ಸಾರಾಂಶ
ಕನ್ನಡಪ್ರಭವಾರ್ತೆ ಚಿಕ್ಕಮಗಳೂರುಜಿಲ್ಲೆಯ ಕೆಲವೆಡೆ ಗುರುವಾರವೂ ಮಳೆ ಮುಂದುವರಿದಿದ್ದು, ಚಿಕ್ಕಮಗಳೂರು ನಗರದಲ್ಲಿ ಸುರಿದ ಭಾರೀ ಮಳೆಯಿದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಹೌಸಿಂಗ್ ಬೋರ್ಡ್‌ನಲ್ಲಿರುವ ಟೀಚರ್ಸ್ ಲೇ ಔಟ್‌ನ ಹಲವು ಮನೆಯೊಳಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಪ್ರತಿದಿನ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಗುರುವಾರ ಮಧ್ಯಾಹ್ನ 2.10ಕ್ಕೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು, ನಗರದ ಇತರೆ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ಮಳೆ ಈ ಭಾಗದಲ್ಲಿ ಬಿದ್ದಿದೆ.ನಿರಂತರವಾಗಿ ಸುರಿದ ಮಳೆಯಿಂದಾಗಿ ಎಲ್ಲಾ ಕಡೆಯಿಂದಲೂ ನೀರು ಹರಿದು ತಗ್ಗು ಪ್ರದೇಶಕ್ಕೆ ನುಗ್ಗಿದ್ದು, ತೆರೆದ ಚರಂಡಿಗಳು ಭರ್ತಿಯಾಗಿ ರಸ್ತೆಯ ಮೇಲೆ ಕಾಲುವೆಯ ಸ್ವರೂಪದಲ್ಲಿ ನೀರು ಹರಿಯುತ್ತಿತ್ತು. ಖಾಲಿ ಸೈಟ್‌ಗಳ ಕಡೆಗೂ ನೀರು ನುಗ್ಗಿತು. ರಸ್ತೆ ಜನ ವಸತಿ ಪ್ರದೇಶದಲ್ಲಿ ಸುಮಾರು ಒಂದು ಅಡಿಗೆ ಹೆಚ್ಚು ನೀರು ಹರಿಯುತ್ತಿತ್ತು. ಕೆಲವು ಮನೆಯೊಳಗೆ ನೀರು ನುಗ್ಗಿದ್ದರಿಂದ ಸ್ಥಳೀಯ ನಿವಾಸಿಗರು ಆತಂಕಗೊಂಡಿದ್ದರು.
ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹುಣಸೆಹಳ್ಳಿ ಕೆರೆಯಡೆಗೆ ಹರಿಯುತ್ತಿತ್ತು. ಮಳೆ ನಿಂತರೂ ನೀರಿನ ಹರಿಯುವಿಕೆ ಕಡಿಮೆ ಆಗಿರಲಿಲ್ಲ, ಸಂಜೆ 5 ಗಂಟೆಯ ನಂತರವೂ ನಗರಸಭೆಯವರು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಕಾರಣ ?ಹೌಸಿಂಗ್ ಬೋರ್ಡ್‌ನ ಸುತ್ತಮುತ್ತ ಭಾರೀ ಮಳೆಯಾದರೆ ಮೊದಲು ನೀರು ನುಗ್ಗುವುದು ಟೀಚರ್ಸ್ ಲೇ ಔಟ್ ಒಳಗೆ. ಕಾರಣ ಜಿಲ್ಲಾ ಪಂಚಾಯ್ತಿಯ ಮುಂಭಾಗದಲ್ಲಿರುವ ಹೌಸಿಂಗ್ ಬೋರ್ಡ್ ಮನೆಗಳು ಎತ್ತರ ಪ್ರದೇಶದಲ್ಲಿವೆ. ಜತೆಗೆ ಸಮೀಪದ ಬೆಟ್ಟ, ಅಗ್ನಿಶಾಮಕ ಠಾಣೆ, ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ ಸುತ್ತಮುತ್ತ ಬಿದ್ದಿರುವ ಮಳೆಯ ನೀರು ನೇರವಾಗಿ ಟೀಚರ್ಸ್ ಲೇಔಟ್‌ಯೊಳಗೆ ಬರಲಿದೆ.
ಈ ಲೇ ಔಟ್‌ನಲ್ಲಿ ಸೈಟ್ ಹಾಗೂ ಮನೆಯನ್ನು ಖರೀದಿ ಮಾಡಿಕೊಂಡಿರುವ ಹಲವು ಮಂದಿ ರಸ್ತೆ, ಚರಂಡಿ ಜಾಗದ ಮೇಲೆ ಶೌಚಾಲಯ ಕಟ್ಟಿಕೊಂಡಿದ್ದಾರೆ, ಕಾರ್ ಪಾರ್ಕಿಂಗ್ ಮಾಡಿಕೊಂಡಿದ್ದಾರೆ. ಇಲ್ಲಿ ಹಾದು ಹೋಗಿರುವ ರಾಜಕಾಲುವೆಯೂ ಕೂಡ ಒತ್ತುವರಿಯಾಗಿದೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಮಳೆ ಸುರಿದರೆ ನೀರು ಸರಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದೆ ನೀರು ಮನೆಯೊಳಗೆ ನುಗ್ಗುತತಿದೆ.ಸ್ಥಳಕ್ಕೆ ನಗರಸಭಾ ಸದಸ್ಯೆ ಕವಿತಾ ಶೇಖರ್ ಅವರು ಭೇಟಿ ನೀಡಿದ್ದರು. ನಗರಸಭೆಯ ಸಿಬ್ಬಂದಿ ನೀರು ಸರಗವಾಗಿ ಹರಿದು ಹೋಗುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು.