ಸಾರಾಂಶ
- ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿಸದೇ ವರ್ತಕರು, ಪ್ರಯಾಣಿಕರಿಗೆ ಸಂಕಷ್ಟ ।
- ಶನಿವಾರದಿಂದ ವಿದ್ಯುತ್ ಪೂರೈಕೆ ಇಲ್ಲದೇ ಜನರ ಪರದಾಟ, ವರ್ತಕರಿಗೆ ಆರ್ಥಿಕ ನಷ್ಟ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಖಾಸಗಿ ಬಸ್ ನಿಲ್ದಾಣ ಹಾಗೂ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿನ ಹತ್ತಾರು ಅಂಗಡಿಗಳಿಗೆ ಶನಿವಾರ ಸಂಜೆಯಿಂದ ವಿದ್ಯುತ್ ಸೌಲಭ್ಯ ಕಡಿತಗೊಂಡಿದೆ. ಹೊನ್ನಾಳಿ ಪುರಸಭೆ ಅಧಿಕಾರಿಗಳು ಸಕಾಲಕ್ಕೆ ಬೆಸ್ಕಾಂಗೆ ವಿದ್ಯುತ್ ಪಾವತಿಸದ ನಿರ್ಲಕ್ಷ್ಯದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಆದರೆ, ಇದರ ನೇರ ಪರಿಣಾಮ ಸಾರ್ವಜನಿಕರ ಮೇಲಾಗಿದೆ.ನಿಲ್ದಾಣದಲ್ಲಿ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ, ಪ್ರಯಾಣಿಕರು, ವಾಹನಗಳ ಮಾಲೀಕರು ಇನ್ನಿಲ್ಲದ ಸಂಕಷ್ಟ ಅನುಭವಿಸಿದರು. ಪ್ರಯಾಣಿಕರು, ವಾಹನ ಚಾಲಕರು, ಅಂಗಡಿಗಳ ಮಾಲೀಕರು, ವರ್ತಕರು ಕತ್ತಲಲ್ಲಿ ಬಸ್‌ಗಳು, ಅಂಗಡಿಗಳು, ವಸ್ತುಗಳ ಗುರುತು ಹಿಡಿಯಲು ಹೀಗೆ ವಿವಿಧ ಕಾರಣಗಳಿಗೆ ಪರದಾಡಿದರು. ಭಾನುವಾರವೂ ವಿದ್ಯುತ್ ಅವ್ಯವಸ್ಥೆ ಮುಂದುವರಿದು ನಿಲ್ದಾಣದಲ್ಲಿ ಜನತೆ ಸಂಕಷ್ಟ ಎದುರಿಸಿದರು.
ಪುರಸಭೆ ವಾಣಿಜ್ಯ ಸಂಕೀರ್ಣದ ಎಲ್ಲ ಮಳಿಗೆಗಳಲ್ಲಿ ಕರೆಂಟ್ ಇಲ್ಲವಾಗಿದೆ. ಇದರಿಂದ ಅಂಗಡಿಗಳಲ್ಲಿ ಮಾಲೀಕರು-ಪ್ರಯಾಣಿಕರು ವ್ಯಾಪಾರ ನಡೆಸಲಾಗದ ಪರಿಸ್ಥಿತಿ ಇದ್ದರೆ, ಇನ್ನು ಖಾಸಗಿ ಬಸ್ ನಿಲ್ದಾಣದಲ್ಲಿ ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಸಾವಿರಾರು ಪ್ರಯಾಣಿಕರು ಬಸ್‌ಗಾಗಿ ಕತ್ತಲಿನಲ್ಲೇ ಕಾಯುವ ಪರಿಸ್ಥಿತಿ ಉಂಟಾಗಿದೆ.ವಾಣಿಜ್ಯ ಸಂಕೀರ್ಣದ ಮಳಿಗೆ ಬಾಡಿಗೆದಾರರೊಬ್ಬರು ಹೇಳುವಂತೆ, ಶನಿವಾರದಿಂದ ಕರೆಂಟ್ ಇಲ್ಲ. ಸಂಜೆ ವ್ಯಾಪಾರ ವಹಿವಾಟು ಮಾಡಲಾಗದೇ ಮನೆಗೆ ಹೋಗುವ ಪರಿಸ್ಥಿತಿ ಬಂದಿದೆ. ಪರಸ್ಥಳಗಳಿಂದ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರ ಪಾಡಂತೂ ಹೇಳತೀರದಾಗಿದೆ. ಕಾರಣ ಬಸ್ ನಿಲ್ದಾಣದಲ್ಲಿ ವಿದ್ಯುತ್ ದೀಪಗಳಿಲ್ಲದೇ ಕತ್ತಲು ಆವರಿಸಿದೆ. ಕತ್ತಲಿನಲ್ಲಿಯೇ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳುವ ಬಸ್‌ಗಳಿಗಾಗಿ ಮಕ್ಕಳೊಂದಿಗೆ, ವೃದ್ಧರೊಂದಿಗೆ ಕಾಯುತ್ತಾ ಕುಳಿತುಕೊಳ್ಳುವಂತಾಗಿತ್ತು. ವರ್ತಕರಿಗೂ ಆರ್ಥಿಕ ನಷ್ಟವಾಗಿದೆ ಎಂದು ಅಳಲನ್ನು ತೋಡಿಕೊಂಡರು.
ವಿದ್ಯುತ್ ಕಡಿತಕ್ಕೆ ಕಾರಣ ಏನು ಎಂದು ಅಂಗಡಿಗಳ ಮಾಲೀಕರಿಗೆ ಕೇಳಿದಾಗ, ಪುರಸಭೆಯವರು ಬೆಸ್ಕಾಂ ಇಲಾಖೆಗೆ ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಹೀಗಾಗಿ ಬೆಸ್ಕಾಂನವರು ನಿಲ್ದಾಣದಕ್ಕೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿದ್ದಾರೆ ಎಂದು ತಿಳಿಸಿದರು.ಪ್ರತಿ ಅಂಗಡಿಗಳಿಗೆ ಪ್ರತ್ಯೇಕ ವಿದ್ಯುತ್ ಮೀಟರ್‌ಗಳು ಇಲ್ಲ. ಎಲ್ಲ ಅಂಗಡಿಗಳ ಒಟ್ಟಿನ ಮೇಲೆ ಮೀಟರ್ ಇದೆ ಎಂಬ ಅವ್ಯವಸ್ಥೆಯನ್ನು ಕೆಲವರು ಬಯಲುಮಾಡಿದರು. ಒಟ್ಟಿನಲ್ಲಿ ಹೊನ್ನಾಳಿ ಪುರಸಭೆ ಅಧಿಕಾರಿಗಳ ನಿರ್ಲ ಕ್ಷ್ಯದಿಂದ ಸಾರ್ವಜನಿಕರು, ಪ್ರಯಾಣಿಕರು, ನಿಲ್ದಾಣದ ಅಂಗಡಿಗಳ ಮಾಲೀಕರು ಕತ್ತಲಲ್ಲೇ ಕಾಲ ಕಳೆದಿದ್ದಾರೆ. ಈ ಅವ್ಯವಸ್ಥೆ ಸೋಮವಾರವಾದರೂ ಕೊನೆಗೊಂಡರೆ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಾರು. ಜನತೆ, ಜನಪರ ಸಂಘಟನೆಗಳವರು ಕೆರಳುವ ಮುನ್ನ ಪುರಸಭೆ ಹಾಗೂ ಬೆಸ್ಕಾಂ ಸೂಕ್ತ ಕ್ರಮಕ್ಕೆ ಮುಂದಾಗುವರೇ?
- - - -30ಎಚ್.ಎಲ್.ಐ2:ಹೊನ್ನಾಳಿ ಬಸ್ ನಿಲ್ದಾಣ, ಪುರಸಭೆ ಮಳಿಗೆಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡಿರುವುದು.