ಸೂರಜ್ ರೇವಣ್ಣ ಅಭಿಮಾನಿಗಳ ಸಂಘದಿಂದ ಎಂಎಲ್‌ಸಿ ಡಾ.ಸೂರಜ್ ರೇವಣ್ಣನವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ, ಆರೋಗ್ಯ ತಪಾಸಣಾ ಶಿಬಿರ ಮತ್ತು ಗಿಡ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವ ಬದಲಾಗಿ ಸಮಾಜ ಮುಖಿಯಾಗಿ ಆಚರಣೆ ಮಾಡಿಕೊಳ್ಳುವುದು ಒಳಿತು, ಹಾಗಾಗಿ ಅಭಿಮಾನಿಗಳು ಆರೋಗ್ಯ ತಪಾಸಣೆ ಶಿಬಿರ ಮಾಡಿಸುತ್ತಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಹಣ ಹಾಗೂ ಅಧಿಕಾರ ಇದ್ದರೆ ಸಾಲದು, ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಆರೋಗ್ಯವಂತರೇ ಸಮಾಜದ ನಿಜವಾದ ಶ್ರೀಮಂತರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ತಿಳಿಸಿದರು.ಪಟ್ಟಣದಲ್ಲಿ ಸೂರಜ್ ರೇವಣ್ಣ ಅಭಿಮಾನಿಗಳ ಸಂಘದಿಂದ ಎಂಎಲ್‌ಸಿ ಡಾ.ಸೂರಜ್ ರೇವಣ್ಣನವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ, ಆರೋಗ್ಯ ತಪಾಸಣಾ ಶಿಬಿರ ಮತ್ತು ಗಿಡ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವ ಬದಲಾಗಿ ಸಮಾಜ ಮುಖಿಯಾಗಿ ಆಚರಣೆ ಮಾಡಿಕೊಳ್ಳುವುದು ಒಳಿತು, ಹಾಗಾಗಿ ಅಭಿಮಾನಿಗಳು ಆರೋಗ್ಯ ತಪಾಸಣೆ ಶಿಬಿರ ಮಾಡಿಸುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ನಗರ ಹೆಚ್ಚು ಅಭಿವೃದ್ಧಿ ಹೊಂದಿದೆ, ವರ್ತುಲ ರಸ್ತೆ ಇದ್ದರೂ ಪಟ್ಟಣದ ಹೃದಯ ಭಾಗದಲ್ಲಿ ಹಾದುಹೋಗಿರುವ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ, ಶಾಲಾ, ಕಾಲೇಜು ಸಮಯದಲ್ಲಿ ಸಂಚಾರಿ ಪೊಲೀಸರು ಹರಸಾಹಸಪಟ್ಟು ವಾಹನಗಳ ನಿಯಂತ್ರಣ ಮಾಡುತ್ತಿದ್ದಾರೆ, ಹೆಲ್ಮೆಟ್ ಕಡ್ಡಾಯ ಇದ್ದರೂ ಸವಾರರು ಧರಿಸುತ್ತಿಲ್ಲ, ಇದರನ್ನು ಅರಿತು ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡುವ ಮೂಲಕ ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಆರೋಗ್ಯ ವಿಮೆ ಮಾಡಿಸಿದರೆ ಸಾಲದು, ನಮ್ಮ ಬಳಿ ಇರುವ ವಾಹನಗಳಿಗೂ ಸಕಾಲಕ್ಕೆ ವಿಮೆ ಮಾಡಿಸಬೇಕು, ಬೈಕ್‌ನಲ್ಲಿ ಸಂಚಾರ ಮಾಡುವವರು ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡಿ, ಅಪಘಾತ ಸಂಭವಿಸಿದಾಗ ಸಾಕಷ್ಟು ಸಾವುಗಳು ತಲೆಗೆ ಪೆಟ್ಟು ಬಿದ್ದಾಗ ನಡೆದಿದೆ, ಹೆಲ್ಮೆಟ್ ಬಳಕೆ ಮಾಡುವುದರಿಂದ ಜೀವ ಸುರಕ್ಷವಾಗಿರುತ್ತದೆ, ಸಂಚಾರಿ ನಿಯಮ ಪಾಲನೆ ಮಾಡದೆ ಇರುವವರಿಗೆ ದಂಡ ಹಾಕುವುದು ಅವರಿಗಾಗಿ ಅಲ್ಲ, ಮುಂದೆ ನೀವು ತಪ್ಪು ಮಾಡಬಾರದು ಎನ್ನುವ ಉದ್ದೇಶ ಅವರದ್ದಾಗಿದೆ ಎಂದರು.ಇತ್ತೀಚಿನ ದಿವಸಗಳಲ್ಲಿ ಕಲಬೆರಕೆ ಆಹಾರ ಸೇವನೆ ಹೆಚ್ಚಾಗುತ್ತಿದೆ, ರಸ್ತೆ ಬದಿಯಲ್ಲಿ ಕುರುಕಲು ತಿನ್ನುವುದು ಕಡಿಮೆ ಮಾಡಬೇಕು, ಹಳೆ ಎಣ್ಣೆ ಬಳಕೆ ಮಾಡುವುದರಿಂದ ಎಣ್ಣೆಯಲ್ಲಿ ಕರಿದ ತಿಂಡಿ ತಿಂದು ಹೃದಯ ಕಾಯಿಲೆಗಳನ್ನು ತಂದು ಕೊಳ್ಳುತ್ತಿದ್ದೀರ, ಮನೆಯಲ್ಲಿ ನಿತ್ಯವೂ ಊಟ ಮಾಡುವುದು ಮೈ ಗೂಡಿಸಿಕೊಳ್ಳಿ, ಅನಿವಾರ್ಯ ಸಮಯದಲ್ಲಿ ಮಾತ್ರ ಹೊರಗೆ ಊಟ ಮಾಡಬೇಕು, ನಿತ್ಯವೂ ಡಾಬಾ, ರೆಸ್ಟೋರೆಂಟ್‌ಗಳಿಗೆ ಅಂಟಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಈ ವೇಳೆ ನೂರಾರು ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸಿ, ಮಾಧ್ಯಮಿಕ ಶಾಲಾ ಆವರಣದಲ್ಲಿ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ನಂತರ ಬಂದ ಸಾರ್ವಜನಿಕರಿಗೆ ಸಾವಿರಾರು ಗಿಡಗಳ ವಿತರಣೆ ಮಾಡಿದರು.ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ ಮಾತನಾಡಿದರು, ಎಚ್‌ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದೀಪಕ್, ಮುಖಂಡರಾದ ಚೋಳೇನಹಳ್ಳಿ ಸುರೇಶ್, ನಟ್ಟೆಕೆರೆ ನಾಗರಾಜು, ಎ.ಎಂ.ಬಾಲಚಂದ್ರ, ಕರಡೇವು ಸತೀಶ್, ಚಂದು, ರಕ್ಷಿತ್, ಸಚ್ಚಿನ್, ರಾಘು ಸೇರಿ ಇತರರು ಇದ್ದರು.