ಕಾವೇರಿಗೂ ಸೋಂದಾ ಸಂಸ್ಥಾನಕ್ಕೂ ಐತಿಹಾಸಿಕ ಸಂಬಂಧ: ಲಕ್ಷ್ಮೀಶ್ ಹೆಗಡೆ

| Published : Oct 21 2024, 12:44 AM IST / Updated: Oct 21 2024, 12:45 AM IST

ಕಾವೇರಿಗೂ ಸೋಂದಾ ಸಂಸ್ಥಾನಕ್ಕೂ ಐತಿಹಾಸಿಕ ಸಂಬಂಧ: ಲಕ್ಷ್ಮೀಶ್ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸ ಪ್ರಸಿದ್ಧ ಸೋಂದೆಯಲ್ಲಿ ಉದ್ಘಾಟನೆಗೊಂಡ ಇತಿಹಾಸ ಉತ್ಸವದಲ್ಲಿ ಕುಲಮಾತೆ ಕಾವೇರಿ ತನ್ನ ಐತಿಹಾಸಿಕ ಸಂಬಂಧದ ಬೆಸುಗೆಯನ್ನು ಪುನರಸ್ಥಾಪಿಸಿದಳು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಉತ್ತರ ಕನ್ನಡದ ಶಿರಸಿ ಬಳಿಯ ಇತಿಹಾಸ ಪ್ರಸಿದ್ಧ ಸೋಂದೆಯಲ್ಲಿ ಶನಿವಾರ ಉದ್ಘಾಟನೆಗೊಂಡ 7ನೇ ಇತಿಹಾಸ ಉತ್ಸವದಲ್ಲಿ, ಕುಲಮಾತೆ ಕಾವೇರಿ ತನ್ನ ಐತಿಹಾಸಿಕ ಸಂಬಂಧದ ಬೆಸುಗೆಯನ್ನು ಪುನರಸ್ಥಾಪಿಸಿದಳು.

ಉದ್ಘಾಟನಾ ವೇದಿಕೆಯಲ್ಲಿ ಕೊಡಗಿನ ಪ್ರತಿನಿಧಿಯಾಗಿ ಭಾಗವಹಿಸಿದ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಕಾವೇರಿ ತೀರ್ಥವನ್ನು ಸೋಂದಾ ಸ್ವರ್ಣವಲ್ಲಿ ಶ್ರೀಗಳು, ಮತ್ತು ಜೈನ ಮಠಾಧಿಪತಿಗಳು ಸೇರಿದಂತೆ ಗಣ್ಯರಿಗೆ ತೀರ್ಥ ಸಮರ್ಪಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮ ಆಯೋಜಕರು ಹಾಗೂ ಇತಿಹಾಸಕಾರರಾದ ಲಕ್ಷ್ಮೀಶ್ ಹೆಗಡೆ ಸೋಂದಾ ಅವರು, ಕೊಡಗಿನ ಕಾವೇರಿಗೂ ಸೋಂದಾ ಸಂಸ್ಥಾನಕೂ ಐತಿಹಾಸಿಕವಾದ ಸಂಬಂಧವಿದ್ದು, ಪುರಾತನ ಕಾಲದಲ್ಲಿ ಸೋಂದೆಯಿಂದ ಕಾವೇರಿಯ ಪೂಜೆಗೆ ತೆಂಗಿನಕಾಯಿ ಹೋಗುತ್ತಿತ್ತು. ತುಲಾ ಸಂಕ್ರಮಣದ ಮಾರನೇ ದಿನ ಸೋಂದಾಕ್ಕೆ ಕಾವೇರಿಯ ತೀರ್ಥ ಬರುವ ಸಂಪ್ರದಾಯವಿತ್ತು. ಆದರೆ ಇಂದು ಮತ್ತೆ ಇತಿಹಾಸ ಮರುಕಳಿಸಿದ್ದು, ತುಲಾ ಸಂಕ್ರಮಣದ ಮಾರನೇ ದಿನವೇ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಕೊಡವ ಉಡುಪಿನಲ್ಲಿ ತೀರ್ಥದೊಂದಿಗೆ ಬಂದಿರುವುದು ಕಾಕತಾಳೀಯ. ಆದರು ಹಿಂದಿನ ಸಂಪ್ರದಾಯ ಮರುಕಳಿಸಲು ಈ ವೇದಿಕೆ ಸಾಕ್ಷಿ ಆಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಕಾವೇರಿಯ ಪುತ್ರನಾಗಿ, ಆಕೆಯ ನಾಡಿನ ಇತಿಹಾಸವನ್ನು ಹಂಚಿಕೊಳ್ಳಲು ಅವಕಾಶ ಸಿಕ್ಕಿದ್ದೇ ಪುಣ್ಯ. ಆದರೆ, ಅವ್ವ ಕಾವೇರಿಯನ್ನೇ ಉದ್ಘಾಟನಾ ವೇದಿಕೆಗೆ ತಂದು, ಇತಿಹಾಸ ಮರುಸೃಷ್ಟಿಗೆ ನಾಂದಿ ಆದದ್ದು, ಅತ್ಯಂತ ವಿಸ್ಮಯಕರ ಪಾವನ ಕ್ಷಣ ಎಂದು ಚಾಮೆರ ದಿನೇಶ್ ಬೆಳ್ಯಪ್ಪ ಹರ್ಷ ವ್ಯಕ್ತಪಡಿಸಿದರು. ಅತಿಥಿಗಳಾದಿಯಾಗಿ ಸರ್ವರೂ ತೀರ್ಥ ಸ್ವೀಕರಿಸುವ ಮೂಲಕ ತಾಯಿ ಕಾವೇರಿಗೆ ನಮಿಸಿದರು.