಹಾಗೂ ಮೂವರು ಬಂಡಾಯ ಕಾಂಗ್ರೆಸ್ ಸದಸ್ಯರ ಬೆಂಬಲದಿಂದ ವಶಪಡಿಸಿಕೊಂಡಿತ್ತು.

2ನೇ ಅವಧಿಯಲ್ಲಿ ಅಧ್ಯಕ್ಷಕ್ಕಾಗಿ (ಬಿಸಿಬಿ) ಮಹಿಳೆ ಮೀಸಲಾತಿ ಬಂದಿದೆ. ಸಹಜವಾಗಿ ಬೇರೆ ಪಕ್ಷದಲ್ಲಿ (ಬಿಸಿಬಿ) ಮಹಿಳೆ ಸದಸ್ಯರು ಇಲ್ಲದಿರುವುದರಿಂದ ಜೆಡಿಎಸ್ ನಲ್ಲಿ ಮಾತ್ರ ಒಬ್ಬರೇ ಇರುವುದರಿಂದ ಸಹಜವಾಗಿ ಪುರಸಭೆ ಅಧ್ಯಕ್ಷ ಪಟ್ಟ ಜೆಡಿಎಸ್ ಪಾಲಾಗಲಿದೆ.

ಉಪಾಧ್ಯಕ್ಷ ಸಾಮಾನ್ಯ ಮಹಿಳೆ ಮೀಸಲಾತಿ ಪ್ರಕಟಣೆಗೊಂಡಿದ್ದು, ಉಪಾಧ್ಯಕ್ಷ ಪಟ್ಟಕ್ಕಾಗಿ ಮೂರು ಪಕ್ಷಗಳಲ್ಲಿ ತೆರೆಮೆರೆಯ ಕಸರತ್ತು ನಡೆದಿದೆ. ಕಾಂಗ್ರೆಸ್ ಪಕ್ಷವು ಸರಳ ಬಹುಮತ ಹೊಂದಿದ್ದು, ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಕಾಂಗ್ರೆಸ್ ಸದಸ್ಯೆ ರೇಣುಕಾ ಪಡಿಗೆ ಪತಿ ವೀರಪ್ಪ ಪಡಿಗೆ ಇತ್ತೀಚೆಗೆ ಹೃದಯಘಾತದಿಂದ ಸಾವನ್ನಪ್ಪಿರುವುದರಿಂದ ಅನುಕಂಪ ಅಲೆ ಇದೆ. ಅವರ ಹೆಸರು ಸೂಚಿಸಿದರೆ ಕಳೆದ ಬಾರಿ ಬಂಡಾಯವೆದ್ದಿದ್ದ 3 ಜನ ಕಾಂಗ್ರೆಸ್ ಸದಸ್ಯರು ಪಕ್ಷಕ್ಕೆ ಜೈ ಎನ್ನುವ ಲಕ್ಷಣಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜೆಡಿಎಸ್ ಏಕಾಂಗಿಯಾಗಿ ಉಪಾಧ್ಯಕ್ಷ ಪಟ್ಟ ಗಿಟ್ಟಿಸಿಕೊಳ್ಳಲು ಆಗುವುದಿಲ್ಲ. ಬಿಜೆಪಿ ಮತ್ತು ಸ್ವತಂತ್ರ ಸದಸ್ಯರ ಬೆಂಬಲ ಬೇಕೇ ಬೇಕು. ಬಿಜೆಪಿಯಲ್ಲಿ ಇರುವ ಇಬ್ಬರು ಸದಸ್ಯರು ನವಿತಾ ಲಾಲಪ್ಪ ಮನ್ನೆ, ಲಕ್ಷ್ಮಿ ಬಾಯಿ ಚಂಧುಲಾಲ್ ಚೌಧರಿ ಮತ್ತು ಸ್ವತಂತ್ರ ಸದಸ್ಯ ನರ್ಮದಾ ಅವಂಗಪುರ ಮೂರು ಜನ ಮಹಿಳೆಯರಿದ್ದಾರೆ. ಇವರೆಲ್ಲರೂ ಉಪಾಧ್ಯಕ್ಷರು ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಮೈತ್ರಿ ಧರ್ಮ ಪಾಲನೆ ಆಗಬೇಕು ಎಂಬುದು ಬಿಜೆಪಿ ಮಹಿಳಾ ಸದಸ್ಯರ ಆಪೇಕ್ಷೆ ಆಗಿದೆ.

ಜೆಡಿಎಸ್ ನಲ್ಲಿ ಪ್ರೀತಿ ಬಾಯಿ ಅಂಬದಾಸ್ ಜಿತ್ರೆ ಮತ್ತು ಕಳೆದ ಬಾರಿ ಉಪಾಧ್ಯಕ್ಷೆ ಪಟ್ಟ ವಂಚಿತ ಗೊಂಡಿರುವ ಪವಿತ್ರಾ ಲಿಕ್ಕಿ ಮುಂಚೂಣಿಯಲ್ಲಿದ್ದಾರೆ.

ಶಾಸಕ ಶರಣಗೌಡ ಕಂದಕೂರು ಅವರ ಅಂಗಳದಲ್ಲಿ ಚೆಂಡು ಇದ್ದು, ಅವರು ಉಪಾಧ್ಯಕ್ಷ ಸ್ಥಾನವನ್ನು ತಮ್ಮ ಜೆಡಿಎಸ್ ಪಕ್ಷದಲ್ಲಿ ಉಳಿಸಿಕೊಳ್ಳುತ್ತಾರೋ? ಮೈತ್ರಿ ಪಕ್ಷಕ್ಕೆ ಬಿಟ್ಟು ಮೈತ್ರಿ ಧರ್ಮ ಪಾಲನೆ ಮಾಡುತ್ತಾರೋ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ವರೆಗೆ ಕಾದು ನೋಡಬೇಕಾಗಿದೆ.

ಫೋಟೊ.....

17ವೈಡಿಆರ್3: ಗುರುಮಠಕಲ್ ಪಟ್ಟಣದ ಪುರಸಭೆ ಕಾರ್ಯಾಲಯ