ಸಾರಾಂಶ
ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಣೆಕನ್ನಡಪ್ರಭ ವಾರ್ತೆ ಹಿರಿಯೂರು
ಮಾಜಿ ಸಚಿವ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ ನಡೆಗೆ ಕುಂಚಿಟಿಗರ ರಾಜ್ಯ ಒಕ್ಕೂಟದ ಪದಾಧಿಕಾರಿಗಳು ಗರಂ ಆಗಿದ್ದಾರೆ. ಕೇಂದ್ರ ಓಬಿಸಿ ಪಟ್ಟಿಯಲ್ಲಿ ಕುಂಚಿಟಿಗರ ಸೇರ್ಪಡೆಗೆ ಜಯಚಂದ್ರ ತೊಡರುಗಾಲು ಹಾಕುತ್ತಿದ್ದಾರೆಂದು ಆರೋಪಿಸಿ ಒಕ್ಕೂಟದ ಸದಸ್ಯರು ಗುರುವಾರ ಕಪ್ಪು ಪಟ್ಟಿಧರಿಸಿ ಕರಾಳ ದಿನ ಆಚರಿಸಿದರು. ಧಿಕ್ಕಾರ, ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.ನಂತರ ನಡೆದ ಸಭೆಯಲ್ಲಿ ಮಾತನಾಡಿದ ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿ ರಮೇಶ್, ಟಿ.ಬಿ.ಜಯಚಂದ್ರ ಅವರು ಕುಂಚಿಟಿಗರ ಹೆಸರಿನಲ್ಲಿ ಸ್ಥಾನಮಾನ ಪಡೆದು ಕುಂಚಿಟಿಗರಿಗೆ ದ್ರೋಹ ಮಾಡಲು ಮುಂದಾಗಿದ್ದಾರೆ. 101 ಕುಲ ಬೆಡಗಿನ ಕುಂಚಿಟಿಗರ ಮನೆದೇವರುಗಳು ಅವರನ್ನು ಕ್ಷಮಿಸುವುದಿಲ್ಲವೆಂದರು. ಕುಂಚಿಟಿಗರಿಗೆ ಕೇಂದ್ರ ಸರ್ಕಾರದಲ್ಲಿದ್ದ ಓಬಿಸಿ ಮೀಸಲಾತಿಯನ್ನು ಉದ್ದೇಶ ಪೂರ್ವಕವಾಗಿ ತಪ್ಪಿಸಿ ಕುಂಚಿಟಿಗರನ್ನ ಒಕ್ಕಲಿಗ ಎಂದು ಬರೆಯಿಸಲಾಗಿದೆ. ಕೇಂದ್ರ ಓಬಿಸಿ ಮೀಸಲಾತಿ ಪಡೆಯಿರಿ ಎಂದು ಧಾರ್ಮಿಕ ನೇತಾರರು, ರಾಜಕೀಯ ಧುರೀಣರು ಉಪದೇಶ ಮಾಡಿ ಕುಂಚಿಟಿಗರನ್ನು ಅಡಕತ್ತರಿಯಲ್ಲಿ ಸಿಲುಕಿಸಿದ್ದಾರೆ. ಕಳೆದ 27 ವರ್ಷಗಳಿಂದ ವ್ಯವಸ್ಥಿತವಾಗಿ ಕುಂಚಿಟಿಗರಿಗೆ ನಂಬಿಕೆ ದ್ರೋಹ ಮಾಡಲಾಗಿದೆ ಎಂದರು. ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿಯಲ್ಲಿ ಗ್ರಾಮೀಣ ಮತ್ತು ನಗರ ಕುಂಚಿಟಿಗ ಎಂದು ತಾರತಮ್ಯ ಮಾಡದಂತೆ ಕುಂಚಿಟಿಗರಿಗೆ ಕೇಂದ್ರ ಓಬಿಸಿ ಮೀಸಲಾತಿ ಕೊಡಲು ಶಿಫಾರಸು ಮಾಡಲಾಗಿದೆ. ಟಿ.ಬಿ.ಜಯಚಂದ್ರರಿಗೆ ಶಿಕಾರಿಪುರ ಸಮಾವೇಶದಿಂದಲೂ ಹೇಳುತ್ತ ಬಂದಿದ್ದೇವೆ. ಆದಾಗ್ಯೂ ಅವರದೇ ಸರ್ಕಾರದಲ್ಲಿ ಗ್ರಾಮೀಣ ಕುಂಚಿಟಿಗರಿಗೆ ಮಾತ್ರ ಓಬಿಸಿ ಮೀಸಲಾತಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದು ದುರಂತಮಯ ಸಂಗತಿ. ಈ ಕರಾಳ ಸತ್ಯವನ್ನು ಕುಂಚಿಟಿಗರು ಜೀವನ ಪರ್ಯಂತ ಮರೆಯುವುದಿಲ್ಲವೆಂದರು. ಒಕ್ಕಲಿಗರಿಗೆ ಸಮನಾಗಿ ಇನ್ನಿತರೆ 9 ಜಾತಿಗಳಿಗೆ ಗ್ರಾಮೀಣ ಮತ್ತು ನಗರ ಎಂದು ತಾರತಮ್ಯ ಮಾಡದೆ ಅವರು ಕೇಳದೆ ಇದ್ದರೂ ಸಹ ಓಬಿಸಿ ಮೀಸಲಾತಿ ಕೊಡಲಾಗಿದೆ. ಕುಂಚಿಟಿಗರಿಗೆ ಮಾತ್ರ ಇದ್ದ ಓಬಿಸಿ ತಪ್ಪಿಸಿ ಕಂಬ ಸುತ್ತುವಂತೆ ಮಾಡಿದ್ದಾರೆ. ಈಗಾಗಲೆ ಕೇಂದ್ರ ಓಬಿಸಿ ಮೀಸಲಾತಿ ಕೈ ತಪ್ಪಿ ಹೋದ ಸಮಸ್ಥ ಕುಂಚಿಟಿಗರಿಗೆ ಇ ಡಬ್ಲ್ಯೂ ಎಸ್ ಮೀಸಲಾತಿ ಜಾರಿಯಲ್ಲಿದೆ. ಇನ್ನು ಮುಂದೆ ನಗರ ಕುಂಚಿಟಿಗರಿಗೆ ಇಡಬ್ಲ್ಯೂ ಎಸ್ ಕೈ ಬಿಟ್ಟು ಹೋಗಿ ಜನರಲ್ ಮೆರಿಟ್ ನಲ್ಲಿ ಬರುತ್ತಾರೆ.
ಜಯಚಂದ್ರ ರವರು ಕುಂಚಿಟಿಗರ ಮೀಸಲಾತಿ ಸಾಧಕ ಬಾದಕಗಳನ್ನು ಪರಿಶೀಲಿಸಿ ಈಗಾಗಲೇ ಕುಲಶಾಸ್ತ್ರ ಅಧ್ಯಯನ ವರದಿಗೆ ವಿರುದ್ಧವಾಗಿ ಗ್ರಾಮೀಣ ಕುಂಚಿಟಿಗರಿಗೆ ಮಾತ್ರ ಓಬಿಸಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿರುವ ಕಡತವನ್ನು ಹಿಂದಕ್ಕೆ ತರಿಸಿಕೊಳ್ಳಬೇಕು. ಸಮಸ್ತ ಕುಂಚಿಟಿಗರಿಗೆ ಕೇಂದ್ರ ಓಬಿಸಿ ಮೀಸಲಾತಿ ಕೊಡುವಂತೆ ಶಿಫಾರಸು ಮಾಡಬೇಕು. ತಪ್ಪಿದಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹುಲಿರಂಗನಾಥ್, ಗೌರವಾಧ್ಯಕ್ಷ ಯಳನಾಡು ಗಿರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ ಕುಬೇರಪ್ಪ, ಉಪಾಧ್ಯಕ್ಷ ಮಲ್ಲಪ್ಪನಹಳ್ಳಿ ಜೋಗೇಶ್, ದೇವರಕೊಟ್ಟ ರಂಗಸ್ವಾಮಿ, ಹುಚ್ಚವನಹಳ್ಳಿ ಅವಿನಾಶ್, ಪೆಪ್ಸಿ ಹನುಮಂತರಾಯ, ಕುಲಶಾಸ್ತ್ರ ಅಧ್ಯಯನಕಾರ ಎಸ್ ವಿ ರಂಗನಾಥ್, ಆಪ್ಟಿಕಲ್ಸ್ ರಾಜೇಶ್, ಚಿಲ್ಲಳ್ಳಿ ಚಿದಾನಂದಪ್ಪ, ಬೆಳ್ಳುಳ್ಳಿ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.