ಮುಡಾ ಹಗರಣ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಸಂಸದ ಗೋವಿಂದ ಕಾರಜೋಳ ಆಗ್ರಹ

| Published : Aug 18 2024, 01:57 AM IST / Updated: Aug 18 2024, 10:08 AM IST

ಸಾರಾಂಶ

ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು. 

 ಹಿರಿಯೂರು :  ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಬಂದಾಗಿನಿಂದಲೂ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ ಎಂದು ಕುಟುಕಿದರು.

ಬರೀ ಭ್ರಷ್ಟಾಚಾರದಲ್ಲೇ ಮುಳುಗಿದ್ದಾರೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಭೂ ಸ್ವಾಧೀನ ಮಾಡಿಕೊಂಡು ಪರಿಹಾರ ನೀಡಿದ ಮೇಲೂ ಡಿ ನೋಟಿಫಿಕೇಶನ್ ಆಗುವುದಾದರೂ ಹೇಗೆ? ಕೆಲವರಿಗೆ ಸೈಟ್ ಹಂಚಿಕೆಯಾದ ಮೇಲೆ ಮೊದಲು ಅಳಿಯನ ಹೆಸರಿಗೆ ನಂತರ ಹೆಂಡತಿಗೆ ದಾನ ಪತ್ರ ಮಾಡಲಾಗಿದೆ. 2013 ರಿಂದ 2018 ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ನಡೆದ ಹಗರಣಗಳ ಮುಚ್ಚಿಹಾಕಲು ಲೋಕಾಯುಕ್ತ ಅಧಿಕಾರ ಮೊಟಕುಗೊಳಿಸಿ ಎಸಿಬಿ ತಂದರು ಎಂದರು.

ಇದೀಗ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ಕೊಟ್ಟಮೇಲೆ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ನ್ಯಾಯ ಸಮ್ಮತವಲ್ಲ. ಅವರು ತಮ್ಮದು ಸ್ವಚ್ಛ ರಾಜಕಾರಣ ಎನ್ನುವುದಾದರೆ ಮೊದಲು ರಾಜೀನಾಮೆ ಕೊಡಲಿ. ಯಡಿಯೂರಪ್ಪನವರ ಮೇಲೆ ಆರೋಪ ಬಂದಾಗ ರಾಜೀನಾಮೆಗೆ ಒತ್ತಾಯಿಸಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ನೀಡಲಿ. ಸ್ವಯಂಕೃತ ಅಪರಾಧದಿಂದ ಸರ್ಕಾರ ಹೋಗುವ ಲಕ್ಷಣಗಳಿವೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಜಯಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್ ಹನುಮಂತರಾಯಪ್ಪ, ಕೆ. ಚಿದಾನಂದ, ಹೆಗ್ಗೆರೆ ಮಂಜುನಾಥ್, ರಾಜೇಂದ್ರ ಮುಂತಾದವರು ಹಾಜರಿದ್ದರು.