ಸಾರಾಂಶ
ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮಾಜಿ ಶಾಸಕ ಸುರೇಶ್‌ಗೌಡ, ಜೆಡಿಎಸ್ ಮುಖಂಡರಾದ ರಾಮಚಂದ್ರು, ರಘುನಂದನ್ ಸೇರಿದಂತೆ 24 ಮಂದಿ ಬಂಧನ, ಬಿಡುಗಡೆ. ಹಾಗೇ ಶ್ರೀಹನುಮ ಧ್ವಜ ಇಳಿಸಿದ ಪ್ರಕರಣ ಖಂಡಿಸಿ ಫೆ.9ರಂದು ಮಂಡ್ಯ ನಗರ ಬಂದ್ ಕರೆ ಬಜರಂಗದಳ ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆ ಹಾಗೂ ಬಂದ್‌ಗೆ ಕರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಮಾಡಿದ್ದ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕರು ಹಾಗೂ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದರು.ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮಾಜಿ ಶಾಸಕ ಸುರೇಶ್‌ಗೌಡ, ಜೆಡಿಎಸ್ ಮುಖಂಡರಾದ ರಾಮಚಂದ್ರು, ರಘುನಂದನ್ ಸೇರಿದಂತೆ 24 ಮಂದಿಯನ್ನು ಪೊಲೀಸರು ಬಂಧಿಸಿದರು.
ನಾಯಕರೊಟ್ಟಿಗೆ ಗ್ರಾಮಸ್ಥರು, ಹಿಂದೂಪರ ಸಂಘಟನೆ ಕಾರ್ಯಕರ್ತರು ಜೈಶ್ರೀರಾಮ್ ಘೋಷಣೆ ಕೂಗುತ್ತಾ ಧ್ವಜಸ್ತಂಭದತ್ತ ನುಗ್ಗಲು ಯತ್ನಿಸಿದ್ದಕ್ಕೆ ಪ್ರಚೋಧನೆ ನೀಡಿದ್ದರು. ಪೊಲೀಸರ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಕಾರಣ ಆರ್.ಅಶೋಕ್, ಅಶ್ವತ್ಥನಾರಾಯಣ ಇತರರನ್ನು ಬಂಧಿಸಲಾಯಿತು.ಬಂಧಿತ ನಾಯಕರನ್ನು ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಪರೇಡ್ ಮೈದಾನಕ್ಕೆ ಕರೆತಂದು ನಂತರ ಬಿಡುಗಡೆ ಮಾಡಿದರು.
ಬಿಗುವಿನ ವಾತಾವರಣ:ಹನುಮದ್ ಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಇನ್ನೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ತುಕಡಿಗಳು ಸೇರಿದಂತೆ ಹೆಚ್ಚಿನ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ.
ಸ್ಥಳದಲ್ಲಿ ಎಎಸ್ಪಿ ತಿಮ್ಮಯ್ಯಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟು ಪಿರಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಫೆ.9 ರಂದು ಮಂಡ್ಯ ನಗರ ಬಂದ್ , ಪಾದಯಾತ್ರೆಗೆ ನಿರ್ಧಾರ
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಶ್ರೀಹನುಮ ಧ್ವಜ ಇಳಿಸಿದ ಪ್ರಕರಣ ಖಂಡಿಸಿ ಫೆ.9ರಂದು ಮಂಡ್ಯ ನಗರ ಬಂದ್ ಕರೆ ಬಜರಂಗದಳ ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆ ಹಾಗೂ ಬಂದ್‌ಗೆ ಕರೆ ನೀಡಿವೆ.ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹನುಮ ಧ್ವಜವನ್ನು ತೆರವುಗೊಳಿಸಿದನ್ನು ವಿರೋಧಿಸಿ ಸೋಮವಾರ ಕೆರಗೋಡಿನಿಂದ ಪಾದಯಾತ್ರೆ ನಡೆಯಲಿದೆ. ನಂತರ ಮಂಡ್ಯ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕೇಸರಿಪಡೆ ನಿರ್ಧರಿಸಿದೆ.ನಾಳೆ ಬೆಳಗ್ಗೆ ಕೆರಗೋಡು ಗ್ರಾಮದಲ್ಲಿ 7 ಗಂಟೆಗೆ ಪಾದಯಾತ್ರೆ ಆರಂಭವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಲಿದೆ. ಬಳಿಕ ನಗರಾದಾದ್ಯಂತ ಪ್ರತಿಭಟನೆ ನಡೆಯಲಿದೆ.ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ:ತಾಲೂಕಿನ ಕೆರಗೋಡು ಗ್ರಾಮದಲ್ಲಿ ಸ್ಥಾಪಿಸಲಾಗಿದ್ದ ಶ್ರೀಆಂಜನೇಯ ಅರ್ಜುನ ಧ್ವಜವನ್ನು ತೆರವುಗೊಳಿಸಿದ ಸರ್ಕಾರ, ಜಿಲ್ಲಾಡಳಿತ, ಶಾಸಕರು ಹಾಗೂ ಸಚಿವರ ಕ್ರಮವನ್ನು ವಿರೋಧಿಸಿ ನಾಳೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.