ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಈ ಬಿರು ಬಿಸಿಲು ಈಗ ಬ್ಲಡ್‌ ಬ್ಯಾಂಕ್‌ಗಳಿಗೂ ಆಘಾತವನ್ನುಂಟು ಮಾಡಿದೆ. ಜನರು ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದರಿಂದ ಇಲ್ಲಿನ ಕೆಎಂಸಿಆರ್‌ಐ ಸೇರಿದಂತೆ ಹಲವೆಡೆ ಬ್ಲಡ್‌ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಕಂಡುಬರುತ್ತಿದೆ.

ಕೆಎಂಸಿಆರ್‌ಐಗೂ ಕಳೆದೊಂದು ತಿಂಗಳಿನಿಂದ ರಕ್ತದ ಕೊರತೆ ಕಂಡು ಬಂದಿದೆ. ಅಲ್ಲಿನ ಹೆರಿಗೆ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಅಪಘಾತ ವಿಭಾಗಗಳಿಗೆ ನಿತ್ಯವೂ ಹೆಚ್ಚಿನ‌ ರಕ್ತದ ಬೇಡಿಕೆ ಇದ್ದೇ ಇರುತ್ತದೆ. ನಿತ್ಯ 40-50 ಯೂನಿಟ್ ರಕ್ತದ ಪ್ಯಾಕೆಟ್‌ಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಕ್ತದಾನಿಗಳ ಸಂಖ್ಯೆ ‌ಕಡಿಮೆಯಾಗಿದ್ದು, ತೀವ್ರ ಸಮಸ್ಯೆಯಾಗುತ್ತಿದೆ.

250 ಯೂನಿಟ್‌ ಮಾತ್ರ ಸಂಗ್ರಹ:


ಕೆಎಂಸಿಆರ್‌ಐ ಬ್ಲಡ್ ಬ್ಯಾಂಕ್‌ನಲ್ಲಿ ಜನವರಿಯಲ್ಲಿ 369, ಫೆಬ್ರವರಿ 300 ಯೂನಿಟ್‌ ರಕ್ತ ಸಂಗ್ರಹವಿದ್ದರೆ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ 250 ಯೂನಿಟ್‌ ಸಂಗ್ರಹವಿದೆ. ಜನರು ರಕ್ತದಾನಕ್ಕೆ ಮುಂದಾಗದಿದ್ದರೆ ಮುಂದೆ ಇನ್ನೂ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ವೈದ್ಯರು ಹೇಳಿದ್ದಾರೆ.

ನಗರದ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್‌ನಲ್ಲಿ ನಿತ್ಯ 90ರಿಂದ 100 ಯೂನಿಟ್ ರಕ್ತ ಸಂಗ್ರಹವಾದರೆ, ಅಷ್ಟೇ ಪ್ರಮಾಣದಲ್ಲಿ ವಿತರಿಸಲಾಗುತ್ತಿತ್ತು. ಆದರೆ, ಪ್ರಸ್ತುತ 10ರಿಂದ 15 ಯೂನಿಟ್‌ಗಳಿಗೆ ಕುಸಿದಿದೆ. ರಾಷ್ಟ್ರೋತ್ಥಾನ ರಕ್ತ ‌ಕೇಂದ್ರ ಸೇವಾ ಸಂಸ್ಥೆಯಾಗಿದ್ದು, ಪರ‍್ಯಾಯವಾಗಿ ರಕ್ತ ಪಡೆಯದೆ ಅನಿವಾರ್ಯ ಪ್ರಕರಣಗಳಿಗೆ ರಕ್ತ ನೀಡಲಾಗುತ್ತಿದೆ. ಈಗ ರಕ್ತದ ಅಭಾವದ ನಡುವೆಯೂ ಮೊಬೈಲ್ ‌ಕ್ಲಿನಿಕ್, ದಾನಿಗಳಿಗೆ ಫೋನ್ ಮಾಡಿ ರಕ್ತ ಪಡೆಯುವ ಕೆಲಸ ಮಾಡಲಾಗುತ್ತಿದೆ‌. 4-5 ದಾನಿಗಳು ಏಕಕಾಲಕ್ಕೆ ರಕ್ತದಾನ ಮಾಡಲು ಮುಂದೆ ಬಂದಲ್ಲಿ ಮೊಬೈಲ್‌‌ ಕ್ಲಿನಿಕ್‌ನ್ನು ತಾವು ಇರುವ ಸ್ಥಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕಿನ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ. ಬಾಕ್ಸ್...

ಬೇಸಿಗೆಯಲ್ಲಿ ಏಕೆ ರಕ್ತದ ಕೊರತೆ?

ಮಾರ್ಚ್‌ನಿಂದ ಮೇ ತಿಂಗಳ ವರೆಗೆ ರಕ್ತದ ಅಭಾವ ಕಂಡು ಬರುತ್ತದೆ. ಬೇಸಿಗೆ ಸಮಯ ರಕ್ತದಾನಿಗಳಿಗೆ ವಿಶ್ರಾಂತಿ ಅವಶ್ಯಕತೆ ಇದೆ. ಚಳಿಗಾಲ, ಮಳೆಗಾಲದಲ್ಲಿ ರಕ್ತದಾನ ಮಾಡಿದರೆ 10-15 ನಿಮಿಷ ವಿಶ್ರಾಂತಿ ಪಡೆದರೆ ನಡೆಯುತ್ತದೆ. ಆದರೆ, ಬೇಸಿಗೆ ಕಾಲದಲ್ಲಿ ಕನಿಷ್ಠ 30ರಿಂದ 45 ನಿಮಿಷ ಕಡ್ಡಾಯವಾಗಿ ವಿಶ್ರಾಂತಿ ಮಾಡಬೇಕು. ಹೊರಗಡೆ ಹೆಚ್ಚಿನ ಬಿಸಿಲು ಇರುವುದರಿಂದ ತಲೆಸುತ್ತು, ಸುಸ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಕ್ತದಾನ ಮಾಡಿದ ಬಳಿಕ ಅರ್ಧಗಂಟೆ ವರೆಗೆ ವಿಶ್ರಾಂತಿ ತೆಗೆದುಕೊಂಡರೆ ಯಾವುದೇ ಸಮಸ್ಯೆಯಾಗುವುದಿಲ್ಲ.

ಕಳೆದ ಒಂದು ತಿಂಗಳಿನಿಂದ ಕೆಎಂಸಿಆರ್‌ಐನಲ್ಲಿ ರಕ್ತದ ಕೊರತೆಯಾಗುತ್ತಿರುವುದು ನಿಜ. ಬೇಸಿಗೆ ಕಾಲದಲ್ಲೂ ರಕ್ತದಾನ ಮಾಡಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು.

ಡಾ. ಈಶ್ವರ ಹಸಬಿ, ಕೆಎಂಸಿಆರ್‌ಐನ ವೈದ್ಯಕೀಯ ಅಧೀಕ್ಷಕ

ರಕ್ತದ ಅವಶ್ಯವಿರುವ ವೇಳೆ ಎಲ್ಲರೂ ಕಡ್ಡಾಯವಾಗಿ ರಕ್ತದಾನ ಮಾಡಬೇಕು. ಬೇಸಿಗೆಯಲ್ಲಿ ರಕ್ತದಾನ ಮಾಡುವುದರಿಂದ ದೇಹದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಒಂದು ಜೀವ ಉಳಿಸಿದ ಪುಣ್ಯ ಬರಲಿದೆ.

ಮನೋಹರ ಮೆಹರವಾಡೆ, ರಕ್ತದಾನಿ