ಕೊಡಗು ಜಿಲ್ಲೆಯಾದ್ಯಂತ ಮಳೆ ಅಬ್ಬರ : ಅಪಾರ ಮನೆಗಳಿಗೆ ಹಾನಿ

| Published : Jul 16 2024, 12:34 AM IST

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಪಾರ ಪ್ರಮಾಣದಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಾದ್ಯಂತ ಮಳೆ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಪಾರ ಮನೆಗಳಿಗೆ ಹಾನಿ ಸಂಭವಿಸಿದೆ. ಭಾನುವಾರ ರಾತ್ರಿ ಹಾಗೂ ಸೋಮವಾರ ಬೀಸಿದ ಭಾರಿ ಬಿರುಗಾಳಿಗೆ ಮರಗಳು ಮನೆಗಳ ಮೇಲೆ ಬಿದ್ದು, ನಷ್ಟ ಸಂಭವಿಸಿದೆ.

ಮಳೆಯಿಂದಾಗಿ ಹಾರಂಗಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಳ ಹರಿವು ಹರಿದು ಬರುತ್ತಿದೆ. ಪರಿಣಾಮ ಸುಮಾರು 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಮಂಗಳವಾರ ಕೂಡ ಜಿಲ್ಲೆಯಾದ್ಯಂತ ರಜೆ ಘೋಷಿಸಲಾಗಿದೆ.

ಜಿಲ್ಲೆಯಲ್ಲಿನ ನದಿ, ತೊರೆ, ಹಳ್ಳ ಕೊಳ್ಳ, ಜಲಾಶಯಗಳಲ್ಲಿನ ನೀರಿನ ಮಟ್ಟ ಏರಿಕೆಯಾಗಿದೆ. ಜಿಲ್ಲೆಯ ಶಾಂತಳ್ಳಿ, ಭಾಗಮಂಡಲ, ಸೋಮವಾರಪೇಟೆ, ಮಡಿಕೇರಿ, ಸುಂಟಿಕೊಪ್ಪ, ನಾಪೋಕ್ಲು, ಶನಿವಾರಸಂತೆ, ಶ್ರೀಮಂಗಲ, ಸಂಪಾಜೆ, ಹೀಗೆ ವಿವಿಧ ಕಡೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.

ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನದಿ ಏರುತ್ತಿದ್ದು ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಹೆಚ್ಚು ಮಳೆಯಾದರೆ ನಾಪೋಕ್ಲು ರಸ್ತೆ ಮೇಲೆ ನೀರು ಬರುವ ಸಂಭವವಿದೆ. ಈ ಭಾಗದಲ್ಲಿ ಸಾಧಾರಣ ಮಳೆ ಆಗುತ್ತಿದ್ದು ನೀರಿನ ಪ್ರಮಾಣ ಹೆಚ್ಚಾಗಿಲ್ಲ. ಮೊನ್ನೆ ಭಾಗಮಂಡಲ ತಲಕಾವೇರಿ ರಸ್ತೆ ನಡುವೆ ಮರ ಬಿದ್ದು ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಸೋಮವಾರಪೇಟೆ ಹೋಬಳಿಯ ನೇಗಳ್ಳಿ ಕರ್ಕಳ್ಳಿ ಗ್ರಾಮದ ನಿವಾಸಿಯಾದ ಜಯಂತಿ ಅವರ ವಾಸದ ಮನೆಯು ಭಾರಿ ಮಳೆ ಗಾಳಿಯಿಂದ ಮನೆಯ ಮೇಲೆ ಮರ ಬಿದ್ದು ಮನೆಯ ಮೇಲ್ಛಾವಣಿ ಹಂಚುಗಳು ಹಾಗೂ ಹಿಂಭಾಗದ ಗೋಡೆಯು ಪೂರ್ಣ ಹಾನಿಯಾಗಿದೆ.

ಸುಂಟಿಕೊಪ್ಪ ಅಂದೋಗೋವೆಯಲ್ಲಿ ಅಬ್ಬಾಸ್ ಎಂಬುವರ ಮನೆಯ ಶೀಟ್ ಗಳು ಗಾಳಿಯಿಂದ ಹಾರಿ ಹೋಗಿವೆ. ಶನಿವಾರ ಸಂತೆ ಗೌಡಳ್ಳಿ ಗ್ರಾಮ ಪಂಚಾಯಿತಿಯ ಚನ್ನಪುರ ಗ್ರಾಮದ ರಮೇಶ್ ಎಂಬವರ ಮನೆಯ ಗೋಡೆ ಕುಸಿದು ಭಾಗಶ ಹಾನಿಯಾಗಿದೆ.

ಮೇಕೇರಿ ಗ್ರಾಮದ ಆಯುಶ್ಯ ಎಂಬುವರ ಮನೆಯ ಗೋಡೆಯ ಒಂದು ಭಾಗ ಮಳೆಯಿಂದ ಕುಸಿದಿದೆ. ಕುಶಾಲನಗರ ತಾಲೂಕು ಅತ್ತೂರು ಗ್ರಾಮದ ಅಚ್ಚಯ್ಯ ಎಂಬುವರ ಮನೆಯ ಮೇಲ್ಚಾವಣಿಗೆ ಹಾನಿಯಾಗಿದ್ದು ಒಂದು ಭಾಗ ಗೋಡೆ ಕುಸಿದಿದೆ. 7ನೇ ಹೊಸಕೋಟೆಯ ಚಿಕ್ಕಂಜಿ ರಸ್ತೆಯಲ್ಲಿ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ತೆರು ಕಾರ್ಯಾಚರಣೆ ನಡೆದಿದೆ. ಉಳಿದಂತೆ ಜಿಲ್ಲೆಯ ವಿವಿಧೆಡೆ ಸಣ್ಣಪುಟ್ಟ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ಕೆಲವು ಕಡೆ ಕಾಂಪೌಂಡಿನ ಕಲ್ಲುಗಳು ಜಾರಿದ್ದು, ಲೈಟ್ ಕಂಬ ಮುಳುಗಿ ಬಿದ್ದಿದ್ದು ಕೆಲವು ಕಡೆ ಬಾಗಿ ನಿಂತಿವೆ.

ಕಾವೇರಿ ಲಕ್ಷ್ಮಣ ತೀರ್ಥ ನದಿಗಳ ನೀರಿನ ಮಟ್ಟ ಏರಿದೆ. ಅಬ್ಬಿ ಜಲಪಾತ ಮಳ್ಳಳ್ಳಿ ಜಲಪಾತ, ಇರ್ಪು ಜಲಪಾತ, ಚೇಲಾವರ ಜಲಪಾತಗಳಲ್ಲಿ ಹೆಚ್ಚಿನ ಪ್ರವಾಸಿಗರು ನೀರು ಧುಮುಕುವ ದೃಶ್ಯವನ್ನು ಕಣ್ಣು ತುಂಬಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಜಿಲ್ಲಾಡಳಿತದಿಂದ ಪ್ರವಾಸಿ ಸ್ಥಳಗಳಲ್ಲಿ ಮುನ್ನೆಚ್ಚರಿಕ ಕ್ರಮವನ್ನು ಕೈಗೊಂಡಿದೆ. ವಿಪತ್ತು ನಿರ್ವಹಣಾ ತಂಡದ ಮೂಲಕ ಎನ್ ಡಿಆರ್ ಎಫ್ ತಂಡ ಅನಾಹುತಗಳನ್ನು ತಡೆಯುವಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಮುಂದೆ ಸಂಭವಿಸಬಹುದಾದ ಎಲ್ಲಾ ರೀತಿಯ ನೆರವು ಕಾರ್ಯಾಚರಣೆಗೆ ಸನ್ನದ್ಧವಾಗಿದೆ.

ಮಡಿಕೇರಿ ಹೋಬಳಿ ಮರಗೋಡು ಗ್ರಾಮದ ಎಂ ಕೆ ಅಣ್ಣು ಅವರ ವಾಸದ ಮನೆಯು ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಪ್ರವೀಣ್ ಕುಮಾರ್ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರು ಭೇಟಿ ನೀಡಿ ವೀಕ್ಷಿಸಿದರು. ಈ ಕುಟುಂಬವನ್ನು ಬೇರೊಂದು ಮನೆಗೆ ಸ್ಥಳಾಂತರಿಸಿದರು.

ಮಳೆಗೆ ಮಡಿಕೇರಿ ನಗರದ ಮಂಗಳಾದೇವಿ ನಗರದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಮಳೆ ತೀವ್ರಗೊಂಡಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಎದುರಾಗಿದೆ. ಇತ್ತೀಚೆಗಷ್ಟೇ ತಡೆಗೋಡೆ ಮಾಡಲಾಗಿತ್ತು. ಆದರೂ ಭಾರಿ ಮಳೆಗೆ ಗುಡ್ಡ ಕುಸಿತವಾಗಿದೆ. ಭಾಗಮಂಡಲ ಹೋಬಳಿ ಬೆಟ್ಟತ್ತೂರು ಗ್ರಾಮದ ದೇವರಕೊಲ್ಲಿ ಎಂಬಲ್ಲಿ ಕುಡಿಯರ ಗೌರಮ್ಮ ಕರುಂಬಯ್ಯ ಅವರ ಮನೆ ಮೇಲೆ ಮರ ಬಿದ್ದು ಹೆಚ್ಚಿನ ಹಾನಿಯಾಗಿದೆ.

ಗಾಳೀಬಿಡು ಗ್ರಾಮದಲ್ಲಿ ಉರುಳಿಬಿದ್ದ ಮರ ವಿದ್ಯುತ್ ಕಂಬಗಳು: ಗಾಳೀಬೀಡು ಗ್ರಾಮದಲ್ಲಿ 24 ಗಂಟೆ ಅವಧಿಯಲ್ಲಿ 6 ಇಂಚು ಮಳೆಯಾಗಿದ್ದು, ಮರ ಬಿದ್ದು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ವಿದ್ಯುತ್ ತಂತಿ, ಕಂಬಗಳು ತುಂಡಾದ ಹಿನ್ನೆಲೆ ವಿದ್ಯುತ್ ಸಂಪರ್ಕ ಇಲ್ಲದೆ ಕೆಲವು ಗ್ರಾಮಗಳು‌ ಕತ್ತಲಲ್ಲಿ ಮುಳುಗಿದೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭಾಗಮಂಡಲ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಕೃಷಿ ಚಟುವಟಿಕೆ ಸಹ ಬಿರುಸಿನಿಂದ ನಡೆದಿದೆ. ತಹಸೀಲ್ದಾರರಾದ ಕಿರಣ್ ಗೌರಯ್ಯ, ಪ್ರವೀಣ್ ಕುಮಾರ್, ರಾಮಚಂದ್ರ, ಪೌರಾಯುಕ್ತರಾದ ವಿಜಯ್, ತಾಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ ಇತರರು ತಮ್ಮ ವ್ಯಾಪ್ತಿಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಮಳೆಗಾಲದಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವಂತೆ ಕಾರ್ಮಿಕರಿಗೆ ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ ಸಲಹೆ ಮಾಡಿದ್ದಾರೆ.

ಹಾರಂಗಿಗೆ ಹೆಚ್ಚಿದ ಒಳಹರಿವು: ಹಾರಂಗಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು ಸೋಮವಾರ 17 ಸಾವಿರ ಕ್ಯೂಸೆಕ್ ಒಳಹರಿವು ಹರಿದು ಬಂದಿದೆ. ಇದರಿಂದ 20,000 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಗರಿಷ್ಠ ಮಟ್ಟ ತಲುಪಲು ಇನ್ನೂ ಐದು ಅಡಿಗಳು ಮಾತ್ರ ಬಾಕಿ ಇವೆ. ಇಂದಿನ ನೀರಿನ ಮಟ್ಟ 2854.77 ಗರಿಷ್ಠ ಮಟ್ಟ 2859.

ಇಂದು ಕೂಡ ರಜೆ ಘೋಷಣೆ: ಭಾರಿ ಮಳೆಯ ಹಿನ್ನೆಲೆಯಲ್ಲಿ ಜು.16ರಂದು ಕೂಡ ಜಿಲ್ಲೆಯ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.