ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಇದೀಗ ರಾಮನ ಜಪ ಶುರುವಾಗಿದೆ. ಈ ಮಧ್ಯೆ, ಹುಬ್ಬಳ್ಳಿಯಲ್ಲಿ 1992ರ ಡಿ.5ರಂದು ಶ್ರೀರಾಮಮಂದಿರಕ್ಕಾಗಿ ನಡೆದಿದ್ದ ಹೋರಾಟದಲ್ಲಿ ಪಾಲ್ಗೊಂಡಿದ್ದವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಹದಿನೈದು ದಿನಗಳ ಹಿಂದೆ, ಡಿ.9ರಂದು ರಾಜು ಧರ್ಮದಾಸ ಎಂಬುವರನ್ನು ಹಾಗೂ ಎರಡು ದಿನದ ಹಿಂದೆ ಶ್ರೀಕಾಂತ ಪೂಜಾರಿ ಎಂಬುವರನ್ನು ಪೊಲೀಸರು ಬಂಧಿಸಿದ್ದು, 31 ವರ್ಷಗಳ ಬಳಿಕ ಹೋರಾಟದ ಪ್ರಕರಣಕ್ಕೆ ಮರುಜೀವ ಬಂದಿದೆ. ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡಲು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು ಸೂಚನೆ ನೀಡಿದ್ದು, ಹುಬ್ಬಳ್ಳಿಯಲ್ಲಿ 32 ಪ್ರಕರಣಗಳು ಬಾಕಿ ಉಳಿದಿದ್ದವು. ಈ ಪ್ರಕರಣಗಳ ಮರು ಪರಿಶೀಲನೆ ನಡೆಸುವ ವೇಳೆ ಅಯೋಧ್ಯೆ ಹೋರಾಟದ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.ಪ್ರಕರಣವೇನು?:
1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ನೆಲಸಮವಾಗಿತ್ತು. ಅದರ ಮುನ್ನಾದಿನ ಡಿ.5ರಂದು ಹುಬ್ಬಳ್ಳಿಯಲ್ಲೂ ರಾಮಮಂದಿರಕ್ಕಾಗಿ ಹೋರಾಟ ನಡೆದಿತ್ತು. ಆಗ ಕಲ್ಲು ತೂರಾಟ ನಡೆದು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಆ ಪ್ರಕರಣದಲ್ಲಿ 9 ಹೋರಾಟಗಾರರ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.9 ಹೋರಾಟಗಾರರ ಪೈಕಿ ಮೂವರು ಈಗಾಗಲೇ ನಿಧನರಾಗಿದ್ದಾರೆ. ಉಳಿದ 6 ಜನರ ಪೈಕಿ ಹದಿನೈದು ದಿನಗಳ ಹಿಂದೆ, ಡಿ.9ರಂದು ರಾಜು ಧರ್ಮದಾಸ ಎಂಬುವರನ್ನು ಬಂಧಿಸಲಾಗಿತ್ತು. ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಎರಡು ದಿನದ ಹಿಂದೆ, ಶ್ರೀಕಾಂತ ಪೂಜಾರಿ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನುಳಿದವರಿಗೆ ನೋಟಿಸ್ ಹೋಗುತ್ತಿದೆಯಂತೆ. ಆಗ ಹೋರಾಟದಲ್ಲಿ ಪಾಲ್ಗೊಂಡವರೆಲ್ಲರೂ 25-30 ವರ್ಷದೊಳಗಿನವರಿದ್ದರು. ಇದೀಗ ಅವರಿಗೆಲ್ಲ 55-60 ವರ್ಷಗಳಾಗಿವೆ.
ಈ ಮಧ್ಯೆ, ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಹೋರಾಟಗಾರರ ಬಂಧನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಮಮಂದಿರ ಉದ್ಘಾಟನೆಯ ವೇಳೆಯೇ ಹೋರಾಟಗಾರರನ್ನು ಬಂಧಿಸುತ್ತಿರುವುದು ಎಷ್ಟು ಸರಿ? ಇವರನ್ನು ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.ಈ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಲಾಂಗ್ ಪೆಂಡಿಂಗ್ ಕೇಸ್‌ಗಳ ಪರಿಶೀಲನೆ ಮಾಡಲಾಗುತ್ತಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಇತರ ಪ್ರಕರಣದಂತೆ ಇದು ಕೂಡ ಒಂದು, ಇದರಲ್ಲೇನು ವಿಶೇಷವಿಲ್ಲ ಎಂದು ತಿಳಿಸಿದ್ದಾರೆ.
ಇವೆಲ್ಲ ಹಳೇ ಕೇಸ್‌ಹಲವಾರು ವರ್ಷಗಳಿಂದ ಬಾಕಿ ಇದ್ದ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಅದೇ ರೀತಿ 1992ರಲ್ಲಿ ನಡೆದ ಘಟನೆಯಲ್ಲಿ ಶ್ರೀಕಾಂತ ಪೂಜಾರಿ ಆರೋಪಿಯಾಗಿದ್ದರು. ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ಆ ಪ್ರಕರಣದಲ್ಲಿ 9 ಜನರ ವಿರುದ್ಧ ಕೇಸ್ ದಾಖಲಾಗಿತ್ತು.- ರೇಣುಕಾ ಸುಕುಮಾರ, ಕಮಿಷನರ್, ಹುಬ್ಬಳ್ಳಿ-ಧಾರವಾಡ
ಇಷ್ಟು ದಿನ ಏಕೆ ಬಂಧಿಸಲಿಲ್ಲ?ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಇಂಥ ವೇಳೆಯಲ್ಲೇ ಬೇಕಂತಲೇ ಕಾಂಗ್ರೆಸ್ ಸರ್ಕಾರ ಹೋರಾಟಗಾರರನ್ನು ಬಂಧಿಸುವ ಮೂಲಕ ಹೆದರಿಸುವ ತಂತ್ರ ಮಾಡಿದೆ. ಇಷ್ಟು ವರ್ಷ ಅವರನ್ನೇಕೆ ಬಂಧಿಸಲಿಲ್ಲ? ಈಗಲೇ ಬಂಧಿಸುವ ಉದ್ದೇಶವೇನು?
- ಮಹೇಶ ಟೆಂಗಿನಕಾಯಿ, ಶಾಸಕನೋಟಿಸ್ ಕೂಡ ಕೊಟ್ಟಿರಲಿಲ್ಲ
1992ರಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ನನ್ನನ್ನು ಅರೆಸ್ಟ್ ಮಾಡಿದ್ದರು. ನ್ಯಾಯಾಲಯದಿಂದ ಜಾಮೀನು ಪಡೆದಿದ್ದೇನೆ. ಆದರೆ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಷ್ಟು ದಿನ ನೋಟಿಸ್ ಕೂಡ ಕೊಟ್ಟಿರಲಿಲ್ಲ. ಬಂಧಿಸಿಯೂ ಇರಲಿಲ್ಲ. ಈಗ ಅರೆಸ್ಟ್ ಮಾಡಿಕೊಂಡು ಹೋಗುತ್ತಿದ್ದಾರೆ.- ರಾಜು ಧರ್ಮದಾಸ್, ಜಾಮೀನಿನ ಮೇಲೆ ಹೊರಗಿರುವ ಆರೋಪಿ.ಹೋರಾಟ ನಡೆಸಬೇಕಾಗುತ್ತೆ
ಅಯೋಧ್ಯೆಯ ಶ್ರೀರಾಮಮಂದಿರ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿದ್ದೇವೆ. ಆಮಂತ್ರಣ ಪತ್ರಿಕೆ ನೀಡುತ್ತಿದ್ದೇವೆ. ಇಂಥ ಸಮಯದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿರುವುದು ಖಂಡನೀಯ. ಕೂಡಲೇ ಬಂಧಿತರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.- ರಮೇಶ ಕದಂ, ಜಿಲ್ಲಾ ಕಾರ್ಯದರ್ಶಿ, ವಿಎಚ್‌ಪಿ.