ಸಾರಾಂಶ
- ತಾಪಂ ಮರುಕೆಡಿಪಿ ಸಭೆಯಲ್ಲಿ ಶಾಸಕ ಬಿ.ಪಿ.ಹರೀಶ್ ಅಭಿಮತ - - - ಕನ್ನಡಪ್ರಭ ವಾರ್ತೆ ಹರಿಹರ ಅನೇಕ ದಶಕಗಳ ಕಾಲ ಮಠಮಾನ್ಯಗಳು, ದಾನಿಗಳು ಹಾಗೂ ಸರ್ಕಾರ ವಿದ್ಯಾರ್ಜನೆಗೆ ಉತ್ತಮ ವಾತಾವರಣ ಸೃಷ್ಟಿಸಿವೆ. ಇದರ ಫಲವಾಗಿ ಇಂದು ಹರಿಹರ ಕ್ಷೇತ್ರ ವಿದ್ಯಾಕಾಶಿಯಾಗಿ ಬೆಳೆಯುತ್ತಿದೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.
ನಗರದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ನಡೆದ ಮರುಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಅ.21ರಂದು ನಡೆದ ಕೆಡಿಪಿ ಸಭೆಗೆ ಗೈರಾಗಿದ್ದ ಅಧಿಕಾರಿಗಳಿಗಾಗಿಯೇ ಇಂದು ಮತ್ತೆ ಸಭೆ ಕರೆಯಬೇಕಾಗಿದೆ. ಇಂತಹ ಸಂದರ್ಭ ಮತ್ತೆ ಮರುಕಳಿಸಬಾರದು ಎಂದು ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು.ಹಲವಾರು ವಿದ್ಯಾ ಸಂಸ್ಥೆಗಳು, ಸರ್ಕಾರ, ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ತಾಲೂಕಿನ ಸುತ್ತಮುತ್ತಲಿನ ಹಲವಾರು ಗ್ರಾಮಗಳ ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಗಳಲ್ಲಿ ಇಂದು ವಿದ್ಯಾರ್ಥಿಗಳು ಊಟ- ವಸತಿಯ ಜತೆಗೆ, ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
2024- 2025ನೇ ಸಾಲಿನಿಂದ ಹರಿಹರ ನಗರಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ (ಬಿಸಿಎಂ) ಇಲಾಖೆಯಿಂದ ಮೆಟ್ರಿಕ್ ನಂತರದ 100 ವಿದ್ಯಾರ್ಥಿಗಳ ಬಾಲಕರ ವಸತಿ ನಿಲಯವನ್ನು ಸರ್ಕಾರ ಮಂಜೂರು ಮಾಡಿದೆ. ಶೀಘ್ರದಲ್ಲಿಯೇ ನಗರದಲ್ಲಿ ವಿದ್ಯಾರ್ಥಿ ನಿಲಯವನ್ನು ಆರಂಭಿಸಲಾಗುತ್ತದೆ. ಮಂಜೂರು ಮಾಡಲು ಸಹಕರಿಸಿದ ಅಧಿಕಾರಿಗಳಿಗೆ ಕ್ಷೇತ್ರದ ಜನತೆ ಪರವಾಗಿ ಅಭಿನಂದಿಸುತ್ತೆನೆ ಎಂದು ಹರೀಶ್ ಹೇಳಿದರು.ಕೆಡಿಪಿ ಸಭೆಗೆ ರಾಜ್ಯಪಾಲರಿಂದ ನೂತನವಾಗಿ ನಾಮನಿರ್ದೇಶನ ಆಗಿರುವ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳು ತಡವರಿಸಿದರು. ಯಲವಟ್ಟಿಯ ಕೊಟ್ರೇಶ್ ಕುಮಾರ, ಕಮಲಾಪುರದ ಮಲ್ಲೇಶ, ಗೋವಿನಹಾಳು ಗ್ರಾಮದ ರಾಜಪ್ಪ, ನಂದಿಗಾವಿಯ ನರೇಂದ್ರ ಕುಮಾರ, ಭಾನುವಳ್ಳಿಯ ಜಬಿವುಲ್ಲಾ, ಕುಣೇಬೆಳಕೆರಿಯ ಶಿಲ್ಪಾ ಕೆ. ಅವರು ಅಧಿಕಾರಿಗಳಿಗೆ ಹಲವಾರು ಪ್ರಶ್ನೆಗಳ ಸುರಿಮಳೆಗೈದರು. ಕೆಲವು ಅಧಿಕಾರಿಗಳು ಸದಸ್ಯರ ಪ್ರಶ್ನೆಗೆ ಉತ್ತರಿಸಿದರು, ಮತ್ತೆ ಕೆಲವರು ಉತ್ತರಿಸಲು ತಡವರಿಸಿದರು.
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆಬಾವಿ ಹೊಂದಿರುವ ಹಾಗೂ ಖಾಸಗಿಯಾಗಿ ಕೊಳವೆಬಾವಿ ಹೊಂದಿರುವ ರೈತರ ಪಂಪ್ ಸೆಟ್ಟುಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಏನು ನಿಯಮ ವಿಧಿಸಿದ್ದೀರಿ? ಯಾವ ಕರಾರಿನಲ್ಲಿ ವಿದ್ಯುತ್ ಪೂರೈಸುತ್ತೀರಿ? ಎಂಬ ಸದಸ್ಯರ ಪ್ರಶ್ನೆಗಳಿಗೆ ಬೆಸ್ಕಾಂ ಅಧಿಕಾರಿ ಉತ್ತರಿಸಲು ತಡವರಿಸಿದರು. ಶಾಸಕರ ಮಧ್ಯ ಪ್ರವೇಶದಿಂದ ವಿಷಯ ಸುಖಾಂತ್ಯಗೊಂಡಿತು.ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್, ಮಲೇಬೆನ್ನೂರು ವಿಭಾಗದ ನೀರಾವರಿ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ನಗರಸಭೆ ಅಧಿಕಾರಿಗಳು ಸಭೆಯಲ್ಲಿ ಸದಸ್ಯರ, ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದರು. ಕಳೆದ 6 ತಿಂಗಳಲ್ಲಿ ಇಲಾಖೆಯಿಂದ ಸಾಧಿಸಿರುವ ಪ್ರಗತಿಯ ಕುರಿತು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಗುರುಬಸವರಾಜ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಸುಮಲತಾ ಎಸ್.ಪಿ., ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.- - - -28ಎಚ್.ಆರ್.ಆರ್1:
ಹರಿಹರದ ತಾಲೂಕು ಪಂಚಾಯಿತಿಯಲ್ಲಿ ನಡೆದ ಮರುಕೆಡಿಪಿ ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್ ಮಾತನಾಡಿದರು.