ನರೇಗಾ ಯೋಜನೆಗೆ ಕೇಂದ್ರ ಸರಕಾರ ತಿದ್ದುಪಡಿ ತಂದು ಬಡವರ ಪಾಲಿಗೆ ಅನ್ಯಾಯ ಮಾಡಿದೆ. ಇಂತಹ ತಿದ್ದುಪಡಿ ಗ್ರಾಮೀಣ ಭಾರತದ ಬದುಕನ್ನೇ ನಾಶ ಮಾಡುವ ಪ್ರಯತ್ನವಾಗಿದ್ದರಿಂದ ಯಾವುದೇ ಕಾರಣಕ್ಕೂ ಇದನ್ನು ಒಪ್ಪಲು ಸಾಧ್ಯವಿಲ್ಲ.
ಮಸೂದೆ ಅನುಷ್ಠಾನಗೊಳಿಸಿದರೆ ರಾಷ್ಟ್ರವ್ಯಾಪಿ ಹೋರಾಟ । ಪತ್ರಿಕಾಗೋಷ್ಠಿಯಲ್ಲಿ ಸಚಿವರ ಹೇಳಿಕೆ
ಕನ್ನಡಪ್ರಭ ವಾರ್ತೆ ಭಟ್ಕಳನರೇಗಾ ಯೋಜನೆಗೆ ಕೇಂದ್ರ ಸರಕಾರ ತಿದ್ದುಪಡಿ ತಂದು ಬಡವರ ಪಾಲಿಗೆ ಅನ್ಯಾಯ ಮಾಡಿದೆ. ಇಂತಹ ತಿದ್ದುಪಡಿ ಗ್ರಾಮೀಣ ಭಾರತದ ಬದುಕನ್ನೇ ನಾಶ ಮಾಡುವ ಪ್ರಯತ್ನವಾಗಿದ್ದರಿಂದ ಯಾವುದೇ ಕಾರಣಕ್ಕೂ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಇದ್ದ ಕಾಯಿದೆಯನ್ನು ಮರು ಜಾರಿ ಮಾಡಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆ ಮಾಡುವುದಲ್ಲದೇ ಸರ್ವೋಚ್ಛ ನ್ಯಾಯಾಲಯಕ್ಕೂ ಹೋಗುತ್ತೇವೆ ಎಂದು ಅವರು, ನರೇಗಾ ಯೋಜನೆಯ ಮೂಲಕ ಬದುಕು ಕಟ್ಟಿಕೊಂಡಿರುವ ದೇಶದ ೧೨ ಕೋಟಿ ಕಾರ್ಮಿಕರು ಹಾಗೂ ೬ ಕೋಟಿ ಮಹಿಳೆಯರ ಜೀವನಕ್ಕೆ ಕೇಂದ್ರ ಸರಕಾರದ ಹೊಸ ಕಾಯಿದೆಯಿಂದ ವಂಚನೆಯಾಗಿದೆ. ಅಂದು ಗ್ರಾಮ ಮಟ್ಟದಲ್ಲಿ ಕೂಲಿ ಕೆಲಸ ನಿಗದಿಯಾಗಿದ್ದರೆ ಇಂದು ದೆಹಲಿ ಮಟ್ಟದಲ್ಲಿ ನಿಗದಿಯಾಗಬೇಕಿದೆ ಎಂದು ಕಿಡಿಕಾರಿದರು.ವಿಬಿಜಿ ರಾಮ್ ಜಿ ಯೋಜನೆ ಜಾರಿಗೆ ತರಲು ಹೊರಟಿರುವ ಕೇಂದ್ರ ಸರಕಾರ, ನರೇಗಾ ಕೂಲಿಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಇದು ಬಡವರ ವಿರೋಧಿ ಕಾಯ್ದೆಯಾಗಿದ್ದು, ಗ್ರಾಮೀಣ ಭಾರತದ ಬದುಕನ್ನೇ ನಾಶ ಮಾಡುವ ಪ್ರಯತ್ನವಾಗಿದ್ದರಿಂದ ಯಾವುದೇ ಕಾರಣಕ್ಕೂ ಇದನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಪಕ್ಷ ದೇಶದಾದ್ಯಂತ ಇದೇ ಜನವರಿ ತಿಂಗಳಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದು, ಕಾಯಿದೆ ವಾಪಸಾತಿಯ ತನಕ ವಿರಮಿಸುವುದಿಲ್ಲ ಎಂದು ಹೇಳಿದರು.
ನರೇಗಾ ಯೋಜನೆಯ ಮೂಲ ಉದ್ದೇಶವನ್ನೇ ಹಾಳು ಮಾಡುವ ಈ ತಿದ್ದುಪಡಿಯನ್ನು ಕೇಂದ್ರ ಸರಕಾರ ತಕ್ಷಣ ವಾಪಸ್ ಪಡೆಯಬೇಕೆಂದು ಗ್ರಾಮ ಮಟ್ಟದಿಂದಲೇ ಒತ್ತಡ ಹೇರಲಾಗುವುದು ಎಂದೂ ಹೇಳಿದರು. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕಾಯಿದೆ ಕುರಿತು ಚರ್ಚೆ ಮಾಡಲೂ ಅವಕಾಶ ಕೊಡದೇ ತರಾತುರಿಯಲ್ಲಿ ಜಾರಿ ಮಾಡಿದ್ದಾರೆ. ಇಂದಿರಾ ಅವಾಜ್ ಯೋಜನೆ ತೆಗೆದು ಪ್ರಧಾನ ಮಂತ್ರಿ ಆವಾಸ್ ಮಾಡಿದರು. ಕೇವಲ ಹೆಸರು ಬದಲಾವಣೆ ಮಾಡಿದರೆ ಉದ್ದೇಶ ಸಫಲವಾಗುವುದೇ ಎಂದು ಪ್ರಶ್ನಿಸಿದ ಅವರು ಅಂದಿನಿಂದಲೂ ಸುಳ್ಳು ಹೇಳಿಕೊಂಡು ಬಂದಿರುವ ಕೇಂದ್ರ ಸರಕಾರ ಉದ್ಯೋಗ ಕೊಡುತ್ತೇವೆ ಎಂದು ಬಂದ ಇವರು ಉದ್ಯೋಗ ತೆಗೆದರು ಎಂದರು.ಕೇಂದ್ರ ಸರಕಾರ ರಾಜ್ಯಕ್ಕೆ ಮೊದಲಿನಿಂದಲೂ ಅನ್ಯಾಯ ಮಾಡುತ್ತಲೇ ಬಂದಿದೆ. ನಮ್ಮ ತೆರಿಗೆ ಹಣವನ್ನು ನಮಗೆ ಕೊಡಲು ಹಿಂದೇಟು ಹಾಕುತ್ತಿರುವ ಕೇಂದ್ರದ ನೀತಿಯಿಂದ ರಾಜ್ಯದಲ್ಲಿ ಅಭಿವೃದ್ಧಿಗೆ ತೊಡಕಾಗಿದೆ. ಜನತೆ ಬುದ್ಧಿವಂತರು, ಬಿಜೆಪಿ ಇದೇ ರೀತಿ ಜನರಿಗೆ ಅನ್ಯಾಯವಾಗುವ ಯೋಜನೆ ಮಾಡುತ್ತಾ ಹೋದರೆ ಚುನಾವಣೆಯಲ್ಲಿ ಜನತೆ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಗ್ಯಾರಂಟಿ ಅನುಷ್ಠಾನ ಯೋಜನೆ ಅಧ್ಯಕ್ಷ ರಾಜು ನಾಯ್ಕ, ಇಮಶಾದ್, ರಮೇಶ ನಾಯ್ಕ, ಮಂಜಪ್ಪ ನಾಯ್ಕ, ನಾರಾಯಣ ನಾಯ್ಕ, ಭಾಸ್ಕರ ಮೊಗೇರ, ಸುಧಾಕರ ನಾಯ್ಕ ಮುಂತಾದರಿದ್ದರು.
ಆಗ ಒಪ್ಪಿಗೆ, ಇಂದು ವಿರೋಧ: ವೈದ್ಯ ಟೀಕೆನದಿ ಜೋಡಣೆಯ ಬಗ್ಗೆ ಇಂದು ವಿರೋಧ ಮಾಡುವ ಕಾಗೇರಿಯವರು ಸ್ಪೀಕರ್ ಇದ್ದಾಗಲೇ ಈ ಯೋಜನೆ ಜಾರಿಗೆ ಸರಕಾರ ಒಪ್ಪಿಗೆ ನೀಡಿತ್ತು. ಜಿಲ್ಲೆಯಲ್ಲಿ ಬಿಜೆಪಿಯ ಐವರು ಶಾಸಕರಿದ್ದರೂ ಸಹ ಅಂದು ಯಾರೂ ವಿರೋಧ ಮಾಡಿಲ್ಲ. ಕಾಗೇರಿಯವರು ಅಂದು ಹಾವೇರಿ, ಕೊಪ್ಪಳ, ಬಳ್ಳಾರಿ, ಗದಗಕ್ಕೆ ನೀರು ಕೊಡಲು ಈ ಯೋಜನೆಗೆ ಒಪ್ಪಿಗೆ ನೀಡಿದ್ದರು. ಅವರೇ ಇಂದು ವಿರೋಧ ಮಾಡುತ್ತಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಟೀಕಿಸಿದರು.
ಕೇಂದ್ರ ಸರಕಾರಕ್ಕೆ ಸಂಸದರ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ರದ್ದುಪಡಿಸಲಿ ಎಂದರು. ನಾನು ಈ ಯೋಜನೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತೇನೆ. ನಾನು ಗುರುಗಳ ಆಜ್ಞಾನುಸಾರ ನಡೆದುಕೊಳ್ಳುವ ವ್ಯಕ್ತಿ ಯಾವುದೇ ಗುರುಗಳಾಗಲಿ ಅವರ ಅಣತಿಯಂತೆಯೇ ನಾನು ಹೋಗುತ್ತೇನೆ. ಈ ಯೋಜನೆ ವಿರೋಧ ಮಾಡುವಲ್ಲಿ ಕೂಡ ಗುರುಗಳೊಂದಿಗೆ ನಾನಿದ್ದೇನೆ ಎಂದರು.