ಸಿನಿಮಾ ಟಿಕೆಟ್‌ಗೆ ಗರಿಷ್ಠ ₹200ರ ಮಿತಿ: ಹೈ ತಡೆ

| Published : Sep 24 2025, 02:10 AM IST

ಸಿನಿಮಾ ಟಿಕೆಟ್‌ಗೆ ಗರಿಷ್ಠ ₹200ರ ಮಿತಿ: ಹೈ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮಲ್ಟಿಪ್ಲೆಕ್ಸ್‌ಗಳು ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಟಿಕೆಟ್‌ಗೆ ಗರಿಷ್ಠ 200 ರು. ದರ ಮಿತಿ ನಿಗದಿಪಡಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕರ್ನಾಟಕ ಸಿನಿಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು-2025’ಕ್ಕೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸರ್ಕಾರದ ನಿಯಮ ಪ್ರಶ್ನಿಸಿ ಮಲ್ಲಿಪ್ಲೆಕ್ಸ್‌ಗಳ ಅರ್ಜಿವಾದ ಮನ್ನಿಸಿ ಮಧ್ಯಂತರ ತಡೆಯಿತ್ತ ಹೈಕೋರ್ಟ್‌

---

ಸಿನಿಮಾ ಹಾಲ್‌ ನಿರ್ಮಿಸಲು ಕೋಟ್ಯಂತರ ವೆಚ್ಚ ಮಾಡಲಾಗಿದೆ. ಹೀಗಾಗಿ ಟಿಕೆಟ್‌ಗೆ 200 ರು. ಅಥವಾ ಇಂತಿಷ್ಟೇ ದರ ಎಂದು ಸರ್ಕಾರ ಹೇಳಲಾಗದು

ಸಿನಿಮಾ ನಿರ್ಮಿಸಲು ಸಾಕಷ್ಟು ಶ್ರಮ, ಬಂಡವಾಳ ಬೇಕು. ಅಂಕಿ-ಅಂಶ ಸಂಗ್ರಹಿಸದೆ ಸರ್ಕಾರ ಸ್ವೇಚ್ಛೆಯ ನಿರ್ಧಾರ ಕೈಗೊಂಡಿದೆ. ಇದು ವಿವೇಚನಾರಹಿತ

2017ರಲ್ಲೂ ಸರ್ಕಾರ 200 ರು. ದರ ನಿಗದಿಪಡಿಸಿ ಬಳಿಕ ಆದೇಶ ಹಿಂಪಡೆದಿತ್ತು. ಇದೀಗ ಎಂಟು ವರ್ಷಗಳ ಬಳಿಕವೂ ಮತ್ತೆ 200 ರು. ದರ ನಿಗದಿಪಡಿಸಿದೆ

---ಕನ್ನಡಪ್ರಭ ವಾರ್ತೆ ಬೆಂಗಳೂರು

ಮಲ್ಟಿಪ್ಲೆಕ್ಸ್‌ಗಳು ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಟಿಕೆಟ್‌ಗೆ ಗರಿಷ್ಠ 200 ರು. ದರ ಮಿತಿ ನಿಗದಿಪಡಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕರ್ನಾಟಕ ಸಿನಿಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು-2025’ಕ್ಕೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸರ್ಕಾರದ ನಿಯಮ ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಮತ್ತಿತರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರ ಪೀಠ, ‘ಅರ್ಜಿ ಕುರಿತು ಈ ನ್ಯಾಯಾಲಯ ಮುಂದಿನ ಆದೇಶ ಹೊರಡಿಸುವವರೆಗೆ ‘ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025’ಕ್ಕೆ ತಡೆಯಾಜ್ಞೆ ನೀಡಲಾಗಿದೆ’ ಎಂದು ತಿಳಿಸಿ ಮಧ್ಯಂತರ ಆದೇಶ ಮಾಡಿತು.

ರಾಜ್ಯ ಸರ್ಕಾರ 2025ರ ಸೆ.12ರಿಂದ ಅನ್ವಯವಾಗುವಂತೆ ‘ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025’ ಜಾರಿಗೆ ತಂದಿತ್ತು. ಅದನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್‌ಟೈನ್‌ನ್ಮೆಂಟ್‌ ಹಾಗೂ ವಿ.ಕೆ.ಫಿಲಂಸ್‌ ಹೈಕೋರ್ಟ್‌ಗೆ ಪ್ರತ್ಯೇಕ ತಕರಾರು ಅರ್ಜಿಗಳನ್ನು ಸಲ್ಲಿಸಿವೆ.

ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಿನಿಮಾ ವೀಕ್ಷಕರು ಮತ್ತು ಸಿನಿಮಾ ಪ್ರದರ್ಶಕರ ಆಯ್ಕೆಯ ಹಕ್ಕಿನ ವಿಚಾರ ಇಲ್ಲಿದೆ. ಸಿನಿಮಾ ಹಾಲ್‌ಗಳನ್ನು ನಿರ್ಮಿಸಲು ಕೋಟ್ಯಂತರ ರು. ವೆಚ್ಚ ಮಾಡಲಾಗಿದೆ. ಇಲ್ಲಿ 200 ರು. ಅಥವಾ ಇಂತಿಷ್ಟೇ ದರಕ್ಕೆ ಟಿಕೆಟ್‌ ಮಾರಾಟ ಮಾಡಬೇಕು ಎಂದು ಸರ್ಕಾರ ಹೇಳಲಾಗದು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳು ಕಾನೂನುಬಾಹಿರ ಎಂದು ಆಕ್ಷೇಪಿಸಿದ್ದರು.

ಸರ್ಕಾರದ ನಿರ್ಧಾರ ವಿವೇಚನಾರಹಿತವಾಗಿದೆ. ಸಿನಿಮಾ ನಿರ್ಮಿಸಲು ಸಾಕಷ್ಟು ಶ್ರಮ, ಬಂಡವಾಳ ಬೇಕಾಗುತ್ತದೆ. ಅಂಕಿ-ಅಂಶ ಸಂಗ್ರಹಿಸದೆ ಸರ್ಕಾರ ಸ್ವೇಚ್ಛೆಯ ನಿರ್ಧಾರ ಕೈಗೊಂಡಿದೆ. 2017ರಲ್ಲೂ ಸರ್ಕಾರ 200 ರು. ದರ ನಿಗದಿಪಡಿಸಿತ್ತು, ಬಳಿಕ ಆದೇಶ ಹಿಂಪಡೆದಿತ್ತು. ಇದೀಗ ಎಂಟು ವರ್ಷಗಳ ಬಳಿಕವೂ ಮತ್ತೆ 200 ರು. ದರ ನಿಗದಿಪಡಿಸಿದೆ. ಯಾವುದೇ ದತ್ತಾಂಶ ಮತ್ತು ಕಾನೂನು ನೆರವು ಇಲ್ಲದೆ ಸರ್ಕಾರ ಟಿಕೆಟ್‌ ದರ ಮಿತಿ ಹೇರಿದೆ. ಇದು ಸ್ವೇಚ್ಛೆಯ ಕ್ರಮವಾಗಿದ್ದು, ಅರ್ಜಿದಾರರ ಹಕ್ಕು ಕಸಿಯಲಾಗಿದೆ. ಹೀಗಾಗಿ ಟಿಕೆಟ್‌ ದರ ಮಿತಿ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದ್ದರು.

ಸರ್ಕಾರದ ಪರ ವಕೀಲರು, ಸಾರ್ವಜನಿಕರ ಹಿತದೃಷ್ಟಿಯಿಂದ ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಇದನ್ನು ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು. ದರ ನಿಗದಿ ಕುರಿತ ಕರಡು ಅಧಿಸೂಚನೆಗೆ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಅರ್ಜಿದಾರರಲ್ಲಿ ಕೆಲವರು ಸಹ ಆಕ್ಷೇಪಣೆ ಸಲ್ಲಿಸಿದ್ದರು. ಎಲ್ಲ ಆಕ್ಷೇಪಣೆಗಳನ್ನು ಪರಿಗಣಿಸಿ ತೀರ್ಮಾನಿಸಲಾಗಿದೆ. ಟಿಕೆಟ್ ದರ ನಿಯಂತ್ರಣಕ್ಕೆ ಸರ್ಕಾರಕ್ಕೆ ಅವಕಾಶವಿದೆ ಎಂದು ಸಮರ್ಥಿಸಿಕೊಂಡಿದ್ದರು.