ಟೋಲ್ ಶುಲ್ಕ ದರ ಹೆಚ್ಚಳಕ್ಕೆ ಕ್ರೂಜರ್ ಮಾಲೀಕರ ಆಕ್ರೋಶ

| Published : Jun 07 2024, 12:15 AM IST

ಸಾರಾಂಶ

ಟೋಲ್ ದರ ಕಡಿತಗೊಳಿಸುವಂತೆ ಆಗ್ರಹಿಸಿಗೆ ಕ್ರೂಸರ್ ವಾಹನ ಚಾಲಕರು ಮಾಲೀಕರು ಟೋಲ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭವಾರ್ತೆ, ಹಿರಿಯೂರು

ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಶುಲ್ಕ ದರ ಹೆಚ್ಚಳಕ್ಕೆ ಕ್ರೂಸರ್ ವಾಹನ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಿಡಿಸಿದ್ದು, ಮೂಗಿಗಿಂತ ಮೂಗುತಿ ಭಾರ ಎಂಬಂತಹ ಸಂಕಷ್ಟ ಪರಿಸ್ಥಿತಿಗೆ ದೂಡಲ್ಪಟ್ಟಿದ್ದಾರೆ.

ಮೂರು ತಿಂಗಳಿಗೆ ಕಟ್ಟುವ ವಾಹನ ತೆರಿಗೆ ಮೊತ್ತವನ್ನು ಒಂದು ತಿಂಗಳ ಟೋಲ್ ಗೆ ಕಟ್ಟಬೇಕು. ವಾಹನ ತೆರಿಗೆಗಿಂತ ಟೋಲ್ ಶುಲ್ಕವೇ ದುಬಾರಿಯಾಗಿದೆ ಎಂದು ಕ್ರೂಸರ್ ಮಾಲೀಕರು ಮತ್ತು ಚಾಲಕರು ಅಲವತ್ತುಕೊಂಡಿದ್ದಾರೆ.

ಹಿರಿಯೂರು-ಚಿತ್ರದುರ್ಗದ ನಡುವೆ ಪ್ರತಿದಿನ ಸುಮಾರು 60 ರಿಂದ 70ರಷ್ಟು ವಾಹನಗಳು ಸಂಚರಿಸುತ್ತಿದ್ದು, ಈ ವಾಹನಗಳಿಗೆ ಮಾಸಿಕ ಪಾಸ್ ನೀಡಲಾಗುತ್ತಿತ್ತು. ಆರಂಭದಲ್ಲಿ ಮಾಸಿಕ ₹325 ಪಡೆಯಲಾಗುತ್ತಿದ್ದ ಪಾಸ್ ಶುಲ್ಕ ನಂತರದಲ್ಲಿ ₹650 ಗೆ ಏರಿಸಲಾಯಿತು.

ಕರೋನ ನಂತರ ದುಬಾರಿಯಾಗುತ್ತಾ ಹೋದ ಶುಲ್ಕ ಇದೀಗ ಮಾಸಿಕ ಪಾಸ್ ಬದಲಿಗೆ ಪ್ರತಿದಿನವೂ ವಸೂಲು ಮಾಡಿ ಚಾಲಕರು, ಮಾಲೀಕರ ದುಡಿಮೆಯನ್ನು ಕೈಗೆ ಸಿಗದಂತೆ ಮಾಡಿದ್ದಾರೆ. ಬದಲಾದ ನಿಯಮಾವಳಿ ಪ್ರಕಾರ ಮಾಸಿಕ ಪಾಸ್ ಬದಲಿಗೆ ದಿನಕ್ಕೆ ₹130 ಗೂ ಹೆಚ್ಚು ಹಣ ಕೊಡಬೇಕಿದೆ.

ಬೆಳಗ್ಗೆ ತೆಗೆದುಕೊಂಡ ದಿನದ ಪಾಸ್ ರಾತ್ರಿ 12 ಕ್ಕೆ ಮುಗಿದುಹೋಗುತ್ತದೆ. ಇದರಿಂದ ಸ್ವಲ್ಪ ತಡವಾಗಿ ಬಂದರೂ ಮತ್ತೊಂದು ಪಾಸ್ ಗೆ ಹಣ ಕಟ್ಟಬೇಕು. ವಾಹನಗಳ ಟೋಲ್ ಶುಲ್ಕ ಕಡಿತಗೊಳಿಸಿ ಎಂದು ಈಗಾಗಲೇ ಮಾಲೀಕರು ಮತ್ತು ಚಾಲಕರು ಟೋಲ್ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ.

ಸರ್ಕಾರದ ಉಚಿತ ಶಕ್ತಿ ಯೋಜನೆ ಜಾರಿಯಾದ ಮೇಲೆ ಪ್ರಯಾಣಿಕರು ಖಾಸಗಿ ವಾಹನಗಳತ್ತ ಸುಳಿಯದಂತಾಗಿದ್ದು ಪ್ರಯಾಣಿಕರನ್ನು ಗೋಗರೆದು ಹತ್ತಿಸಿಕೊಳ್ಳಬೇಕಾಗಿದೆ. ವಾಹನಗಳ ಆದಾಯವನ್ನೇ ನಂಬಿ ಜೀವನ ನಡೆಸುತ್ತಿರುವ ಕ್ರೂಸರ್ ವಾಹನ ಚಾಲಕರು ಮತ್ತು ಮಾಲೀಕರಿಗೆ ಟೋಲ್ ಶುಲ್ಕ, ತೆರಿಗೆ, ದುಬಾರಿಯಾದ ಹಿನ್ನೆಲೆ ವಾಹನ ನಿರ್ವಹಣೆ, ಡೀಸೆಲ್ ಬೆಲೆ ಏರಿಕೆಗಳಿಂದ ದುಡಿಮೆಗೆ ದಾರಿ ಇಲ್ಲದಂತಾಗಿದೆ. 6,500 ರು. ಸಾವಿರ ಇದ್ದ ಟೈರ್ ಬೆಲೆ 9,300 ರು. ಆಗಿದೆ. ವಾಸ್ತವಾಂಶ ಇಷ್ಟೊಂದು ಕಠೋರವಾಗಿರುವಾಗ ಟೋಲ್ ದರ ಹೆಚ್ಚಳ ಮಾಡಿದರೆ ನಾವೆಲ್ಲಿಗೆ ಹೋಗಬೇಕು ಎನ್ನುತ್ತಾರೆ ವಾಹನ ಮಾಲೀಕರು.

ಒಂದು ವಾರದೊಳಗೆ ಟೋಲ್ ಶುಲ್ಕ ಕಡಿಮೆ ಮಾಡದಿದ್ದರೆ, ಎಲ್ಲಾ ವಾಹನಗಳನ್ನು ತಂದು ಟೋಲ್ ಮುಂದೆ ನಿಲ್ಲಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕ್ರೂಸರ್ ವಾಹನ ಮಾಲೀಕರು, ಚಾಲಕರು ಎಚ್ಚರಿಕೆ ನೀಡಿದ್ದಾರೆ.