ಕಿಕ್ಕೇರಿ ಹೋಬಳಿಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆ

| Published : May 26 2024, 01:40 AM IST

ಸಾರಾಂಶ

ಕೆ.ಆರ್‌ ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ಯಾದ್ಯಂತ ಗಾಳಿ ಮಳೆಗೆ ಮನೆ, ಹಾಗೂ ಮರ ಉರುಳಿ ಹಾನಿ ಮಾಡಿರುವುದು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹೋಬಳಿಯ ವಿವಿಧೆಡೆ ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯು ಸಾಕಷ್ಟು ಅವಾಂತರವನ್ನು ಸೃಷ್ಟಿಸಿದೆ. ಮಳೆಯಿಂದಾಗಿ ರೈತರಲ್ಲಿ ಹರ್ಷ ತಂದರೆ, ಮತ್ತೊಂದೆಡೆ ಕೊಟ್ಟಿಗೆ ಮನೆ, ಹಳೆ ಹೆಂಚಿನ ಮೇಲ್ಚಾವಣಿಗೆ ಹಾನಿಯಾಗಿದೆ. ಸಿಮೆಂಟ್ ಷೀಟ್ ಹಾರಿ ಹೋಗಿ ಅಪಾರ ನಷ್ಟ ಉಂಟಾಗಿದೆ.

ಕೆ.ಆರ್. ಪೇಟೆ ತಾಲೂಕಿನ ಹೆಗ್ಗಡಹಳ್ಳಿಯ ರೇಖಾ ಚಂದ್ರುರಿಗೆ ಸೇರಿದ ಕೊಟ್ಟಿಗೆಯ ಮೇಲ್ಚಾವಣಿಗೆ ಹಾಕಲಾಗಿದ್ದ ಸಿಮೆಂಟ್ ಷೀಟ್ ಗಳು ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ.

ಸಂಚಾರಕ್ಕೆ ಅದ್ವಾನ:

ಅಪಾರ ಮಳೆಯಿಂದಾಗಿ ಪಟ್ಟಣದ ಮಂದಗೆರೆ ರಸ್ತೆ ಸಂಪೂರ್ಣ ಹಾಳಾಗಿ ಪಾದಚಾರಿಗಳು, ವಾಹನ ಸವಾರರು ಓಡಾಡಲಾರದಷ್ಟು ಅಧ್ವಾನವಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಗೆ ಬಾರಿ ಗಾತ್ರದ ಮಣ್ಣಿನಮನೆ ಗೋಡೆಗಳು ನೆಲಕ್ಕುರುಳುವ ಆತಂಕ ಎದುರಾಗಿದೆ. ಶುಕ್ರವಾರ ರಾತ್ರಿ ಬಿರುಗಾಳಿ ಜೊತೆ ಸುರಿದ ಭಾರಿ ಮಳೆಯಿಂದಾಗಿ ಹಳೆಯ ಮನೆ ನಿವಾಸಿಗಳು ಈಡಿ ರಾತ್ರಿ ಜಾಗರಣೆ ಇರುವಂತೆ ಮಾಡಿದೆ. ಹೆಗ್ಗಡಹಳ್ಳಿಯ ರೇಖಾಚಂದ್ರು, ಕೊಟ್ಟಿಗೆ ಮೇಲ್ಚಾವಣಿಯ ಸಿಮೆಂಟು ಷೀಟುಗಳು ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಆಗಿಲ್ಲ.

ಅಲ್ಲದೇ ಅಕ್ಕಪಕ್ಕದ ಮನೆಗಳಲ್ಲಿಯೂ ಮಳೆ ನೀರು ಸೋರುವಂತಾಗಿದೆ. ಹೆಗ್ಗಡಹಳ್ಳಿ ಹಾಗೂ ಮಲ್ಲೇನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಬೃಹತ್‌ ಗಾತ್ರದ ಮರ ಬಿದ್ದಿದೆ. ರಸ್ತೆ ಸಂಚಾರ ಅಸ್ತವ್ಯಸ್ತವಾಗಿ ಕೆಲಕಾಲ ಗ್ರಾಮಸ್ಥರು ಓಡಾಡಲು ಪರದಾಡಿದರು.

ನಂತರ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಗ್ರಾಮಸ್ಥರ ಸಹಕಾರದಲ್ಲಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಪಟ್ಟಣದಲ್ಲಿ ರಾತ್ರಿ ಸುರಿದ ಮಳೆಯಿಂದ ಇಡೀರಾತ್ರಿ ಜನರು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಿನಲ್ಲಿ ಕಳೆಯುವಂತಾಯಿತು.

ಕಿಕ್ಕೇರಿ ಹೋಬಳಿ ಮಾತ್ರವಲ್ಲದೆ ಕೆ.ಆರ್ .ಪೇಟೆ ತಾಲೂಕಿನಾದ್ಯಂತ ಭಾರಿ ಮಳೆಯಾಗಿದ್ದು, ಸಣ್ಣಪುಟ್ಟ ಅನಾಹುತಗಳು ಸಂಭವಿಸಿದ ವರದಿಗಳಾಗಿವೆ. ನಷ್ಟ ಅನುಭವಿಸಿದ ರೈತರು, ಜನರಿಗೆ ಸೂಕ್ತ ಪರಿಹಾರ ಒದಗಿಸುವಂತೆ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

25ಕೆಎಂಎನ್ ಡಿ20,21

ಕಿಕ್ಕೇರಿ ಸಮೀಪದ ಹೆಗ್ಗಡಹಳ್ಳಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ರೇಖಾಚಂದ್ರು ಅವರ ಕೊಟ್ಟಿಗೆ ಮೇಲ್ಚಾವಣಿ ಹಾರಿ ಹೋಗಿರುವುದು.ವಿದ್ಯುತ್‌ ತಂತಿ ತುಳಿದು ಮಹಿಳೆ ಮೃತಕಿಕ್ಕೇರಿ: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಮೃತಪಟ್ಟಿರುವ ಘಟನೆ ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಲೇ. ಕಾಳೇಗೌಡರ ಪತ್ನಿ ಗಾಯಿತ್ರಮ್ಮ(45) ಸಾವನ್ನಪ್ಪಿದವರು. ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿತ್ತು. ಇಡೀರಾತ್ರಿ ವಿದ್ಯುತ್ ಸಂಪರ್ಕವಿಲ್ಲದೆ ಗ್ರಾಮ ಕಗ್ಗತ್ತಲಿನಲ್ಲಿತ್ತು. ಶನಿವಾರ ಬೆಳಗ್ಗೆ ಎದ್ದು ಜಮೀನು ನೋಡಲು ಮಹಿಳೆ ಗಾಯಿತ್ರಮ್ಮ ತೆರಳಿದ್ದಾಳೆ. ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್‌ ತಂತಿ ತುಂಡಾಗಿ ಜಮೀನಿನಲ್ಲಿ ಬಿದ್ದಿದೆ. ಇದರ ಅರಿವಿಲ್ಲದೆ ವಿದ್ಯುತ್‌ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಮೃತಳಾಗಿದ್ದಾಳೆ.ಕಿಕ್ಕೇರಿ ಪೊಲೀಸ್‌ಠಾಣೆಗೆ ಮೃತಳ ಪುತ್ರಿ ರುಕ್ಮಿಣಿ ದೂರು ನೀಡಿದ್ದಾರೆ. ವಿದ್ಯುತ್‌ ಇಲಾಖೆಯವರ ಬೇಜಾವಾಬ್ದಾರಿತನ ಈ ಅವಘಡಕ್ಕೆಕಾರಣವಾಗಿದೆ. ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ಸ್ ಸ್ಪೆಕ್ಟರ್‌ ರೇವತಿ, ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಗ್ರಾಮ ಮುಖಂಡ ಚಂದ್ರು, ಬಬ್ರುವಾಹನ ಈ ವೇಶೆ ಹಾಜರಿದ್ದರು.