ಸಾರಾಂಶ
- ಶಾಂತಿ, ಸಾಮರಸ್ಯಕ್ಕೆ ಧಕ್ಕೆಯಾದರೆ ಬಡವರ ಗತಿಯೇನು ಎಂದು ಆತಂಕ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಶಾಂತಿ, ಸಾಮರಸ್ಯ ಬೇರೂರಿರುವ ದಾವಣಗೆರೆಯಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ನಡೆದಿದೆ. ಜನರ ನೆಮ್ಮದಿಗೆ ಭಂಗ ತರುವವರು ಯಾವುದೇ ಜಾತಿ, ಧರ್ಮಕ್ಕೆ ಸೇರಿದವರಾಗಿದ್ದರೂ ಜಿಲ್ಲಾ ಪೊಲೀಸ್ ಇಲಾಖೆ ಹಿಂದೂ ಜಾಗರಣಾ ವೇದಿಕೆಯ ಸತೀಶ ಪೂಜಾರಿ ಗಡೀಪಾರಿಗೆ ಆದೇಶಿಸಿರುವಂತೆಯೇ ಮುಲಾಜಿಲ್ಲದೇ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಒತ್ತಾಯಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1992ರ ಕೋಮು ಗಲಭೆಯಿಂದಾಗಿ ದಾವಣಗೆರೆ ವ್ಯಾಪಾರ, ವಹಿವಾಟು, ಮಾರುಕಟ್ಟೆಯೆಲ್ಲಾ ರಾಣೆಬೆನ್ನೂರು, ಚಿತ್ರದುರ್ಗದ ಪಾಲಾಗಿವೆ. 33 ವರ್ಷಗಳ ನಂತರ ಜಿಲ್ಲೆ ಚೇತರಿಸಿಕೊಂಡು, ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದೆ. ನಗರ, ಜಿಲ್ಲೆಯ ಪ್ರಗತಿಗೆ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಡಾ.ಪ್ರಭಾ ಅಧಿಕಾರ ಹಿಡಿದಿರುವುದು ಸಹಿಸದ ಬಿಜೆಪಿಯವರು ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯ ಸಿ.ಟಿ.ರವಿ, ಪ್ರತಾಪ ಸಿಂಹ, ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಇತರ ನಾಯಕರನ್ನು ಇಲ್ಲಿಗೆ ಕರೆಸಿ, ಶಾಮನೂರು ಕುಟುಂಬ ವಿರುದ್ಧ ಹೇಳಿಕೆ ಪ್ರಚೋದನಕಾರಿ ಭಾಷಣ ಮಾಡಿಸಿ, ದಾವಣಗೆರೆಯಲ್ಲಿ ಅಶಾಂತಿ ಮೂಡಿಸಲಾಗುತ್ತಿದೆ ಎಂದು ಟೀಕಿಸಿದರು.
ದಾವಣಗೆರೆ ಕಾರ್ಲ್ ಮಾರ್ಕ್ಸ್ ನಗರದಲ್ಲೂ ಮೊನ್ನೆ ಸಾಮರಸ್ಯಕ್ಕೆ ಧಕ್ಕೆ ತಂದ ದುಷ್ಕರ್ಮಿಗಳು ಯಾರೇ ಆಗಿದ್ದರೂ ಕಠಿಣ ಕ್ರಮ ಆಗಬೇಕು. ಆನೆಕೊಂಡದಲ್ಲಿ ಮಚ್ಚು ಹಿಡಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಲ್ ಮಾರ್ಕ್ಸ್ ನಗರದ ಘಟನೆ ಕುರಿತಂತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆಯಲ್ಲಿಲ್ಲ. ನಗರಕ್ಕೆ ಬರುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದರು.ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲೂ ಸಾಮರಸ್ಯ ಕದಡುವಂತಹ ಹೇಳಿಕೆ ನೀಡುತ್ತಿರುವವರ ಮೂಲವನ್ನು ಪತ್ತೆ ಮಾಡಿ, ಕ್ರಮ ಜರುಗಿಸಲಿ. 3-4 ತಿಂಗಳ ಕಾಲ ಯೋಜಿಸಿಯೇ ದಾವಣಗೆರೆಯಲ್ಲಿ ಗಲಭೆ ಸೃಷ್ಟಿಸುವ ಕೆಲಸ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಾಡಿದಂತೆ ಇಲ್ಲಿಯೂ ಮಾಡಿದರೆ ಎಲ್ಲ ಧರ್ಮ, ಸಮುದಾಯಗಳ ಬಡವರ ಪಾಡೇನಾಗಬೇಕು ಎಂದು ದಿನೇಶ ಪ್ರಶ್ನಿಸಿದರು.
ಪಕ್ಷದ ಮುಖಂಡರಾದ ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ ಜಾಧವ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಮಾಜಿ ವಿಪಕ್ಷ ನಾಯಕ ಎ.ನಾಗರಾಜ, ಮಾಜಿ ಸದಸ್ಯ ಕೆ.ಜಿ.ಶಿವಕುಮಾರ, ಮಂಗಳಮ್ಮ ಇತರರು ಇದ್ದರು.- - -
(ಕೋಟ್) ದಾವಣಗೆರೆ ನಗರ, ಜಿಲ್ಲೆ ಅಭಿವೃದ್ಧಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ರಾಜ್ಯ ಸರ್ಕಾರದಿಂದ ₹3 ಸಾವಿರ ಕೋಟಿ ಅನುದಾನ ತಂದಿದ್ದಾರೆ. ಭದ್ರಾ ಡ್ಯಾಂ ತುಂಬಿದ ಹಿನ್ನೆಲೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಸಚಿವ ಎಸ್ಸೆಸ್ಸೆಂ ಸೇರಿದಂತೆ ನಮ್ಮೆಲ್ಲಾ ಶಾಸಕರು ಬಾಗಿನ ಅರ್ಪಿಸಿದ್ದಾರೆ.- ದಿನೇಶ ಕೆ. ಶೆಟ್ಟಿ, ಕಾಂಗ್ರೆಸ್ ಮುಖಂಡ.
- - --28ಕೆಡಿವಿಜಿ1, 2.ಜೆಪಿಜಿ:
ದಾವಣಗೆರೆಯಲ್ಲಿ ಭಾನುವಾರ ದೂಡಾ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.;Resize=(128,128))
;Resize=(128,128))