ಕನ್ನಡಪ್ರಭ ವಾರ್ತೆ ಭದ್ರಾವತಿ
ರಾಜ್ಯದಲ್ಲಿ ಕಳೆದ ಕೆಲವು ತಿಂಗಳಿನಿಂದ ಖಾಸಗಿ ಸರ್ವೆಯರ್‌ಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೆಲಸಕ್ಕೆ ಹಾಜರಾಗದೆ, ಯಾವುದೇ ಜಮೀನನ್ನು ಸರ್ವೆ ಮಾಡದೆ ಇರುವುದರಿಂದ ಸಾಕಷ್ಟು ತೊಂದರೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಗ್ರಹಿಸಿದರು.ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಿಂಗಳುಗಟ್ಟಲೆ ಕೆಲಸಕ್ಕೆ ಹಾಜರಾಗದೆ ರೈತರ ಜಮೀನುಗಳನ್ನು ಸರ್ವೆ ಮಾಡದೆ ನಿರ್ಲಕ್ಷ್ಯವಹಿಸಿರುವ ಕಾರಣ ಸರ್ವೆ ಮಾಡಿಕೊಡಲು ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ಇದರಿಂದಾಗಿ ರೈತರು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ತಕ್ಷಣ ಖಾಸಗಿ ಸರ್ವೆಯರ್‌ಗಳ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವೇ ತಿಂಗಳುಗಟ್ಟಲೆ ಕೆಲಸಕ್ಕೆ ಹಾಜರಾಗದೆ ಸರ್ವೆ ಮಾಡದೆ ಇರುವ ಸರ್ವೆಯರ್‌ಗಳನ್ನು ಕೆಲಸದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡರು ಇಲಾಖೆಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳನ್ನು ತಂದಿರುವುದು ಸ್ವಾಗತಾರ್ಹವಾಗಿರುತ್ತದೆ. ಆದರೆ ಸರ್ವೆ ಇಲಾಖೆಯಲ್ಲಿ ಇರುವ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿರುವುದು ಅತ್ಯವಶ್ಯಕವಾಗಿದೆ ಎಂದರು.
ಒಂದು ವೇಳೆ ಖಾಸಗಿ ಸರ್ವೆಯರ್‌ಗಳು ತಕ್ಷಣ ಕೆಲಸಕ್ಕೆ ಹಾಜರಾಗದಿದ್ದರೆ ಅವರ ಜಾಗಕ್ಕೆ ವಿದ್ಯಾವಂತ ಬಡ ಸರ್ವೆಯರನ್ನು ತಕ್ಷಣ ಆಯ್ಕೆ ಮಾಡಿಕೊಂಡು ಬಡ ರೈತರ ಜಮೀನುಗಳ ಸರ್ವೆ ಕೆಲಸಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಿ ಸಾರ್ವಜನಿಕರಿಗೆ ಸಹಾಯ ಮಾಡುವುದು ಸರ್ಕಾರದ ಮುಖ್ಯ ಕೆಲಸವಾಗಿರುತ್ತದೆ. ಈ ಬಗ್ಗೆ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳ ವಿರುದ್ಧ ಜಮೀನಿನ ರೈತರೊಂದಿಗೆ ಮೇ. ೧೨ರ ಮಂಗಳವಾರ ಬೆಳಿಗ್ಗೆ ೧೧ಕ್ಕೆ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ತಾಲೂಕು ಕಚೇರಿಯಲ್ಲಿ ಹಲವು ತಿಂಗಳಿನಿಂದ ಲಿಫ್ಟ್ ಹಾಳಾಗಿದ್ದು, ಈ ಲಿಫ್ಟ್ ಸರಿಪಡಿಸದೇ ನಿರ್ಲಕ್ಷ್ಯತನವಹಿಸಲಾಗಿದೆ. ಈ ಲಿಫ್ಟ್ ಇಲ್ಲದೇ ಕಚೇರಿಯ ಸಿಬ್ಬಂದಿಗಳು, ವಯೋ ವೃದ್ಧರು, ವಿಕಲಚೇತನರು, ಮಹಿಳೆಯರು ಮಹಡಿಯಿಂದ ಮಹಡಿಗೆ ಓಡಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಲಿಫ್ಟ್ ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಬ್ರಹ್ಮಲಿಂಗಯ್ಯ, ಉಪಾಧ್ಯಕ್ಷ ಎಂ.ವಿ ಚಂದ್ರಶೇಖರ್, ಪ್ರಧಾನ ಸಂಚಾಲಕ ಬಸವರಾಜು, ಕಾರ್ಯದರ್ಶಿಗಳಾದ ರಾಜುಸ್ವಾಮಿ ಹಾಗೂ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.