ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬೇಸಿಗೆ ದಿನಗಳು ಇನ್ನೂ ಬಾಕಿಯಿರುವಾಗಲೇ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಸಂಗ್ರಹಿತ ಹಿನ್ನೀರು ಗಣನೀಯ ಪ್ರಮಾಣದಲ್ಲಿ ಕುಸಿ ಕಂಡಿದ್ದು, ಇದನ್ನೇ ನಂಬಿರುವ ನೂರಾರು ಗ್ರಾಮ ಹಾಗೂ ಪಟ್ಟಣಗಳಿಗೆ ಬೇಸಿಗೆ ನೀಗಿಸುವ ಕೊನೆಯ ದಿನಗಳು ಆತಂಕಕಾರಿಯಾಗುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ.ರಬಕವಿ-ಬನಹಟ್ಟಿ ತಾಲೂಕಿನ ೧ ನಗರಸಭೆ, ೨ ಪುರಸಭೆ ಹಾಗೂ ೧೭ ಗ್ರಾಮ ಪಂಚಾಯ್ತಿ ಸೇರಿದಂತೆ ಒಟ್ಟು ೩೦ ಗ್ರಾಮಗಳಲ್ಲಿ ಮೇ ಮಧ್ಯಂತರದಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯು ಸ್ಪಷ್ಟವಾಗುತ್ತಿದ್ದು, ಜಲಾಶಯವನ್ನೇ ನಂಬಿರುವ ನಾಗರಿಕರು, ಗ್ರಾಮೀಣರು ಮತ್ತು ಜಾನುವಾರುಗಳು ಸಂಕಷ್ಟಕ್ಕೀಡಾಗುವ ಭೀತಿಯಲ್ಲಿವೆ. ಹಿಪ್ಪರಗಿ ಬ್ಯಾರೇಜ್‌ನಲ್ಲಿ ಕಳೆದ ತಿಂಗಳು ಭಾರಿ ಪ್ರಮಾಣದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಕಳೆದ ತಿಂಗಳು ಮಹಾರಾಷ್ಟçದ ರಾಜಾಪೂರ ಬ್ಯಾರೇಜ್‌ನಿಂದ ಅಲ್ಪ ಪ್ರಮಾಣದಲ್ಲಿ ನೀರು ಬಂದಿದ್ದರ ಕಾರಣದಿಂದಾಗಿ ಇದೀಗ ಮತ್ತೇ ೧.೫ ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು.ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸಂಜೀವನಿಯಾಗಿರುವ ಹಿಪ್ಪರಗಿ ಜಲಾಶಯದಲ್ಲಿನ ನೀರು ಬಿರುಬೇಸಿಗೆಯ ಭಾಷ್ಪೀಕರಣ ಹೊಡೆತಕ್ಕೆ ಸಂಗ್ರಹದಲ್ಲಿ ಭಾರಿ ಕುಸಿತ ಕಂಡಿದ್ದು ಎಸ್‌ಎಂ.ಕೃಷ್ಣ ಸರ್ಕಾರದ ಕೊನೇ ದಿನಗಳಲ್ಲಿ ಉಂಟಾಗಿದ್ದ ಜಲಕ್ಷಾಮ ಈ ಬಾರಿಯೂ ಜನ-ಜಾನುವಾರುಗಳನ್ನು ಕಾಡುವ ಆತಂಕ ಎದುರಾಗಿದೆ. ಹಿಪ್ಪರಗಿ ಜಲಾಶಯದಿಂದ ದಿನಂಪ್ರತಿ ೧೦ ರಿಂದ ೧೩ ಸೆಮಿನಷ್ಟು ಅಂದರೆ ೦.೭ ಟಿಎಂಸಿಯಷ್ಟು ನೀರು ಖಾಲಿಯಾಗುತ್ತಿದೆ. ಜನ ಬಳಕೆಗೆ ಒಂದು ಕಾರಣವಾದರೆ, ಮತ್ತೊಂದೆಡೆ ಬಿರುಬಿಸಿಲಿನ ತಾಪಕ್ಕೆ ಜಲ ಬಾಷ್ಪೀಕರಣಗೊಂಡು ನೀರು ತೀವ್ರ ಕಡಿಮೆಯಾಗುತ್ತಿದೆ. ನೀರಿನ ಮಟ್ಟ ಕೆಲ ದಿನಗಳಲ್ಲಿ ದಿಢೀರ್ ಆಗಿ ಭಾರಿ ಕುಸಿತ ಕಂಡ ಹಿನ್ನಲೆಯಲ್ಲಿ ಜನರಿಗೆ ಬೇಸಿಗೆಯ ಆತಂಕ ಶುರುವಾಗಿದೆ. ನೀರಿನ ಮಿತ ಹಾಗೂ ಸಮರ್ಪಕ ಬಳಕೆಯಿಂದ ಬೇಸಿಗೆ ದಿನಗಳನ್ನು ಸಂಪೂರ್ಣ ನಿರಾಯಾಸವಾಗಿ ಕಳೆಯಬಹುದಾಗಿದ್ದರೂ ಬಿಸಿಲಿನ ಪ್ರಖರತೆಯಿಂದ ಹಿನ್ನೀರು ಪ್ರಮಾಣ ಹಠಾತ್ ಕುಸಿದರೆ ಜಲಕ್ಷಾಮ ಗ್ಯಾರಂಟಿ ಎನ್ನಲಾಗುತ್ತಿದೆ.
ತಾಲೂಕಾಡಳಿತದಿಂದ ಪೂರ್ವ ತಯಾರಿ:
ಎಲ್ಲ ಗ್ರಾಮಗಳಲ್ಲಿ ನೀರಿನ ಅಭಾವವಾಗದ ರೀತಿಯಲ್ಲಿ ಕೊಳವೆ ಬಾವಿಗಳನ್ನು ಸರ್ಕಾರಿ ಹಾಗೂ ರೈತರ ಪ್ರದೇಶದಲ್ಲಿರುವವೆಲ್ಲವನ್ನೂ ಗುರ್ತಿಸಿ ಮುಂದಿನ ದಿನಗಳಲ್ಲಿ ಬೇಸಿಗೆ ನೀಗಿಸಲು ತಾಲೂಕಾಡಳಿತ ಸಭೆಗಳ ಮೂಲಕ ಸರ್ವ ಸನ್ನದ್ಧವಾಗಿದೆ.
ನೀರು ಬಿಡುಗಡೆಯಾಗದಿದ್ದರೆ ನಿರಾಳ:
ಪ್ರತಿ ವರ್ಷ ಬೇಸಿಗೆ ಸಂದರ್ಭ ಹಿಪ್ಪರಗಿ ಜಲಾಶಯದಿಂದ ಮುಂಭಾಗಕ್ಕೆ ಅಂದಾಜು ಸುಮಾರು ೦.೫ ಟಿಎಂಸಿಯಷ್ಟು ನೀರನ್ನು ಜಮಖಂಡಿ ಭಾಗಕ್ಕೆ ಕುಡಿಯುವ ನೀರಿನ ಸಲುವಾಗಿ ಬಿಡುಗಡೆಗೊಳಿಸುತ್ತಿದ್ದರು. ಪ್ರಸಕ್ತ ವರ್ಷ ಗೇಟ್ ನಂ.೨೨ ರಲ್ಲಿ ಆಗಿರುವ ಅವಘಡದಿಂದ ೨ ಟಿಎಂಸಿಯಷ್ಟು ನೀರು ಪೋಲಾಗಿದ್ದು, ಇದೇ ಪರಿಣಾಮವಾಗಿ ಹಿಪ್ಪರಗಿ ಬ್ಯಾರೇಜ್‌ನ ಹಿನ್ನೀರಿನಲ್ಲಿರುವ ನಗರ, ಗ್ರಾಮ ಹಾಗೂ ರೈತ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆಗಳಿವೆ. ಬೇಸಿಗೆ ಮುಗಿಯುವವರೆಗೂ ಇದೇ ನೀರು ನಿಯಂತ್ರಣದಲ್ಲಿದ್ದರೆ ಮಾತ್ರ ಮೇ ಆರಂಭದವರೆಗೆ ಅನುಕೂಲವಾಗುವುದು.ಸದ್ಯಕ್ಕೆ ಎಲ್ಲಿಯೂ ನೀರಿನ ಅಭಾವವಿಲ್ಲ. ಅಧಿಕಾರಿಗಳ ನೇತೃತ್ವದಲ್ಲಿ ಸಭೆಗಳನ್ನು ನಡೆಸಲಾಗಿದೆ. ಮೇ ಮಧ್ಯಂತರ ನಂತರ ನೀರಿನ ಕೊರತೆಯಾದರೆ ಖಾಸಗಿ ಹಾಗೂ ಸರ್ಕಾರಿ ಕೊಳವೆ ಬಾವಿಗಳೇ ಆಧಾರವಾಗಲಿವೆ.
-ಗಿರೀಶ ಸ್ವಾದಿ, ತಹಸೀಲ್ದಾರ್, ರಬಕವಿ-ಬನಹಟ್ಟಿ.ಬೆಳೆದು ನಿಂತಿರುವ ಪೈರು ಸಂರಕ್ಷಣೆಗೆ ಸಾಧ್ಯವಾಗದಂತೆ ಜಿಲ್ಲಾಡಳಿತ ವಿದ್ಯುತ್ ಸಂಪರ್ಕ ನಿಲುಗಡೆಗೊಳಿಸಿ ನದಿ ಪಾತ್ರದ ನೀರಿನ ಸಂರಕ್ಷಣೆಗೆ ನಿಂತಿದೆ. ಬೇಸಿಗೆಯ ಬಿರು ಬಿಸಿಲಾಘಾತಕ್ಕೆ ಅಂತರ್ಜಲಮಟ್ಟದಲ್ಲೂ ಕುಸಿತವಾಗುತ್ತಿದ್ದು, ಮುಂಬರುವ ಮೇ ಹಾಗೂ ಜೂನ್ ತಿಂಗಳವರೆಗೆ ತಾವು ಬೆಳೆದ ಬೆಳೆ ಸಂರಕ್ಷಣೆಗೆ ರೈತರು ಹರಸಾಹಸ ಪಡುವಂತಾಗಿದೆ.
-ಡಾ.ಧನಪಾಲ ನಾನಪ್ಪ ಯಲ್ಲಟ್ಟಿ, ಕನ್ನಡಪ್ರಭ ರೈತರತ್ನ ಪ್ರಶಸ್ತಿ ವಿಜೇತರು, ಹಳಿಂಗಳಿ.