ಹಿಂದೂಗಳ ಕೆಣಕಿ ಆಚರಣೆಗಳ ಬಂದ್‌ಗೆ ಹುನ್ನಾರ

| Published : Sep 29 2025, 01:03 AM IST

ಸಾರಾಂಶ

ಬಹುಸಂಖ್ಯಾತ ಹಿಂದೂ ಸಮಾಜದ ಭಾವನೆಗಳನ್ನು ಕೆಣಕುವ ಪ್ರಯತ್ನ ನಿರಂತರ ನಡೆಯುತ್ತಿದ್ದು, ಹಿಂದೂಗಳ ಹಬ್ಬ, ಆಚರಣೆಗಳನ್ನೇ ಶಾಶ್ವತವಾಗಿ ಬಂದ್ ಮಾಡಿಸುವ ಹುನ್ನಾರ ನಡೆದಿದೆ ಎಂದು ಸಂಘ ಪರಿವಾರದ ಮುಖಂಡ ಕಾರ್ಕಳದ ಆದರ್ಶ ಗೋಖಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಸಂಘ ಪರಿವಾರ ಮುಖಂಡ ಕಾರ್ಕಳದ ಆದರ್ಶ ಗೋಖಲೆ ಆಕ್ರೋಶ ।

- ಕಾರ್ಲ್ ಮಾರ್ಕ್ಸ್ ನಗರ ದಾಳಿ ಖಂಡಿಸಿ ಪ್ರತಿಭಟನಾ ಸಭೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಬಹುಸಂಖ್ಯಾತ ಹಿಂದೂ ಸಮಾಜದ ಭಾವನೆಗಳನ್ನು ಕೆಣಕುವ ಪ್ರಯತ್ನ ನಿರಂತರ ನಡೆಯುತ್ತಿದ್ದು, ಹಿಂದೂಗಳ ಹಬ್ಬ, ಆಚರಣೆಗಳನ್ನೇ ಶಾಶ್ವತವಾಗಿ ಬಂದ್ ಮಾಡಿಸುವ ಹುನ್ನಾರ ನಡೆದಿದೆ ಎಂದು ಸಂಘ ಪರಿವಾರದ ಮುಖಂಡ ಕಾರ್ಕಳದ ಆದರ್ಶ ಗೋಖಲೆ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಂಬೂ ಬಜಾರ್‌ನ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಬಳಿ ಹಿಂದೂ ಸುರಕ್ಷಾ ಸಮಿತಿಯಿಂದ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಹಿಂದೂಗಳ ಮನೆ ಮೇಲಿನ ದಾಳಿ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ವಧೆ ಮಾಡಿದ್ದು ಇತಿಹಾಸದಲ್ಲೇ ದಾಖಲಾಗಿದೆ. ಅಂತಹ ಫ್ಲೆಕ್ಸ್ ನೀವು ತೆಗೆಸಬಹುದಷ್ಟೇ. ಹಿಂದೂಗಳ ಮನದಲ್ಲಿರುವುದನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಕಾಶ್ಮೀರ ಕಣಿವೆಯ ಪಂಡಿತರು ಇಡೀ ವಿಶ್ವಕಕ್ಕೆ ಸಂಸ್ಕೃತ ಚಿಂತನೆ ನೀಡಿದವರು. ಅವರನ್ನೇ ಅಲ್ಲಿಂದ ಹೊರಹಾಕಿದರು. ಅಲ್ಲಿ ಹಿಂದೂಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಬಂಗಾಳದಲ್ಲಿ ದುರ್ಗಾ ಪೂಜೆ ಮಾಡಲು ಅನುಮತಿಯೇ ಇಲ್ಲ. ಇಂತಹದ್ದೇ ಪರಿಸ್ಥಿತಿ ಕರ್ನಾಟಕದಲ್ಲೂ ಬರಲಿದೆ. ಹಿಂದೂಗಳ ಭಾವನೆಗಳನ್ನು ನಿರಂತರ ಕೆಣಕುತ್ತಿದ್ದಾರೆ. ಇದನ್ನು ಸಮಸ್ತ ಹಿಂದೂ ಸಮಾಜ ಅರ್ಥ ಮಾಡಿಕೊಳ್ಳಬೇಕು. ಹಿಂದೂ ಸಮಾಜದ ಮೇಲಿನ ದೌರ್ಜನ್ಯ ಕೊನೆಗಾಣಿಸಲು ಇರುವ ಅವಕಾಶವೆಂದರೆ ಅದು ಉತ್ತರ ಪ್ರದೇಶದ ಯೋಗಿ ಮಾದರಿ ಸರ್ಕಾರ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಸಿದ್ಧಲಿಂಗ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಹಿಂದೂ ಧರ್ಮದ ಜನರು ಭಯದಲ್ಲಿ ಬದುಕುವ ವಾತಾವರಣ ನಿರ್ಮಾಣ ಆಗಿದೆ. ಗಣೇಶ ವಿಸರ್ಜನೆ ಮೆರವಣಿಗೆ ಮಾರ್ಗ ಬದಲಿಸಿ ಹಕ್ಕು ಮೊಟಕು ಮಾಡಲಾಗಿದೆ. ಶಿವಾಜಿ ಮಹಾರಾಜರ ಚಿತ್ರವನ್ನೇ ತೆಗೆದು ಹಾಕಿದ್ದಾರೆ. ಕಾರ್ಲ್ ಮಾರ್ಕ್ಸ್‌ ನಗರದ ಹಿಂದೂ ಕುಟುಂಬ ಮನೆ ಎದುರು ಫ್ಲೆಕ್ಸ್ ಹಾಕಿ, ಆ ಮನೆ ಸದಸ್ಯರು, ಇತರರ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಯಾಗಿದ್ದು ದಲಿತ ಹೆಣ್ಣುಮಗಳ ಮೇಲೆ. ಸಂಸದರು, ಜಿಲ್ಲಾ ಪೊಲೀಸ್ ವರಿಷ್ಠರೂ ಹೆಣ್ಣುಮಕ್ಕಳು. ಈವರೆಗೆ ಸಾಂತ್ವನ, ಧೈರ್ಯ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಮಾತನಾಡಿ, 3 ದಿನಗಳ ಹಿಂದೆ ದಲಿತರ ಮನೆ ಮೇಲೆ ಗೂಂಡಾಗಳು ದಾಳಿ ನಡೆಸಿ ಕುಟುಂಬದ ಸದಸ್ಯರನ್ನು ಹೊರಗೆಳೆದು ಹೊಡೆದಿದ್ದಾರೆ. ಯುವತಿ ತಲೆಗೆ ಗಾಯವಾಗಿದೆ. ಜಿಲ್ಲಾಡಳಿತ ಏನೂ ಅಗಿಲ್ಲವೆನ್ನುತ್ತಿದೆ. ಸಾಕ್ಷ್ಯ ನಾಶ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ತಾಕತ್ತು ಇಲ್ಲದೇ ಹೋದರೆ ಅಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಎಂದರು.

ಮಾಜಿ ಮೇಯರ್ ಎಸ್.ಟಿ. ವೀರೇಶ್ ನಿರೂಪಿಸಿದರು. ಕಾರ್ಯಕ್ರಮದ ವೇಳೆ ಎಫ್ಐಆರ್ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ, ಹಿಂದೂ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ಐ ಲವ್ ಯುಪಿ ಪೊಲೀಸ್ ಎಂಬ ಫಲಕ ಹಿಡಿದ ಹಿಂದೂ ಯುವಕರು, ಕಾರ್ಯಕರ್ತರು ಗಮನ ಸೆಳೆದರು. ಸಾವಿರಾರು ಜನರು ಪಾಲ್ಗೊಂಡಿದ್ದರು.

- - -

(ಕೋಟ್ಸ್‌) ಹಿಂದೂಗಳ ಮೇಲೆ ದಾಳಿ ತಡೆಯಲು ಹಿಂದೂಗಳು ಹಿಂದೂಗಳ ಜೊತೆ ಮಾತ್ರವೇ ವ್ಯವಹಾರ ಮಾಡುವಂತಾಗಬೇಕು. ಭಾರತವು ಪಾಕಿಸ್ತಾನ ಜೊತೆಗಿನ ಆರ್ಥಿಕ ವ್ಯವಹಾರವನ್ನೇ ಸ್ಥಗಿತಗೊಳಿಸಿದೆ. ನರೇಂದ್ರ ಮೋದಿ ಪಾಕ್‌ಗೆ ಆರ್ಥಿಕ ದಿಗ್ಬಂಧನ ಹೇರಿದ್ದಾರೆ. ಇನ್ನಾದರೂ ಹಿಂದೂ ಸಮಾಜ ಬಾಂಧವರು ಜಾಗೃತರಾಗಬೇಕು.

- ಆದರ್ಶ ಗೋಖಲೆ ಕಾರ್ಕಳ, ಸಂಘ ಪರಿವಾರ.

- - - ಕಾರ್ಲ್‌ ಮಾರ್ಕ್ಸ್‌ ಘಟನೆಗೆ ಕಾರಣ ಆಗಿರುವವರ ಬಂಧಿಸಬೇಕು. ರಂಗನಾಥನನ್ನು ಬಿಡುಗಡೆ ಮಾಡಬೇಕು. ಬಹುಸಂಖ್ಯಾತ ಹಿಂದೂಗಳು ಇರುವವರೆಗೂ ಸಮಾಜ ಹಾಗೂ ಪೊಲೀಸರೂ ಸುರಕ್ಷಿತ. ಹಿಂದೂಗಳ ಮೇಲೆ ದಾಳಿ ಆಗುತ್ತಿದೆಯೆಂದು ಪೊಲೀಸರಿಗೆ ಈ ಮಾತು ಹೇಳುತ್ತಿದ್ದೇವೆ. ಮೊದಲು ಕಲ್ಲು ತೂರಾಟ ಮಾಡಿ, ಯಮನೂರಪ್ಪ ಮತ್ತು ಕುಟುಂಬದ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಪುಂಡರನ್ನು ಬಂಧಿಸಿ.

- ಸಿದ್ದಲಿಂಗ ಸ್ವಾಮಿ, ಸಂಘ ಪರಿವಾರ.

- - -

-28ಕೆಡಿವಿಜಿ: ಪ್ರತಿಭಟನಾ ಸಭೆಯಲ್ಲಿ ಕಾರ್ಕಳದ ಆದರ್ಶ ಗೋಖಲೆ ಮಾತನಾಡಿದರು.