ಕನ್ನಡಪ್ರಭ ವಾರ್ತೆ ತುಮಕೂರುಚರಿತ್ರೆ ಮತ್ತು ಪುರಾಣಗಳು ಸ್ಥಗಿತಗೊಂಡರೆ ಅವುಗಳ ಸಾವು ಸಮೀಪಿಸಿದೆ ಎಂದರ್ಥ. ಇವು ಯಾವತ್ತೂ ಚಲನಶೀಲವಾಗಿರಬೇಕು ಹಾಗೂ ವರ್ತಮಾನದ ವಿವೇಕದೊಂದಿಗೆ ಇವುಗಳನ್ನು ಮರುಶೋಧಿಸಬೇಕಾದ ಜವಾಬ್ದಾರಿ ಇಂದಿನ ತಲೆಮಾರಿನ ಮೇಲಿದೆ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಅಭಿಪ್ರಾಯಪಟ್ಟರು. ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಜಿಲ್ಲಾ ಘಟಕವು ಬಂಡಾಯ ಸಾಹಿತ್ಯ, ಹೊಸ ತಲೆಮಾರು ಅಭಿಯಾನದ ಅಂಗವಾಗಿ ಶನಿವಾರ ತುಮಕೂರಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯದಲ್ಲಿ ಚರಿತ್ರೆ ಮತ್ತು ಪುರಾಣ ಪಯಣ: ಸಾಮಾಜಿಕ ನೆಲೆಗಳು ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಇಂದಿನ ಕಾಲಘಟ್ಟದಲ್ಲಿ ನೈಜ ಇತಿಹಾಸಕಾರರಿಗಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳ ವಕ್ತಾರರು ಚರಿತ್ರೆಯ ಬಗ್ಗೆ ಮಾತನಾಡುತ್ತಿರುವುದು ಆತಂಕಕಾರಿ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಚರಿತ್ರೆಯ ಬಗ್ಗೆ ಸಾಕಷ್ಟು ಅಧ್ಯಯನವಿಲ್ಲದ ಇಂತಹ ರಾಜಕೀಯ ಮಾತುಗಳು ನೈಜ ಶೋಧಕ್ಕೆ ಧಕ್ಕೆ ತರುತ್ತವೆ. ಯಾವುದೇ ಚರಿತ್ರೆಯನ್ನು ಜಾತಿವಾದ, ಧಾರ್ಮಿಕ ಮೂಲಭೂತವಾದ ಅಥವಾ ಕೇವಲ ರಾಜಕೀಯ ಪಕ್ಷಗಳ ಹಿತಾಸಕ್ತಿಗನುಗುಣವಾಗಿ ಕಟ್ಟಬಾರದು; ಹಾಗೆ ಮಾಡಿದಲ್ಲಿ ಅದು ನೈಜ ಇತಿಹಾಸವಾಗದೆ ಹುಸಿ ಕಟ್ಟುವಿಕೆ ಅಥವಾ ಹುಸಿ ಸಂಕಥನವಾಗಿ ಉಳಿಯುತ್ತದೆ ಎಂದು ಅವರು ಎಚ್ಚರಿಸಿದರು.ಇತಿಹಾಸಕಾರರು ದಾಖಲೆಗಳ ಮೂಲಕ ಚರಿತ್ರೆಯನ್ನು ಯಥಾವತ್ತಾಗಿ ನಿರೂಪಿಸಿದರೆ, ಸಾಹಿತ್ಯದಲ್ಲಿ ಚರಿತ್ರೆಯು ಸೃಜನಶೀಲ ರೂಪಕಗಳ ಮೂಲಕ ಪ್ರವೇಶಿಸುತ್ತದೆ. ಸಾಹಿತಿಗಳು ಚಾರಿತ್ರಿಕ ಸತ್ಯಗಳನ್ನು ಸಾಂಕೇತಿಕವಾಗಿ ಮತ್ತು ರೂಪಕಾತ್ಮಕವಾಗಿ ಚಿತ್ರಿಸುವ ಸವಾಲನ್ನು ಎದುರಿಸಬೇಕಾಗುತ್ತದೆ. ಚರಿತ್ರೆ ಎನ್ನುವುದು ಭೂತಕಾಲಕ್ಕೆ ಮಾತ್ರ ಸೀಮಿತವಲ್ಲ, ಅದು ವರ್ತಮಾನದೊಂದಿಗೆ ನಿರಂತರ ಸಂವಾದ ನಡೆಸುವ ಚಲನಶೀಲ ಪ್ರಕ್ರಿಯೆಯಾಗಿದೆ. ಕೇವಲ ರಾಜರ ದಾಖಲೆಗಳ ಸಂಗ್ರಹವೇ ಇತಿಹಾಸವಲ್ಲ, ವರ್ತಮಾನದ ವಿವೇಕದೊಂದಿಗೆ ಜನಚರಿತ್ರೆಯನ್ನು ವಿಶ್ಲೇಷಿಸಿದಾಗ ಮಾತ್ರ ನೈಜ ಚರಿತ್ರೆ ಮೂಡಲು ಸಾಧ್ಯ ಎಂದರು.ಪುರಾಣ ಶಾಸ್ತ್ರ ಮತ್ತು ಪುರಾಣ ಕಾವ್ಯಗಳ ನಡುವಿನ ವ್ಯತ್ಯಾಸವನ್ನು ನಾವು ಮೊದಲು ಗುರುತಿಸಬೇಕು ಎಂದು ಅವರು ಪ್ರತಿಪಾದಿಸಿದರು. ಶಾಸ್ತ್ರಗಳಲ್ಲಿರುವ ಅಮಾನವೀಯ ಅಂಶಗಳನ್ನು ಕಟುವಾಗಿ ವಿರೋಧಿಸಬೇಕಾದರೂ, ಪುರಾಣ ಕಾವ್ಯಗಳು ನೀಡುವ ಸಾಂಕೇತಿಕ ಅರ್ಥಗಳು ಮತ್ತು ಆಶಯಗಳು ಮುಖ್ಯವಾದವು. ನಮ್ಮ ದೇಶದ ಮಹಾಕಾವ್ಯಗಳಿಗೆ ತಳ ಸಮುದಾಯಗಳು ಕಟ್ಟಿಕೊಟ್ಟ ಸಂಸ್ಕೃತಿಯೇ ಮೂಲಾಧಾರವಾಗಿದೆ. ಜನಸಾಮಾನ್ಯರು ತಮ್ಮ ಬದುಕಿನ ವಾಸ್ತವಗಳಿಗೆ ಹತ್ತಿರವಾಗುವಂತೆ ಸೃಷ್ಟಿಸಿಕೊಂಡ ಇಂತಹ ಜನಪುರಾಣಗಳನ್ನು ನಿರಾಕರಿಸುವ ಬದಲು, ಅವುಗಳಲ್ಲಿನ ಪ್ರಗತಿಪರ ನೆಲೆಗಳನ್ನು ಗುರುತಿಸುವುದು ಇಂದಿನ ಅಗತ್ಯವಾಗಿದೆ ಎಂದರು.ಇಂದಿನ ಹೊಸ ತಲೆಮಾರು ಪೂರ್ವಾಗ್ರಹಗಳಿಲ್ಲದ ಮತ್ತು ಪಕ್ಷಪಾತವಿಲ್ಲದ ತಾತ್ವಿಕ ತಿಳುವಳಿಕೆಯನ್ನು ಬೆಳೆಸಿಕೊಳ್ಳಬೇಕು. ಚರಿತ್ರೆ ಮತ್ತು ಪುರಾಣಗಳನ್ನು ಅಧ್ಯಯನ ಮಾಡುವಾಗ ಮೌಢ್ಯಗಳನ್ನು ತಳ್ಳಿಹಾಕಿ, ಪರಂಪರೆಯ ಪ್ರಜ್ಞೆಯೊಂದಿಗೆ ಸಮಕಾಲೀನ ಪ್ರಜ್ಞೆಯನ್ನು ಬೆಸೆಯುವ ಸವಾಲನ್ನು ಸ್ವೀಕರಿಸಬೇಕು. ವಿಮರ್ಶಾತ್ಮಕ ನೋಟದೊಂದಿಗೆ ಸಂಸ್ಕೃತಿಯನ್ನು ಮರುವ್ಯಾಖ್ಯಾನ ಮಾಡುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಒತ್ತಿ ಹೇಳಿದರು. ಅಭಿಯಾನದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 17 ಮಂದಿ ಹೊಸ ತಲೆಮಾರಿನ ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಮೋಹನ್ ಎಚ್.ಎಸ್, ಪ್ರಗತಿಪರ ಚಿಂತಕ ಕೆ. ದೊರೆರಾಜು, ಡಾ. ಲಕ್ಷ್ಮಣ್ ದಾಸ್, ತುಮಕೂರು ವಿವಿಯ ಸಿಂಡಿಕೇಟ್ ಸದಸ್ಯ ಎಸ್.ಶಿವಣ್ಣ, ಬಂಡಾಯ ಸಾಹಿತ್ಯ ಸಂಘಟನೆಯ ರಾಮಚಂದ್ರಪ್ಪ, ಗೋವಿಂದಯ್ಯ, ಅಶ್ವತನಾರಾಯಣ ಸೇರಿದಂತೆ ಬಂಡಾಯ ಸಾಹಿತ್ಯ ಸಂಘಟನೆಯ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.