ಚಂಗಡಿ ಗ್ರಾಮಸ್ಥರು ಸಹಮತ ನೀಡಿದರೆ ಸ್ಥಳಾಂತರ

| Published : Nov 11 2025, 01:45 AM IST

ಸಾರಾಂಶ

ಗ್ರಾಮಸ್ಥರು ಪುನರ್ವಸತಿಗೆ ಎಲ್ಲಾ ರೀತಿಯಲ್ಲಿಯೂ ಸಹಮತವನ್ನು ವ್ಯಕ್ತಪಡಿಸಿದರೆ ಮಾತ್ರ ಈ ಗ್ರಾಮವನ್ನು ಸ್ಥಳಾಂತರಪಡಿಸುವುದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ. ಆರ್‌. ಮಂಜುನಾಥ್ ತಿಳಿಸಿದರು.

ಕುಂದು ಕೊರತೆ ಸಭೆಯಲ್ಲಿ ಶಾಸಕ ಎಂ. ಆರ್‌. ಮಂಜುನಾಥ್ ಹೇಳಿಕೆ

------------------------------10ಸಿಎಚ್ಎನ್‌11ಹನೂರು ತಾಲೂಕಿನ ಕಾಡಂಚಿನ ಚಂಗಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕುಂದು ಕೊರತೆ ಸಭೆಯಲ್ಲಿ ಶಾಸಕ ಮಂಜುನಾಥ್‌ ಮಾತನಾಡಿದರು.

..................

ಕನ್ನಡಪ್ರಭ ವಾರ್ತೆ, ಹನೂರು

ಗ್ರಾಮಸ್ಥರು ಪುನರ್ವಸತಿಗೆ ಎಲ್ಲಾ ರೀತಿಯಲ್ಲಿಯೂ ಸಹಮತವನ್ನು ವ್ಯಕ್ತಪಡಿಸಿದರೆ ಮಾತ್ರ ಈ ಗ್ರಾಮವನ್ನು ಸ್ಥಳಾಂತರಪಡಿಸುವುದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ. ಆರ್‌. ಮಂಜುನಾಥ್ ತಿಳಿಸಿದರು.

ತಾಲೂಕಿನ ಕಾಡಂಚಿನ ಚಂಗಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕುಂದು ಕೊರತೆ ಆಲಿಸಿ ನಂತರ ಅವರು ಮಾತನಾಡಿದರು.

ತಮಗೆ ಸರ್ಕಾರದಿಂದ ಬದಲಿ ಜಾಗವನ್ನು ಎಲ್ಲೇಮಾಳೆ ರಸ್ತೆಯ ಬಳಿ ಈಗಾಗಲೇ ಜಮೀನು ಗುರುತು ಮಾಡಲಾಗಿದೆ. ಚಂಗಡಿ ಗ್ರಾಮವು ಸುಮಾರು 485 ಎಕರೆಷ್ಟು ವಿಸ್ತೀರ್ಣ ಹೊಂದಿದ್ದು, ಈ ಸಂಬಂಧ ಪುನರ್ವಸತಿಯಾದರೆ ಕಾನೂನು ಬದ್ಧವಾಗಿ ನಿಮಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಭರವಸೆಯನ್ನು ನೀಡಲಾಗುವುದು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಿರುವ ಚಂಗಡಿ ಗ್ರಾಮದ ನಿವಾಸಿಗಳ ದಶಕಗಳ ಬೇಡಿಕೆಯಾಗಿದ್ದ ಚಂಗಡಿ ಗ್ರಾಮವನ್ನು ಸ್ಥಳಾಂತರ ಪಡಿಸುವ ವಿಚಾರವಾಗಿ ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಲು ಬಂದಿದ್ದೇನೆ. ಈ ಕಾಡಂಚಿನ ಭಾಗದಲ್ಲಿ ವಾಸವಿರುವುದರಿಂದ ಮೂಲಭೂತ ಸೌಕರ್ಯಗಳು ಕೊರತೆ ಹೆಚ್ಚಾಗಿದ್ದು, ನಿಮಗೆ ಕಾಡು ಪ್ರಾಣಿಗಳ ಹಾವಳಿಯಿಂದ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಇದನ್ನು ಮನಗಂಡು ಇದಕ್ಕೆ ಪರ್ಯಾಯವಾಗಿ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆ ಹಾಗೂ ಸಂಬಂಧಿತ ಇನ್ನಿತರೇ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮತ್ತೊಂದು ಬಾರಿ ಚರ್ಚೆ ನಡೆಸುತ್ತೇನೆ, ಜೊತೆಗೆ ಸರ್ಕಾರಕ್ಕೆ ಚಂಗಡಿ ಗ್ರಾಮದ ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಸಾಮೂಹಿಕ ನಾಯಕತ್ವದ ನಾಯಕ ಹೊನ್ನೂರು ಪ್ರಕಾಶ್ ಮಾತನಾಡಿ, ಈ ಹಿಂದೆ ತಮ್ಮ ಗ್ರಾಮಸ್ಥರೆಲ್ಲರ ಅಭಿಪ್ರಾಯದೊಂದಿಗೆ ಸ್ಥಳ ಪರಿಶೀಲನೆ ಮಾಡಿ ಎಲ್ಲರೂ ಒಪ್ಪಿಗೆ ಪಡೆದು ಎಲ್ಲ ಪ್ರಕ್ರಿಯೆಗಳು ಮುಗಿದಿದ್ದವು. ಆದರೆ ತದನಂತರಕೆಲವು ಕಾರಣಾಂತರಗಳಿಂದ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಇದೀಗ ಶಾಸಕ ಎಂ.ಆರ್‌. ಮಂಜುನಾಥ್ ಚಂಗಡಿ ಗ್ರಾಮವನ್ನು ಸ್ಥಳಾಂತರ ಕುರಿತು ಕ್ರಮ ವಹಿಸುತ್ತೇವೆ ಎಂದು ಹೇಳಿದ್ದು ನಮಗೆ ತೃಪ್ತಿಕರವಾಗಿದೆ. ಮಂಜುನಾಥ್ ರವರು ಹೇಳಿದಂತಹ ಕೆಲಸಗಳನ್ನು ಮಾಡುತ್ತಲ್ಲೆ ಬಂದಿದ್ದಾರೆ. ಅದನ್ನು ನಾವು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ ಅದರಂತೆ ಈ ಕೆಲಸ ಕೂಡ ಆಗುತ್ತದೆ ಎಂದು ನಂಬಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಹಸಿರು ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘಟನೆಯ ಮುಖಂಡರಾದ ಅಮೋಘ, ಶಾಂತ್ ಕುಮಾರ್, ಕುರಟ್ಟಿ ಹೊಸೂರು ಮಾಜಿ ಗ್ರಾಂ. ಪಂ ಅಧ್ಯಕ್ಷರಾದ ಮುನಿಸಿದ್ದ, ಡಿ.ಆರ್. ಹಾರ್ಡ್ ವೇರ್ ಸೀನಪ್ಪ, ರೈತ ಮುಖಂಡ ಕರಿಯಪ್ಪ, ದಂಟಳ್ಳಿ ಗ್ರಾಮದ ಗ್ರಾಮಸ್ಥರು, ಪೊನ್ನಾಚ್ಚಿ, ಭದ್ರಯ್ಯನ ಹಳ್ಳಿ, ಹಾಗೂ ಇತರೆ ಗ್ರಾಮಸ್ಥರು ಉಪಸ್ಥಿತರಿದ್ದರು.