ಸಾರಾಂಶ
ರಾಮನಗರ: ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಕಾವೇರುತ್ತಿದ್ದಂತೆ ರಾಜಕೀಯ ನಾಯಕರ ನಡುವೆ ವಾಗ್ಯುದ್ಧವೂ ಶುರುವಾಗಿದೆ.
ಅಭಿವೃದ್ಧಿ ವಿಚಾರಗಳನ್ನು ಬದಿಗೊತ್ತಿರುವ ನಾಯಕರು ಏಟಿಗೆ ಎದುರೇಟು, ತಂತ್ರಕ್ಕೆ ಪ್ರತಿತಂತ್ರ, ಅಸ್ತ್ರಕ್ಕೆ ಪ್ರತ್ಯಾಸ್ತ್ರ ಹೂಡುವುದು, ಬಾಣಕ್ಕೆ ತಿರುಗುಬಾಣ ಬಿಡುವುದು, ಆರೋಪಕ್ಕೆ ಪ್ರತ್ಯಾರೋಪ ಮಾತ್ರವಲ್ಲದೆ ಭಾವನಾತ್ಮಕ ಮಾತುಗಳನ್ನಾಡಿ ಮತ ಸೆಳೆಯುವ ಪ್ರಕ್ರಿಯೆ ಬಿರುಸು ಪಡೆದುಕೊಳ್ಳುತ್ತಿದೆ.ಎಚ್ ಡಿಡಿ ವಿರುದ್ಧ ಡಿಕೆಸು ವಿವಾದಾತ್ಮಕ ಹೇಳಿಕೆ:
ಕಾಂಗ್ರೆಸ್ ನಾಯಕ ಡಿ.ಕೆ. ಸುರೇಶ್ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ನೀಡಿರುವ ಹೇಳಿಕೆಯೊಂದು ಇದೀಗ ಜೆಡಿಎಸ್ಗೆ ಹೊಸ ಅಸ್ತ್ರ ಒದಗಿಸಿಕೊಟ್ಟಿದೆ. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಗೆ ತಿರುಗೇಟು ನೀಡಲು ಜೆಡಿಎಸ್ ನಾಯಕರು, ಕಾರ್ಯಕರ್ತರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ಕೋಡಂಬಹಳ್ಳಿಯಲ್ಲಿ ಡಿ.ಕೆ. ಸುರೇಶ್ ಅವರು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಟೀಕೆ ಮಾಡಿದ್ದರು. ನಾಳೆ ಆಂಬ್ಯುಲೆನ್ಸ್ ತೆಗೆದುಕೊಂಡು ಬಂದು ಪ್ರಚಾರ ಮಾಡುತ್ತಾರೆ. ಪ್ರಚಾರಕ್ಕೆ ಬರಲಿ, ಅವರ ಆರೋಗ್ಯವೂ ಚೆನ್ನಾಗಿರಲಿ ಎಂದು ಹೇಳಿದ್ದರೆನ್ನಲಾಗಿದೆ.
ಡಿ.ಕೆ.ಸುರೇಶ್ ಮಾತಿನಿಂದ ದಳಪತಿಗಳು ಕೆಂಡಾಮಂಡಲವಾಗಿದ್ದಾರೆ. ಇದೀಗ ಡಿ.ಕೆ.ಸುರೇಶ್ ಹೇಳಿಕೆಯನ್ನೇ ಭಾವನಾತ್ಮಕ ಅಸ್ತ್ರವಾಗಿ ಬಳಸಿಕೊಂಡು ಕೌಂಟರ್ ಕೊಡಲು ಸಿದ್ಧತೆ ನಡೆಸಿದ್ದಾರೆ.ಡಿಕೆಸುಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು:
ಈ ವಿಚಾರವಾಗಿ ಸೋಮವಾರ ಹುಣಸನಹಳ್ಳಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ , ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ಗಮನಿಸಿದ್ದೇನೆ. ರಾಜಕೀಯವಾಗಿ ಮಾತನಾಡೋದು ಸರ್ವೆ ಸಾಮಾನ್ಯ.ಆದರೆ ಮೊಮ್ಮಗನ ಪಟ್ಟಾಭಿಷೇಕಕ್ಕೆ ದೇವೇಗೌಡ್ರು ಆ್ಯಂಬುಲೆನ್ಸ್ ನಲ್ಲಿ ಬರ್ತಾರೆ ಅನ್ನೊದು ಸರಿಯಲ್ಲ. ಅಂತಹ ದುರ್ದೈವ ನಮಗೆ ಬಂದಿಲ್ಲ. ರಾಜ್ಯದ ಜನರ ಆಶಿರ್ವಾದಿಂದ ಅವರು ಶಕ್ತಿಯುತವಾಗಿದ್ದಾರೆ. ದೀಪಾವಳಿ ಬಳಿಕ ಅವರೇ ಬಂದು ಪ್ರಚಾರ ಮಾಡ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದರು.ಕೈ ಪಾಳಯದ ಮೇಲೆ ಬಾಣ ಹೂಡಿದ ಎಚ್ಡಿಕೆ:
ದೇವೇಗೌಡರ ವಿಚಾರವಾಗಿ ಹಗುರವಾಗಿ ಟೀಕೆ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಕೆಂಡಾಮಂಡಲವಾಗಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಮೈಸೂರು ರಾಜಮನೆತನಕ್ಕೆ ಕಾಂಗ್ರೆಸ್ ಸರ್ಕಾರ ಕಿರುಕುಳ ನೀಡುತ್ತಿದೆ. ಅಲ್ಲದೆ, ಗಂಗಾಮತಸ್ಥರ ಬದುಕು ಹಾಳು ಮಾಡಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡಿ ರಾಜಕೀಯ ದಾಳ ಉರುಳಿಸಿದ್ದಾರೆ.ಚಾಮುಂಡೇಶ್ವರಿ ತಾಯಿ ಅರಸು ಮನೆತನದ ದೇವತೆ. ಅವರ ಕುಟುಂಬದ ಆರಾಧ್ಯದೈವ. ಅವರ ಮನೆತನದಿಂದ ದೇವರನ್ನು ದೂರ ಮಾಡುವ ಕೇಡಿನ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನು ರಾಜಮನೆತನ ಬಹಳ ಉತ್ತಮವಾಗಿ ನಿರ್ವಹಣೆ ಮಾಡುತ್ತಿತ್ತು. ತಾಯಿಯ ಸನ್ನಿಧಾನದಲ್ಲಿ ನಡೆಯುತ್ತಿದ್ದ ಕೈಂಕರ್ಯಗಳನ್ನು ಶ್ರದ್ಧಾ ಭಕ್ತಿಗಳಿಂದ ನೋಡಿಕೊಳ್ಳುತ್ತಿತ್ತು. ಅಂತಹ ಕುಟುಂಬಕ್ಕೆ ಧಕ್ಕಿದ್ದ ದೇವರ ಸೇವೆ ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರ ಕಿತ್ತುಕೊಂಡಿದೆ ಎಂದು ಕುಮಾರಸ್ವಾಮಿ ನೇರವಾಗಿ ಆರೋಪಿಸಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಮೈಸೂರು ರಾಜಮನೆತನದ ಬಗ್ಗೆ ಜನರಲ್ಲಿ ಗೌರವ ಭಾವನೆ ಇದೆ. ಆ ರಾಜಮನೆತನದ ವಿಚಾರವನ್ನು ರಾಜಕೀಯ ದಾಳವಾಗಿ ಪ್ರಯೋಗಿಸಿರುವ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ಪ್ಲಾನ್ ಮಾಡಿದ್ದಾರೆ. ಇದಕ್ಕೆ ಕೈ ನಾಯಕರು ಯಾವ ರೀತಿಯ ತಿರುಗೇಟು ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.ಅಲ್ಲದೆ, ಕೆರೆ ಕಟ್ಟೆಗಳಲ್ಲಿ ತಲೆ ತಲಾಂತರದಿಂದ ಮೀನು ಹಿಡಿದು ಜೀವನ ಮಾಡುತ್ತಿದ್ದ ಗಂಗಾಮತಸ್ಥರ ಜೀವನ್ನು ಹಾಳು ಮಾಡಿದ್ದೆ ಇಂದಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಆರೋಪಿಸಿರುವ ಕುಮಾರಸ್ವಾಮಿ, ಕೆರೆಗಳಲ್ಲಿ ಮೀನುಗಳನ್ನು ಹರಾಜು ಹಾಕುವ ವ್ಯವಸ್ಥೆ ಅವರೇ ಜಾರಿಗೆ ತಂದಿದ್ದು. ಗಂಗಾ ಮತಸ್ಥಱನ್ನು ಎಸ್‌ಟಿ ಪ್ರವರ್ಗಕ್ಕೆ ಸೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡುವ ಮೂಲಕ ಆ ವರ್ಗ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ನಾಯಕರು ಸನ್ನದ್ಧರಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಆವೇಶ. ಭಾವೋದ್ವೇಗಕ್ಕೆ ಒಳಗಾಗಿ ಆಡುವ ಮಾತುಗಳಿಂದ ಪಕ್ಷದ ಮೇಲೆ ಹಾಗೂ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಪಕ್ಷಕ್ಕೆ ಹಾನಿ ಉಂಟಾಗುವ ಹೇಳಿಕೆ ನೀಡಿದರೆ ಅದನ್ನು ಸರಿಪಡಿಸಲು ತುಂಬಾ ಕಷ್ಟವಾಗಲಿದೆ. ಅದಕ್ಕಾಗಿ ಯಾರೊಬ್ಬರೂ ವಿವಾದಾತ್ಮಕ ವಿಷಯ ಮಾತನಾಡದಂತೆ ಮಾಜಿ ಪ್ರಧಾನಿ ದೇವೇಗೌಡರೇ ದಳಪತಿಗಳಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.ಆದರೀಗ ಕೈ ಪಾಳಯದ ನಾಯಕರು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ನೀಡುವ ಹೇಳಿಕೆಗಳು ಪಕ್ಷಕ್ಕೆ ತಿರುಗುಬಾಣವಾಗುವ ಸಾಧ್ಯತೆಗಳೇ ಹೆಚ್ಚಾಗಿದೆ. ಆದ್ದರಿಂದ ವರಿಷ್ಠರು ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗ ಬಲ್ಲ ಹೇಳಿಕೆಗಳನ್ನು ನೀಡದಂತೆ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ನಾಯಕರ ಮಾತುಗಳಿಗೆ ಕಡಿವಾಣ ಹಾಕದಿದ್ದರೆ ಕಷ್ಟ ಎಂದು ಕಾಂಗ್ರೆಸ್ ನಾಯಕರೇ ಹೇಳಿಕೊಳ್ಳುತ್ತಿದ್ದಾರೆ.
28ಕೆಆರ್ ಎಂಎನ್ 5,6,7,8.ಜೆಪಿಜಿ5.ದೇವೇಗೌಡ
6.ಕುಮಾರಸ್ವಾಮಿ7.ಡಿ.ಕೆ.ಶಿವಕುಮಾರ್
8.ಡಿ.ಕೆ.ಸುರೇಶ್