ವೈದ್ಯ ಸೇವೆಯಿಂದ ಜನಮನ ಗೆದ್ದ ಹನುಮಂತಪ್ಪ

| Published : Sep 27 2025, 12:00 AM IST

ಸಾರಾಂಶ

ವೈದ್ಯಕೀಯ ಕ್ಷೇತ್ರದಲ್ಲಿ ದಿವಂಗತ ಕೆ.ಎಚ್. ಹನುಮಂತಪ್ಪ ಅವರು ತಮ್ಮ ಸೇವಾಧಿಯಲ್ಲಿ ಸಾವಿರಾರು ಬಡರೋಗಿಗಳಿಗೆ ಉಚಿತ ಸೇವೆ ಸಲ್ಲಿಸಿ, ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ವೈದ್ಯ ಡಾ.ಯತೀಶ್ ಹೇಳಿದ್ದಾರೆ.

- 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವೈದ್ಯ ಡಾ.ಯತೀಶ್‌ ಅಭಿಮತ

- - -

ಕನ್ನಡಪ್ರಭ ವಾರ್ತೆ ಜಗಳೂರು

ವೈದ್ಯಕೀಯ ಕ್ಷೇತ್ರದಲ್ಲಿ ದಿವಂಗತ ಕೆ.ಎಚ್. ಹನುಮಂತಪ್ಪ ಅವರು ತಮ್ಮ ಸೇವಾಧಿಯಲ್ಲಿ ಸಾವಿರಾರು ಬಡರೋಗಿಗಳಿಗೆ ಉಚಿತ ಸೇವೆ ಸಲ್ಲಿಸಿ, ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ವೈದ್ಯ ಡಾ.ಯತೀಶ್ ಹೇಳಿದರು.

ತಾಲೂಕಿನ ಅಸಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಶ್ರೀಶಾಸ್ತ್ರ ಗಣಪಾಸ್ ಸ್ವಯಂ ಸೇವಾ ಸಂಸ್ಥೆ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಸ್ವಯಂಪ್ರೇರಿತ ರಕ್ತ ಕೇಂದ್ರ ಆಶ್ರಯದಲ್ಲಿ ನಡೆದ ಕರ್ಪಣ್ಣರ ಲಿಂಗೈಕ್ಯ ಕೆ.ಎಚ್. ಹನುಮಂತಪ್ಪ ಅವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪುರುಷರ ವಾಲಿಬಾಲ್ ಪಂದ್ಯಾವಳಿ, ಬೃಹತ್ ರಕ್ತದಾನ ಶಿಬಿರ ಹಾಗೂ ರಂಗೋಲಿ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಂದೆಯವರ ಪರಿಶ್ರಮದಿಂದ ಇಂದು ನಾನು ಕೂಡ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅವರ ಮಾರ್ಗದರ್ಶನದಂತೆ ನಾನು ನಡೆಯುತ್ತಿದ್ದು, ಅವರು ಸಲ್ಲಿಸಿದ ಸೇವೆ ನೆನೆಯುವ ಉದ್ದೇಶದಿಂದ ಅವರ ಪುಣ್ಯಸ್ಮರಣೆ ದಿನದಂದು ಅನೇಕ ಕ್ರೀಡಾ ಚಟುವಟಿಕೆ ನಡೆಸಿ ಯುವಕ, ಯುವತಿಯರಲ್ಲಿ ಕ್ರೀಡಾಸಕ್ತಿ ಬೆಳೆಯಲಿದೆ. ಜೊತೆಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ವೈದ್ಯೆ ಡಾ.ಚೈತ್ರ ಮಾತನಾಡಿ, ಮಾವನವರಾದ ಕೆ.ಎಚ್. ಹನುಮಂತಪ್ಪ ಅವರು ಗ್ರಾಮದಲ್ಲಿ ಕ್ಲಿನಿಕ್ ಇಟ್ಟುಕೊಂಡು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸದಾ ಆರೋಗ್ಯ ಸೇವೆ ನೀಡಿ ನಮ್ಮನ್ನ ಅಗಲಿ ಇಂದಿಗೆ 3 ವರ್ಷಗಳಾಗಿವೆ. ಆದರೂ ಜನಮನದಲ್ಲಿ ಉಳಿದಿದ್ದಾರೆ ಎಂದು ಸೇವೆ ಸ್ಮರಿಸಿದರು.

ಈ ಸಂದರ್ಭ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಶಹಾಬಾದ್ ನವಾಬ್, ರೇಣುಕಮ್ಮ, ತುಪ್ಪಜ್ಜಾರ್ ರವಿಕುಮಾರ್, ಮಹಾಲಿಂಗಪ್ಪರ್ ಅಜ್ಜಪ್ಪ, ಕಿರಣ್, ಬಿಜೆಪಿ ಯುವ ಮೋರ್ಚಾ ನರೇಶ್, ಮಾಜಿ ಗ್ರಾ.ಪಂ ಅಧ್ಯಕ್ಷ ರವಿಕುಮಾರ್, ಶಿವು ಅಸಗೋಡು ಗ್ರಾಮದ ಮುಖಂಡರು, ಕ್ರೀಡಾಪಟುಗಳು ಇದ್ದರು.

- - -

-26ಜೆಜಿಎಲ್.1:

ಕಾರ್ಯಕ್ರಮವನ್ನು ವೈದ್ಯ ಡಾ.ಯತೀಶ್ ಉದ್ಘಾಟಿಸಿದರು.