ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ಪಟ್ಟಣದ ಶಾಸಕರ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಎದುರಿಸುತ್ತಿರುವ ಕುಂದುಕೊರತೆಗಳು, ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳು ಹಾಗೂ ಪಕ್ಷ ಸಂಘಟನೆಯಲ್ಲಿ ಎಸ್ಸಿಗಳ ಪಾತ್ರ ಕುರಿತಂತೆ ಸಭೆ ಬುಧವಾರ ಸಂಜೆ ಜರುಗಿತು.ಕೆಪಿಸಿಸಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಧರ್ಮಸೇನ ಸಭೆ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಎಸ್ಸಿ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. 371ಜೆ ಅಡಿ ದೊರೆಯುವ ವಿಶೇಷ ಸೌಲಭ್ಯಗಳನ್ನು ಸಮುದಾಯದವರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಮುಂದಿನ ತಾಪಂ, ಜಿಪಂ ಚುನಾವಣೆಗಳಲ್ಲಿ ಪಕ್ಷ ನಿಷ್ಠ, ಕ್ರಿಯಾಶೀಲ ಮತ್ತು ಸಂಘಟನೆಯ ಹಿತಕ್ಕಾಗಿ ಶ್ರಮಿಸುವವರಿಗೆ ಮಾತ್ರ ಟಿಕೆಟ್ ನೀಡಲಾಗುವುದು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದೇವೆ ಎಂಬ ಬಿಜೆಪಿ ಮಾಡಿದ ಆರೋಪಗಳು ಅಸತ್ಯ ಹಾಗೂ ನಿರರ್ಥಕ ಎಂದು ಹೇಳಿದರು.
ಈ ವೇಳೆ ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಸರ್ಕಾರವು ಗುತ್ತಿಗೆ ಆಧಾರಿತ ಹುದ್ದೆಗಳನ್ನು ಪರಿಶಿಷ್ಟ ಸಮುದಾಯದವರಿಗೂ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ಒದಗಿಸುವತ್ತ ತಕ್ಷಣ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಎಸ್ಸಿ ಸಮುದಾಯದ ಪಾತ್ರ ಮಹತ್ವದ್ದಾಗಿದೆ ಎಂರು.ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ವೀರಾಂಜನೇಯಲು ಮಾತನಾಡಿದರು. ಸಭೆಯಲ್ಲಿ ಪಾಲ್ಗೊಂಡ ಸಮುದಾಯದ ಪ್ರಮುಖರು ತಮ್ಮ ಸಮಸ್ಯೆ ಹಂಚಿಕೊಂಡರು. ನಿಗಮ, ಬೋರ್ಡು ಹಾಗೂ ಪಕ್ಷ ಸಂಘಟನೆಯಲ್ಲಿ ಎಸ್ಸಿಗಳಿಗೆ ಉನ್ನತ ಹುದ್ದೆ ನೀಡಬೇಕು, ಮೂಲ ಕಾರ್ಯಕರ್ತರನ್ನು ಕಡೆಗಣಿಸುವ ಪ್ರವೃತ್ತಿಗೆ ತಡೆ ಹಾಕಬೇಕು, ಮಹಿಳೆಯರ ಪ್ರಾತಿನಿಧ್ಯತೆ ಹೆಚ್ಚಿಸಬೇಕು, ಅರ್ಹ ಹಾಗೂ ನಿಷ್ಠಾವಂತರಿಗೆ ಮಾತ್ರ ಚುನಾವಣಾ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟರು.
ಕಾರ್ಯಕ್ರಮದಲ್ಲಿ ಎಸ್ಸಿ ಬ್ಲಾಕ್ ಅಧ್ಯಕ್ಷ ಆರ್.ಎಂ. ರಾಮಯ್ಯ, ಕೆಪಿಸಿಸಿ ಉಪಾಧ್ಯಕ್ಷ ಖದಿರಾಮ ರಾಥೋಡ್, ನಾಗರಾಜ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಪ್ರಮುಖರಾದ ಹಬೀಬ್ ರೆಹಮಾನ್, ಲಡ್ಡು ಹೊನ್ನೂರವಲಿ, ಸೈಯ್ದ್ ಉಸ್ಮಾನ್, ಎಚ್. ಜಗದೀಶ, ಎಚ್. ಜಡೆಪ್ಪ, ಮಲಿಯಪ್ಪ, ಶ್ರೀಗುರು ಸೇರಿ ಅನೇಕರಿದ್ದರು.