ಕಳೆದ ಒಂದು ವರ್ಷದಲ್ಲಿ ಹರಪನಹಳ್ಳಿ ವಿಭಾಗ ವ್ಯಾಪ್ತಿಯ ರಸ್ತೆ ಅಪಘಾತದಲ್ಲಿ 68 ಜನ ಸಾವನ್ನಪ್ಪಿದ್ದಾರೆ. 102 ಜನ ಗಾಯಗೊಂಡಿದ್ದಾರೆ.

ಹೂವಿನಹಡಗಲಿ: ಬೈಕ್‌ ಸವಾರರ ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಮುಂಬರುವ ದಿನಗಳಲ್ಲಿ ಎಲ್ಲ ಕಡೆಗೂ ಈ ನಿಯಮ ಜಾರಿಗೆ ತರಲಾಗುವುದು ಎಂದು ಹರಪನಹಳ್ಳಿ ವಿಭಾಗದ ಡಿವೈಎಸ್ಪಿ ಸಂತೋಷ ಚೌಹಾಣ್‌ ಹೇಳಿದರು.

ಇಲ್ಲಿನ ಪೊಲೀಸ್‌ ಠಾಣೆ ಆವರಣದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಹರಪನಹಳ್ಳಿ ವಿಭಾಗ ವ್ಯಾಪ್ತಿಯ ರಸ್ತೆ ಅಪಘಾತದಲ್ಲಿ 68 ಜನ ಸಾವನ್ನಪ್ಪಿದ್ದಾರೆ. 102 ಜನ ಗಾಯಗೊಂಡಿದ್ದಾರೆ. ಬೈಕ್‌ ಸವಾರರು ನಿರ್ಲಕ್ಷ್ಯ ತೋರದೇ ರಸ್ತೆ ನಿಯಮಗಳ ಪಾಲನೆ ಮಾಡುವ ಜತೆಗೆ, ಸಂಚಾರ ಮಾಡುವಾಗ ಮೊಬೈಲ್‌ ಬಳಕೆ ಮಾಡಬಾರದು. ಮದ್ಯ ಸೇವನೆ ಮಾಡಿ ಚಾಲನೆ ಮಾಡಬೇಡಿ. ಜತೆಗೆ ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಬೇಕು ಎಂದರು.

ಅಪ್ರಾಪ್ತ ಮಕ್ಕಳ ಕೈಗೆ ಬೈಕ್‌ ನೀಡುವುದು ಅಪರಾಧವಾಗಿದೆ. ಈ ಕುರಿತು ಇಂತಹ ಪ್ರಕರಣಗಳು ಕಂಡು ಬಂದಾಗ ದೂರು ದಾಖಲು ಮಾಡಿ, ಬೈಕ್‌ಗಳನ್ನು ವಶಕ್ಕೆ ಪಡೆಯುತ್ತೇವೆ. ಈ ಕುರಿತು ಎಲ್ಲ ಹಂತದ ಕೋರ್ಟ್‌ಗಳು ಕಟ್ಟು ನಿಟ್ಟಿನ ಸೂಚನೆ ನೀಡಿ ಸಾಕಷ್ಟು ದಂಡ ಕೂಡಾ ಹಾಕಿದ್ದಾರೆ, ಅತಿ ಹೆಚ್ಚು ಸೌಂಡ್‌ ಮಾಡುವ ಬೈಕ್‌ಗಳನ್ನು ವಶಕ್ಕೆ ಪಡೆಯುತ್ತೇವೆ ಎಂದರು.

ಸಿಪಿಐ ದೀಪಕ್‌ ಬೂಸರೆಡ್ಡಿ ಮಾತನಾಡಿ, ಜನರಿಗೆ ರಸ್ತೆ ನಿಯಮ ಜಾಗೃತಿ ಮೂಡಿಸಿದಾಗ, ತಕ್ಕಮಟ್ಟಿಗೆ ರಸ್ತೆ ಅಪಘಾತಗಳನ್ನು ತಡೆಯಲು ಸಾಧ್ಯವಿದೆ. ಜನಸಂಖ್ಯೆ ಹೆಚ್ಚಳದಿಂದ ಬೈಕ್‌ಗಳ ಸಂಖ್ಯೆಯೂ ಹೆಚ್ಚಾಗಿವೆ. ಆದರೆ ಭೂಮಿ ಮಾತ್ರ ಹೆಚ್ಚಾಗಿಲ್ಲ. ಜೀವದ ಬೆಲೆ ಅರಿತು ಎಲ್ಲರೂ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕೆಂದು ಹೇಳಿದರು.

ರಾಜ್ಯದಲ್ಲಿ 2009 ರಿಂದ ಈವರೆಗೂ 2 ಲಕ್ಷಕ್ಕೂ ಅಧಿಕ ರಸ್ತೆ ಅಪಘಾತಗಳಾಗಿವೆ, ಕಳೆದ 6 ತಿಂಗಳಲ್ಲಿ 21937 ರಸ್ತೆ ಅಪಘಾತಗಳಾಗಿದ್ದು, ಆದರಿಂದ ಅಪಘಾತದಲ್ಲಿ ಮೊದಲು ತಲೆಗೆ ಪೆಟ್ಟು ಬೀಳುತ್ತದೆ. ಹೆಲ್ಮೆಟ್‌ ಹಾಕಿದರೆ ಜೀವ ಉಳಿಸಲು ಸಾಧ್ಯವಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿ, ಇದಕ್ಕೆ ಯಾವ ಪೊಲೀಸರು ಅಡ್ಡ ಬರುವುದಿಲ್ಲ. ಜೀವ ಉಳಿಸುವ ಪ್ರಯತ್ನ ಮಾಡಿ ಅದು ಬಿಟ್ಟು ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿಯುವ ಕೆಲಸ ಮಾಡಬೇಡಿ ಎಂದರು.

ಈ ಸಂದರ್ಭದಲ್ಲಿ ಪಿಎಸ್‌ಐ ಭರತ್‌ ಪ್ರಕಾಶ ಇದ್ದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ಹೆಲ್ಮೆಟ್‌ ಹಾಕಿಕೊಂಡು ಬೈಕ್‌ ರ್‍ಯಾಲಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.