೫ರಿಂದ ಬನವಾಸಿಯಲ್ಲಿ ತೋಟಗಾರಿಕೆ ಫಲಪುಷ್ಪ ಪ್ರದರ್ಶನ

| Published : Mar 02 2024, 01:50 AM IST

೫ರಿಂದ ಬನವಾಸಿಯಲ್ಲಿ ತೋಟಗಾರಿಕೆ ಫಲಪುಷ್ಪ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಮಾ. ೫ ಮತ್ತು ೬ರಂದು ಬನವಾಸಿಯ ಕದಂಬೋತ್ಸವದಲ್ಲಿ ಜಿಲ್ಲಾ ಮಟ್ಟದ ತೋಟಗಾರಿಕೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ಇಲಾಖೆಯಿಂದ ₹೧೦ ಲಕ್ಷ ಅನುದಾನ ಲಭ್ಯವಿದ್ದು, ೧೫ರಿಂದ ೨೦ ತಳಿಗಳ ೨೫ ಸಾವಿರ ಹೂವುಗಳು, ೨,೫೦೦ ಹೂವಿನ ಕುಂಡಗಳನ್ನು ಪ್ರದರ್ಶನ ಮಾಡಲಾಗುವುದು.

ಶಿರಸಿ: ತೋಟಗಾರಿಕೆ ಪ್ರಾಧಾನ್ಯ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ತೋಟಗಾರಿಕೆ ಮಹತ್ವದ ಕುರಿತು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅರಿವು ಮೂಡಿಸಿ ತೋಟಗಾರಿಕೆಯಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ, ಪ್ರೋತ್ಸಾಹಿಸಲು ಮಾ. ೫ ಮತ್ತು ೬ರಂದು ಬನವಾಸಿಯ ಕದಂಬೋತ್ಸವದಲ್ಲಿ ಜಿಲ್ಲಾ ಮಟ್ಟದ ತೋಟಗಾರಿಕೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಡಾ. ಬಿ.ಪಿ. ಸತೀಶ ತಿಳಿಸಿದರು.

ಅವರು ಶುಕ್ರವಾರ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾಹಿತಿ ನೀಡಿದರು. ರೈತರನ್ನು ಮತ್ತು ಸಾರ್ವಜನಿಕರನ್ನು ಆಕರ್ಷಿಸಲು ಪುಷ್ಪದಿಂದ ಬನವಾಸಿ ಮಧುಕೇಶ್ವರ ದೇವರ ಮತ್ತು ಹೂವಿನಿಂದ ವಿವಿಧ ಕಲಾಕೃತಿ ಹಾಗೂ ಸೆಲ್ಫಿ ಮಾಡೆಲ್‌ಗಳನ್ನು ನಿರ್ಮಿಸಲಾಗುತ್ತದೆ. ವಿವಿಧ ಜಾತಿಯ ಕತ್ತರಿಸಿದ ಹೂವಿನ ಆಕರ್ಷಕ ಜೋಡಣೆ, ಹೂವಿನ ಅಲಂಕಾರಿಕ ಕುಂಡಗಳ ಜೋಡಣೆ ಮಾಡಲಾಗುವುದು. ವರ್ಟಿಕಲ್ ಗಾರ್ಡನ್ ಮಾಡೆಲ್, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಪ್ರದರ್ಶನದಲ್ಲಿ ಮುಖ್ಯವಾಗಿ ಜಿಲ್ಲೆಯ ವಿವಿಧ ತಾಲೂಕಿನಿಂದ ರೈತರು ಬೆಳೆದ ತೋಟಗಾರಿಕೆ ಬೆಳೆಗಳ ಉತ್ತಮ ಪ್ರದರ್ಶಿಕೆಗಳಾದ ತರಕಾರಿ, ಹೂವು, ಸಾಂಬಾರು, ಸಂಸ್ಕರಿಸಿದ ಪದಾರ್ಥಗಳ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ. ತೋಟಗಾರಿಕೆ ಇಲಾಖೆಯಿಂದ ಸ್ಥಾಪಿತವಾದ ರೈತ ಉತ್ಪಾದಕ ಕಂಪೆನಿಗಳ ಉತ್ಪನ್ನಗಳ ಪ್ರದರ್ಶನ, ಇಲಾಖಾ ಕಾರ್ಯಕ್ರಮಗಳ ಪಕ್ಷಿನೋಟ ಬಿಂಬಿಸಲಾಗುವುದು. ಕಸದಿಂದ ರಸದಡಿ ವಿವಿಧ ತೋಟಗಾರಿಕೆ ತ್ಯಾಜ್ಯದಿಂದ ತಯಾರಿಸಿದ ಉತ್ಪನ್ನಗಳ ಪ್ರದರ್ಶನ, ಹನಿ ನೀರಾವರಿ ಯೋಜನೆಯ ಮಾಡೆಲ್, ಜೇನುಕೃಷಿ ಉತ್ಪನ್ನಗಳ ಪ್ರದರ್ಶನ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಸಂಸ್ಕರಿತ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ. ಪ್ರದರ್ಶನದಲ್ಲಿ ರೈತರ ಉತ್ತಮ ಪ್ರದರ್ಶಿಕೆಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದರು.

ಸಭಾಪತಿ ಬಸವರಾಜ ಹೊರಟ್ಟಿ ಘನ ಉಪಸ್ಥಿತಿಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನವನ್ನು ಮಾ. ೫ರಂದು ಸಂಜೆ ೫ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಉದ್ಘಾಟಿಸಲಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಎಂಸಿಎ ಅಧ್ಯಕ್ಷ ಸತೀಶ ಸೈಲ್, ಸಂಸದರು, ಶಾಸಕರು, ವಿವಿಧ ಸ್ತರದ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ ಎಂದ ಅವರು, ಫಲಪುಷ್ಪ ಪ್ರದರ್ಶನಕ್ಕೆ ಇಲಾಖೆಯಿಂದ ₹೧೦ ಲಕ್ಷ ಅನುದಾನ ಲಭ್ಯವಿದ್ದು, ೧೫ರಿಂದ ೨೦ ತಳಿಗಳ ೨೫ ಸಾವಿರ ಹೂವುಗಳು, ೨,೫೦೦ ಹೂವಿನ ಕುಂಡಗಳನ್ನು ಪ್ರದರ್ಶನ ಮಾಡಲಾಗುವುದು ಎಂದರು.

ಕೃಷಿ ಇಲಾಖೆಯ ಉಪನಿರ್ದೇಶಕ ಟಿ.ಎನ್. ನಟರಾಜ ಮಾತನಾಡಿ, ಕದಂಬೋತ್ಸವದಲ್ಲಿ ನಡೆಯುವ ಫಲ ಪುಷ್ಪ ಪ್ರದರ್ಶನದಲ್ಲಿ ೩೦ ಮಳಿಗೆಗಳಲ್ಲಿ ವಸ್ತು ಪ್ರದರ್ಶನಕ್ಕೆ ಏರ್ಪಾಟು ಮಾಡಿಕೊಳ್ಳಲಾಗಿದ್ದು, ಈ ವರ್ಷ ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಿದೆ. ಆದ್ದರಿಂದ ಸಿರಿಧಾನ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಮಾ. ೫ರಂದು ಬೆಳಗ್ಗೆ ೯ ಗಂಟೆಗೆ ತೋಟಗಾರಿಕಾ ಮತ್ತು ಅರಣ್ಯ ಕಾಲೇಜಿನ ವಿದ್ಯಾರ್ಥಿಗಳ ಆಶ್ರಯದಲ್ಲಿ ಸಿರಿಧಾನ್ಯ ನಡಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು, ಜನರಲ್ಲಿ ಸಿರಿಧಾನ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಸಹಾಯಕ ನಿರ್ದೇಶಕ ಗಣೇಶ ಹೆಗಡೆ, ಕೃಷಿ ಇಲಾಖೆಯ ಅಧಿಕಾರಿ ನಂದೀಶ ಮತ್ತಿತರರು ಇದ್ದರು.