ಸಾರಾಂಶ
ಕಾತ್ರಾಳು ಕೆರೆ ಕೋಡಿ । ತುಂಬಿ ಹರಿಯುತ್ತಿರುವ ಜಿನಿಗಿ ಹಳ್ಳ । ವಿವಿ ಸಾಗರಕ್ಕೆ ಒಳ ಹರಿವು ಹೆಚ್ಚಳ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಕೋಟೆನಾಡು ಚಿತ್ರದುರ್ಗದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಬುಧವಾರ ರಾತ್ರಿಯಿಂದೀಚೆಗೆ ಸುರಿದ ಮಳೆಯಿಂದಾಗಿ ಹಲವು ಚೆಕ್ ಡ್ಯಾಂಗಳ ಭರ್ತಿಯಾಗಿವೆ. ಚಿತ್ರದುರ್ಗ ತಾಲೂಕಿನ ಕಾತ್ರಾಳು ಕೆರೆ ಕೋಡಿ ಬಿದ್ದಿದ್ದು, ಜಿನಿಗೆ ಹಳ್ಳ ಭರ್ತಿಯಾಗಿ ಹರಿಯುತ್ತಿದೆ. ಇದರಿದಾಗಿ ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆಯ ನೀರಿನ ಪ್ರಮಾಣ ಏರಿಕೆಯಾಗಿದೆ. ಹೊಸದುರ್ಗ ತಾಲೂಕಿನಲ್ಲಿ ಮಳೆಯಾಗುತ್ತಿರುವುದರಿಂದ ವಿವಿ ಸಾಗರಕ್ಕೆ ಒಳ ಹರಿವು ಹೆಚ್ಚಳವಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆ 6ರ ವರೆಗೆ ಮಳೆ ಸುರಿದಿದೆ. ಹಿರಿಯೂರು ಹಾಗೂ ಚಿತ್ರದುರ್ಗ ತಾಲೂಕಿನ ಕೆಲವೆಡೆ ಹೆಚ್ಚು ಮಳೆ ಸುರಿದಿದೆ. ಹಿರಿಯೂರು ತಾಲೂಕಿನ ಈಶ್ವರಗೆರೆಯಲ್ಲಿ ಅತಿ ಹೆಚ್ಚು 78.6 ಮಿಮೀ ಮಳೆ ಬಿದ್ದಿದ್ದು, ಇದು ಜಿಲ್ಲೆಯ ಅತ್ಯಧಿಕ ಪ್ರಮಾಣವಾಗಿದೆ. ಉಳಿದಂತೆ ಸೂಗೂರು 38.2 ಮಿಮೀ, ಚಿತ್ರದುರ್ಗ- 49.5, ಐನಹಳ್ಳಿ 66.4, ಭರಮಸಾಗರ 25.2, ತುರುವನೂರು 65.4, ಸಿರಿಗೆರೆ 38, ಮೊಳಕಾಲ್ಮೂರು ತಾಲೂಕಿನ ರಾಯಾಪುರ 24 ಮಿಮೀ, ಬಿಜಿಕೆರೆ 37.2, ಚಳ್ಳಕೆರೆಯಲ್ಲಿ 26, ಪರಶುರಾಂಪುರ 18.4, ನಾಯಕನಹಟ್ಟಿ 44.6, ತಳಕು 57.2, ಡಿ.ಮರಿಕುಂಟೆ 13.2, ಹೊಳಲ್ಕೆರೆಯಲ್ಲಿ 19.4 ಮಿಮೀ, ಚಿಕ್ಕಜಾಜೂರು 21.4, ಬಿ.ದುರ್ಗ 36, ಎಚ್‍ಡಿ ಪುರ 27.4, ಹೊಸದುರ್ಗದಲ್ಲಿ 17.4 , ಬಾಗೂರು 30.1, ಮತ್ತೋಡು 15.2, ಶ್ರೀರಾಂಪುರ 50.2, ಮಾಡದಕೆರೆ 48.2 ಮಿಮೀ ಮಳೆಯಾಗಿದೆ. ಬುಧವಾರ ಸುರಿದ ಮಳೆಗೆ ಜಿಲ್ಲಾಯಾದ್ಯಂತ ಒಟ್ಟು 31 ಮನೆಗಳು ಭಾಗಶಃ ಹಾನಿಯಾಗಿದ್ದು, 1 ದೊಡ್ಡ ಜಾನುವಾರು ಹಾನಿಯಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ 10 ಮನೆಗಳು ಭಾಗಶಃ ಹಾನಿಯಾಗಿದೆ. ಹೊಳಲ್ಕೆರೆ ತಾಲೂಕಿನಲ್ಲಿ 3 ಮನೆ ಭಾಗಶಃ ಹಾನಿ ಹಾಗೂ 1 ದೊಡ್ಡ ಜಾನುವಾರು ಹಾನಿಯಾಗಿದೆ. ಹಿರಿಯೂರು ತಾಲೂಕಿನಲ್ಲಿ 2 ಮನೆ ಭಾಗಶಃ ಹಾನಿಯಾಗಿದೆ. ಹೊಸದುರ್ಗ ತಾಲೂಕಿನಲ್ಲಿ 10 ಮನೆ ಭಾಗಶಃ ಹಾನಿಯಾಗಿದೆ. ಚಳ್ಳಕೆರೆ ತಾಲುಕಿನಲ್ಲಿ 5 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ ಮಳೆಯಿಂದಾಗಿ ವಿವಿಸಾಗರಕ್ಕೆ ಒಳ ಹರಿವು ಹೆ್ಚ್ಚಾಗಿದೆ. ಬುಧವಾರ 120.05 ಅಡಿಯಷ್ಟಿದ್ದ ನೀರು ಗುರುವಾರ ಬೆಳಿಗ್ಗೆ 120.10 ರಷ್ಟು ಹೆಚ್ಚಳ ಕಂಡು ಬಂದಿದೆ. ಏತನ್ಮಧ್ಯೆ ಭರಮಸಾಗರ ಏತ ನೀರಾವರಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕೆರೆಗಳ ವೀಕ್ಷಣೆಗೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ತೆರಳಿದ್ದಾರೆ. ಶ್ರೀಗಳ ಮೊದಲ ಭೇಟಿ ಕಾತ್ರಾಳು ಕೆರೆಗೆ ನಿಗದಿಯಾಗಿತ್ತು. ತುಂಗಭದ್ರಾ ನದಿಯಿಂದ ಈ ಮೊದಲು ಕಾತ್ರಾಳು ಕೆರೆಗೆ ನೀರು ಪೂರೈಕೆ ಮಾಡಿ ಮುಕ್ಕಾಲು ಭಾಗದಷ್ಟು ತುಂಬಿಸಲಾಗಿತ್ತು. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಶ್ರೀಗಳು ಕೆರೆ ವೀಕ್ಷಣೆಗೆಆಗಮಿಸುವಾಗಲೇ ಭರ್ತಿಯಾಗಿದ್ದು ಅಚ್ಚುಕಟ್ಟುದಾರರು ಬಾಗಿನ ಸಮರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.