ಕನ್ನಡಪ್ರಭ ವಾರ್ತೆ ಕಲ್ಯಾಣಪುರ
ಇಲ್ಲಿನ ಮಿಲಾಗ್ರಿಸ್ ಕೆಥೆಡ್ರಲ್ ನಲ್ಲಿ ಉಡುಪಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಪೀಠಾರೋಹಣಗೈದ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರನ್ನು ಭಾವನಾತ್ಮಕ ಸಮಾರಂಭದಲ್ಲಿ ಸಾರ್ವಜನಿಕವಾಗಿ ಅಭಿನಂದಿಸಲಾಯಿತು. ಧರ್ಮಪ್ರಾಂತ್ಯದ ಪರವಾಗಿ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನೂತನ ಧರ್ಮಾಧ್ಯಕ್ಷರನ್ನು ಅಭಿನಂದಿಸಿದರು.ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ತಮ್ಮ ಸಂದೇಶದಲ್ಲಿ ನೂತನ ಧರ್ಮಾಧ್ಯಕ್ಷರು ಅಪೋಸ್ತಲರ ಉತ್ತರಾಧಿಕಾರಿಗಳಾಗಿ ಹೊತ್ತಿರುವ ಜವಾಬ್ದಾರಿಯನ್ನು ವಿವರಿಸಿದರು. ಧರ್ಮಾಧ್ಯಕ್ಷ ಲೆಸ್ಲಿ ಅವರ ಸಮೃದ್ಧ ಶೈಕ್ಷಣಿಕ ಹಿನ್ನೆಲೆ, ಪಾಸ್ಟರಲ್ ಅನುಭವ ಹಾಗೂ ಸರಳ ಜೀವನಶೈಲಿ ಧರ್ಮಪ್ರಾಂತ್ಯವನ್ನು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಏಕತೆಯ ದಿಕ್ಕಿನಲ್ಲಿ ಮುನ್ನಡೆಸಲಿದೆ ಎಂದು ಹಾರೈಸಿದರು.ತಮ್ಮ ಹೃದಯಸ್ಪರ್ಶಿ ಭಾಷಣದಲ್ಲಿ ನೂತನ ಧರ್ಮಾಧ್ಯಕ್ಷ ಅತೀ ವಂ.ಡಾ.ಲೆಸ್ಲಿ ಡಿಸೋಜ, ತಮ್ಮ ಮುಂದಿರುವ ಸವಾಲುಗಳನ್ನು ವಿನಯದಿಂದ ಒಪ್ಪಿಕೊಂಡು, ನಾನು ನನ್ನ ಶಕ್ತಿಯಿಂದಲ್ಲ, ದೇವರ ಮೇಲಿನ ನಂಬಿಕೆಯಿಂದ ಈ ದೀಕ್ಷೆ ಪಡೆದಿದ್ದೇನೆ, ಎಲ್ಲರೂ ಸೇರಿ ಪ್ರೀತಿ, ಸೇವೆ ಮತ್ತು ಸತ್ಯದ ನೆಲೆಯಲ್ಲಿ ಧರ್ಮಸಭೆಯನ್ನು ಕಟ್ಟೋಣ ಎಂದವರು ಹೇಳಿದರು. ದೇವರಿಗೆ, ತಮ್ಮ ಕುಟುಂಬಕ್ಕೆ, ಗುರುಗಳಿಗೆ ಹಾಗೂ ಭಕ್ತರಿಗೆ ಆಳವಾದ ಕೃತಜ್ಞತೆ ಸಲ್ಲಿಸಿದರು.ನಿವೃತ್ತರಾದ ಧರ್ಮಾಧ್ಯಕ್ಷ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಧರ್ಮಪ್ರಾಂತ್ಯಕ್ಕೆ ನೀಡಿದ ಸೇವೆಗೆ ಗೌರವ ಸಲ್ಲಿಸಲಾಯಿತು. ಉಡುಪಿ ಶಾಸಕ ಯಶಪಾಲ ಸುವರ್ಣ, ವಿ.ಪ. ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್. ಮಾಜಿ ಶಾಸಕರಾದ ರಘುಪತಿ ಭಟ್, ಜೆ. ಆರ್. ಲೋಬೊ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಂ. ಎ. ಗಫೂರ್, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಸಹಿತ ಹಲವು ರಾಜಕೀಯ ಮುಖಂಡರು ಇದ್ದರು. ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ವಂ.ರೋಶನ್ ಡಿಸೋಜಾ ವಂದಿಸಿದರು. ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮದ ನಿರ್ವಹಣೆಯನ್ನು ವಂ.ವಿಲ್ಸನ್ ಡಿಸೋಜಾ, ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ವಂ.ಡೆನಿಸ್ ಡೆಸಾ ನೆರವೇರಿಸಿದರು.ಯಾನ್ ತುಳುವಪ್ಪೆನ ಮಗೆ...ನೂತನ ಧರ್ಮಾಧ್ಯಕ್ಷ ಡಾ. ಲೆಸ್ಲಿ ಡಿಸೋಜ ಅವರು ಕೊಂಕಣಿ, ಇಂಗ್ಲಿಷ್, ಕನ್ನಡ ಮತ್ತು ಸ್ಥಳೀಯ ತುಳು ಭಾಷೆಗಳಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು.
ಯಾನ್ ತುಳುವಪ್ಪೆನ ಮಗೆ, ನಮ ಮಾತೆರ್ಲಾ ದೇವೆರ್ನ ಜೋಕುಲು, ನಮ ಸಹಬಾಳ್ವೆಡ್ ಬದುಕ್‌ಗ ಎಂದು ತುಳುವಿನಲ್ಲಿ ಮಾತನಾಡುತ್ತಾ, ತಾನು ಉಚ್ಚಿಲದ ಮಹಾಲಕ್ಷ್ಮೀ ದೇವಾಲಯದ ಸಮೀಪ ಹುಟ್ಟಿ, ಅಲ್ಲಿನ ಸರಸ್ವತಿ ಮಂದಿರ ಶಾಲೆಯಲ್ಲಿ ಪ್ರಾಥಮಿಕ, ಸರ್ಕಾರಿ ಫಿಷರೀಸ್ ಶಾಲೆಯಲ್ಲಿ ಪ್ರೌಢ, ಅದಮಾರು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದುದನ್ನು ನೆನಪಿಸಿಕೊಂಡರು.ಧರ್ಮಸಭೆಯ ಸವಾಲುಗಳಿವೆ...ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಮಹಾಧರ್ಮಾಧ್ಯಕ್ಷ ಲಿಯೋಪೋಲ್ಡೊ ಗಿರೆಲ್ಲಿ ತಮ್ಮ ಆಶೀರ್ವಚನದಲ್ಲಿ ಕ್ರೈಸ್ತ ಧರ್ಮಸಭೆ ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಧರ್ಮಗುರುಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಯುವಕರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಪ್ರಮುಖ ಸವಾಲಾಗಿ ಪರಿಣಮಿಸಿದೆ. ನೂತನ ಧರ್ಮಾಧ್ಯಕ್ಷರಿಗೆ ಇಂತಹ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಹೊಣೆಗಾರಿಕೆ ಇದೆ. ವಂ. ಲೆಸ್ಲಿ ಅವರಿಗೆ ಧರ್ಮಾಧ್ಯಕ್ಷರ ಹೊಣೆಗಾರಿಕೆಯು ಉಡುಪಿ ಧರ್ಮಕ್ಷೇತ್ರ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿ ಎಂದು ಶುಭಹಾರೈಸಿದರು.