ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ದೇವಳದ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳ ವಠಾರದ ಮನೆಗಳ ತೆರವು ಕಾರ್ಯಾಚರಣೆಯ ಸಂದರ್ಭ ಮನೆಯೊಂದರ ಮೇಲೆಯೇ ಮರ ಉರುಳಿ ಬಿದ್ದು ಮನೆ ಸಂಪೂರ್ಣವಾಗಿ ಕುಸಿದ ಘಟನೆ ಸೋಮವಾರ ನಡೆದಿದೆ.ಮನೆ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದ ವ್ಯಕ್ತಿಯೋರ್ವರ ಮನೆಯ ಮೇಲೆಯೇ ಮರ ಬಿದ್ದಿದೆ. ದೇವಳದ ಜಾಗದಲ್ಲಿದ್ದ ಒಂದು ಮನೆಯನ್ನು ಹೊರತುಪಡಿಸಿ ಉಳಿದೆಲ್ಲ ಮನೆಗಳನ್ನು ಜೆಸಿಬಿ ಮೂಲಕ ತೆರವು ಮಾಡಲಾಯಿತು.ಸೋಮವಾರ ಬೆಳಗ್ಗೆ ಬೃಹತ್ ಮರದ ತೆರವು ಕಾರ್ಯ ಪ್ರಾರಂಭಗೊಂಡಿತ್ತು. ಈ ಮರದ ಸಮೀಪ ಮನೆ ತೆರವಿಗೆ ವಿರೋಧ ವ್ಯಕ್ತಪಡಿಸಿದ ಮನೆಯು ಇದ್ದು, ಮರ ಕಡಿಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮರ ಮನೆ ಮೇಲೆ ಬಿದ್ದಿದೆ. ಮನೆ ಪಡೆದುಕೊಂಡಿದ್ದ ವ್ಯಕ್ತಿ ಬೆಳ್ತಂಗಡಿಯಲ್ಲಿ ನೆಲೆಸಿದ್ದು, ಆ ಮನೆಯಲ್ಲಿ ನಾಲ್ಕು ಕುಟುಂಬಗಳು ಬಾಡಿಗೆ ನೆಲೆಯಲ್ಲಿ ವಾಸಿಸುತ್ತಿದ್ದರು. ಬಾಡಿಗೆಯಲ್ಲಿದ್ದ ಮನೆ ಮಂದಿ ತಾವು ಮನೆ ಬಿಟ್ಟು ತೆರಳುವುದಾಗಿ ಹೇಳಿ ಭಾನುವಾರವೇ ಸ್ಥಳಾಂತರಗೊಂಡಿದ್ದರು. ಹೀಗಾಗಿ ಮನೆ ಖಾಲಿ ಇದ್ದು, ಮರ ಬಿದ್ದ ಸಂದರ್ಭದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಮನೆಗೆ ಹಾನಿ ಉಂಟಾದ ಕಾರಣದಿಂದ ಇಡೀ ಮನೆಯನ್ನು ತೆರವುಗೊಳಿಸಲಾಯಿತು.ಸ್ಥಳಕ್ಕೆ ಆಗಮಿಸಿದ ಶಾಸಕ ಆಶೋಕ್ ಕುಮಾರ್ ರೈ ಮಾಧ್ಯಮದೊಂದಿಗೆ ಮಾತನಾಡಿ, ದೇವಳದ ಅಭಿವೃದ್ಧಿಗೆ ಸಹಕಾರ ಕೊಟ್ಟು ದೇವಳದ ಜಾಗದಲ್ಲಿರುವ ತಮ್ಮ ಮನೆಗಳನ್ನು ಸ್ವಂತ ಇಚ್ಛೆಯಿಂದ ತೆರವು ಮಾಡಿದ ಕುಟುಂಬಗಳಿಗೆ ಈಗಾಗಲೇ ೧೭ ಲಕ್ಷ ರು. ನೀಡಲಾಗಿದೆ. ಈ ಹಣವನ್ನು ನಾನು ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಭರಿಸಿದ್ದೇವೆ. ಎಲ್ಲರ ಜತೆಗೆ ಮಾತುಕತೆ ನಡೆಸಿಯೇ ಮನೆ ತೆರವು ಕಾರ್ಯ ನಡೆದಿದೆ ಎಂದು ಹೇಳಿದರು.ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ದೇವಳ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯಕುಮಾರ್, ದಿನೇಶ್ ಪಿ.ವಿ. ಮತ್ತಿತರರು ಇದ್ದರು.