ಸಿಎಂ ಬದಲಾವಣೆ ಹೈಕಮಾಂಡ್ ತೀರ್ಮಾನವೇ ಅಂತಿಮ: ಕೆ.ಎಂ.ಉದಯ್

| Published : Nov 11 2025, 01:45 AM IST

ಸಾರಾಂಶ

ನವೆಂಬರ್ ಕ್ರಾಂತಿ ವಿಪಕ್ಷಗಳ ಅಪಪ್ರಚಾರ. ಸಿಎಂ ಬದಲಾವಣೆ ಯಾವುದೇ ಸಂಬಂಧವಿಲ್ಲ. ಸರ್ಕಾರ ಮತ್ತು ಪಕ್ಷದಲ್ಲಿ ಏನೇ ಬೆಳವಣಿಗೆಯಾದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಂ ಬದಲಾವಣೆ ವಿಚಾರದಲ್ಲಿ ಹಾದಿ ಬೀದಿಯಲ್ಲಿ ಹೋಗೋರೆಲ್ಲ ಚರ್ಚೆ ಮಾಡಿದರೆ ಅದಕ್ಕೆ ಬೆಲೆ ಕೊಡುವ ಅಗತ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಶಾಸಕ ಕೆ.ಎಂ.ಉದಯ್ ಸೋಮವಾರ ಹೇಳಿದರು.

ತಾಲೂಕಿನ ದೊಡ್ಡ ಅಂಕನಹಳ್ಳಿಯಲ್ಲಿ ಶಿಂಷಾ ಎಡದಂಡೆ ನಾಲೆಯ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 1 ಕೋಟಿ ರು. ವೆಚ್ಚದ ಆಂತರಿಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ. ಇದರಲ್ಲಿ ಯಾವುದೇ ರೀತಿ ಅನುಮಾನ ಬೇಡ. ಯಾವ ಸಂದರ್ಭದಲ್ಲಿ ಅವರನ್ನು ಸಿಎಂ ಮಾಡಬೇಕು ಎನ್ನುವುದನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.

ನವೆಂಬರ್ ಕ್ರಾಂತಿ ವಿಪಕ್ಷಗಳ ಅಪಪ್ರಚಾರ. ಸಿಎಂ ಬದಲಾವಣೆ ಯಾವುದೇ ಸಂಬಂಧವಿಲ್ಲ. ಸರ್ಕಾರ ಮತ್ತು ಪಕ್ಷದಲ್ಲಿ ಏನೇ ಬೆಳವಣಿಗೆಯಾದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಂ ಬದಲಾವಣೆ ವಿಚಾರದಲ್ಲಿ ಹಾದಿ ಬೀದಿಯಲ್ಲಿ ಹೋಗೋರೆಲ್ಲ ಚರ್ಚೆ ಮಾಡಿದರೆ ಅದಕ್ಕೆ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.

ಈ ವೇಳೆ ಟಿಎಪಿಸಿಎಂಎಸ್ ನಿರ್ದೇಶಕ ಶಂಕರ್ ಲಿಂಗಯ್ಯ, ಶಿವರಾಮು ರವಿ, ಕೃಷ್ಣೇಗೌಡ ಹಾಗೂ ಗ್ರಾಮದ ಮುಖಂಡರು ಇದ್ದರು.

ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಕಿಡಿ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ನೇರವಾಗಿ ಹೇಳುವುದೇನಂದರೆ ಮಾನ ಮರ್ಯಾದೆ, ನಾಚಿಕೆ ಇದೆಯಾ, ಅಭಿವೃದ್ಧಿ ಕಾರ್ಯ ಮಾಡೋದು ಬಿಟ್ಟು, ಯಾವುದೇ ಅಭಿವೃದ್ಧಿ ಮಾಡದೆ ಅದನ್ನು ಮರೆಮಾಚಲಿಕ್ಕೆ ಆರ್.ಎಸ್.ಎಸ್‌ನ ಎಳೆದು ತರುತ್ತಿದ್ದೀರಿ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಕಿಡಿಕಾರಿದರು.

೧೦೦ವರ್ಷ ತುಂಬಿದ ಆರ್.ಎಸ್.ಎಸ್.ಸಂಘಟನೆ ಬಗ್ಗೆ ಲಘುವಾಗಿ ಮಾತನಾಡುವ ನೈತಿಕತೆ ಕಾಂಗ್ರೆಸ್‌ನವರಿಗೆ ಇಲ್ಲ, ಇನ್ನೂ ೧೦೦ವರ್ಷ ಕಾಂಗ್ರೆಸ್ ಹುಟ್ಟಿ ಬಂದ್ರೂ ಏನೂ ಮಾಡಲಿಕ್ಕೆ ಸಾಧ್ಯವಿಲ್ಲ, ದಮನ ಮಾಡಲು ರಾಜಕೀಯ ಷಡ್ಯಂತ್ರ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಹಿಂದೂಪರ ಸಂಘಟನೆಯಾಗಿ ಹುಟ್ಟಿದೆ, ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಹೆಚ್ಚಿಸಿದೆ. ದಿಲ್ಲಿಯಿಂದ ಹಳ್ಳಿ ಹಳ್ಳಿಯವರೆಗೂ ಗಟ್ಟಿಯಾಗಿ ಬೆಳೆಯುತ್ತಿದೆ. ಸಂಘಟನೆಯ ಶಕ್ತಿಯಿಂದ ದೇಶದ್ರೋಹಿಗಳು ಬೆಚ್ಚಿದ್ದಾರೆ. ವಿದ್ವಂಸಕ ಕೃತ್ಯಗಳು ನಿಂತಿವೆ, ಅನಾಚಾರ, ಆಕ್ರಮಣಕ್ಕೆ ತಡೆಯಾಗಿದೆ, ಗೋವು ಸೇರಿದಂತೆ ಮೂಕಪ್ರಾಣಿಗಳ ಕಳ್ಳ ಸಾಗಾಣಿಕೆ, ಹತ್ಯೆಗೆ ತಡೆಯಾಗಿದೆ ಎಂದು ಕಿವಿಮಾತೇಳಿದರು.

ಕೋವಿಡ್-೧೯ರ ದಿನಗಳಲ್ಲಿ ಆರ್.ಎಸ್.ಎಸ್ ಸಂಘಟನೆಯು ಸಂಕಷ್ಟದಲ್ಲಿದ್ದ ಎಲ್ಲಾ ಧರ್ಮೀಯ ಜನಾಂಗಕ್ಕೂ ನೆರವು ನೀಡಿದೆ, ಮೂಲಭೂತ ಸೌಕರ್ಯ ನೀಡಿ ಹಾರೈಕೆ ಮಾಡಿರುವುದು ಸಚಿವ ಪ್ರಿಯಾಂಕ್ ಖರ್ಗೆಗೆ ಮರೆತೋಗಿದೆ ಎಂದು ಗುಡುಗಿದರು.