ದುಬಾರಿ ಸೈಕಲ್‌ ಕದಿಯುತ್ತಿದ್ದ ಕಳ್ಳನ ಸೆರೆ: 60 ಸೈಕಲ್‌ ಜಪ್ತಿ

| Published : Jun 22 2024, 01:32 AM IST / Updated: Jun 22 2024, 07:18 AM IST

ದುಬಾರಿ ಸೈಕಲ್‌ ಕದಿಯುತ್ತಿದ್ದ ಕಳ್ಳನ ಸೆರೆ: 60 ಸೈಕಲ್‌ ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ನಗರದ ವಿವಿಧೆಡೆ ಸೈಕಲ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್‌ ಕಳ್ಳನನ್ನು ಬಂಧಿಸಿಲಾಗಿದೆ.

ಬೆಂಗಳೂರು: ವಿಲಾಸಿ ಜೀವನಕ್ಕೆ ಸುಲಭವಾಗಿ ಹಣ ಗಳಿಸಲು ನಗರದ ವಿವಿಧೆಡೆ ದುಬಾರಿ ಸೈಕಲ್‌ಗಳನ್ನು ಕಳವು ಮಾಡುತ್ತಿದ್ದ ಖತರ್ನಾಕ್‌ ಕಳ್ಳನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಿಗಣಿ ಭರಮಸಾಗರ ನಿವಾಸಿ ನಾರಾಯಣಸ್ವಾಮಿ(43) ಬಂಧಿತ. ಆರೋಪಿಯಿಂದ 12 ಲಕ್ಷ ರು. ಮೌಲ್ಯದ 60 ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜೆ.ಪಿ.ನಗರ 8ನೇ ಹಂತದ ಸಾರಥಿನಗರದ ನಿವಾಸಿಯೊಬ್ಬರು ಸೈಕಲ್‌ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಲಭವಾಗಿ ಹಣ ಗಳಿಸಲು ಸೈಕಲ್‌ ಕಳವು:

ನಗರದ ವಿವಿಧೆಡೆ ಸುತ್ತಾಡಿ ಮನೆ ಎದುರು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದುಬಾರಿ ಸೈಕಲ್‌ಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ. ಕದ್ದ ಸೈಕಲ್‌ಗಳನ್ನು ಜಿಗಣಿ, ಆನೇಕಲ್‌ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಮಾರಾಟ ಮಾಡಿ ಹಣ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದ ಬಂದಿದೆ.

ಆರೋಪಿಯು ಈ ಹಿಂದೆಯೂ ಸೈಕಲ್‌ ಕಳವು ಪ್ರಕರಣದಲ್ಲಿ ಹಲವು ಬಾರಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದ.

ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಬುಕ್ಕಸಾಗರ ಹಳ್ಳಿಯಿಂದ 25 ಸೈಕಲ್‌ಗಳು, ಬೇಗೂರು ಕೊಪ್ಪ ರಸ್ತೆಯಲ್ಲಿ 24 ಸೈಕಲ್‌ಗಳು, ಕೊತ್ತನೂರು ಮತ್ತು ಕೋಣನಕುಂಟೆಯ ವಿವಿಧೆಡೆ 10 ಸೈಕಲ್‌ಗಳು ಸೇರಿದಂತೆ ಒಟ್ಟು ಸುಮಾರು 12 ಲಕ್ಷ ರು. ಮೌಲ್ಯದ 60 ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.