ಸಾರಾಂಶ
ಹುಲ್ಲಹಳ್ಳಿ ಗ್ರಾಮಕ್ಕೆ ಈಗಾಗಲೇ 20 ಕೋಟಿ ರು. ವೆಚ್ಚದಲ್ಲಿ ಹುರ ಮತ್ತು ಹುಲ್ಲಹಳ್ಳಿ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ,
ಫೋಟೋ- 9ಎಂವೈಎಸ್ 54----ಕನ್ನಡಪ್ರಭ ವಾರ್ತೆ ನಂಜನಗೂಡು
ತಾಲೂಕಿನ ಹುಲ್ಲಹಳ್ಳಿಯಲ್ಲಿ 3.53 ಕೋಟಿ ರು. ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜು ಕಟ್ಟಡ, ಎಸ್ಇಪಿ, ಟಿಎಸ್ ಪಿ ಯೋಜನೆಯಡಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಹುಲ್ಲಹಳ್ಳಿ, ಬೆಳಲೆ, ಮೊಬ್ಬಹಳ್ಳಿ, ಗೀಕಹಳ್ಳಿ, ಕೋಡಿನರಸೀಪುರ, ದೇವನೂರು, ನಂಜನಹಳ್ಳಿ, ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಹುಲ್ಲಹಳ್ಳಿ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಿಸಿ ಕೊಡುವಂತೆ ಬೇಡಿಕೆ ಇತ್ತು, ಅದರಂತೆ 1.36 ಕೋಟಿ ವೆಚ್ಚದಲ್ಲಿ ಪದವಿಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಟ್ಟಡವು ಮುಂದಿನ 6 ತಿಂಗಳಲ್ಲಿ ಮುಕ್ತಾಯಗೊಂಡು ಬರುವ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಇದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲಿದೆ ಎಂದರು. ಹುಲ್ಲಹಳ್ಳಿ ಗ್ರಾಮಕ್ಕೆ ಈಗಾಗಲೇ 20 ಕೋಟಿ ರು. ವೆಚ್ಚದಲ್ಲಿ ಹುರ ಮತ್ತು ಹುಲ್ಲಹಳ್ಳಿ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ, ಅಲ್ಲದೆ ಸಣ್ಣ ನೀರಾವರಿ ಇಲಾಖೆಯಿಂದ ಒಂದು ಕೋಟಿ ರು. ವೆಚ್ಚದಲ್ಲಿ ಸೋಪಾನಕಟ್ಟೆ ನಿರ್ಮಿಸಲಾಗಿದೆ. ಎಸ್.ಇಪಿ ಮತ್ತು ಟಿಎಸ್ ಪಿ ಯೋಜನೆಯಡಿ ರಸ್ತೆಗಳನ್ನು ನಿರ್ಮಿಸಿ ಕೊಡಲಾಗಿದೆ ಪ್ರಸಕ್ತ ವರ್ಷ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ರವರ 50 ಲಕ್ಷ ರು. ಟಿಎಸ್ಪಿ ಯೋಜನೆ ಅಡಿ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಸಂಪೂರ್ಣ ಅನುದಾನವನ್ನು ಹುಲ್ಲಹಳ್ಳಿ ಗ್ರಾಮದ ಪ. ಪಂಗಡದವರ ಬೀದಿಗಳ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ, ಅಲ್ಲದೆ ಟ್ಯಾಕ್ಸಿ ಶೆಲ್ಟರ್ ನಿರ್ಮಾಣಕ್ಕೆ 5 ಲಕ್ಷ, ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಗಳಿಗೆ ಬರುವ ಜನರಿಗೆ ಅನುಕೂಲ ವಾಗುವಂತೆ ಹುಲ್ಲಹಳ್ಳಿ ಗ್ರಾಮದ ಕುರಿ ಹುಂಡಿಗೆ ಹೋಗುವ ರಸ್ತೆಯಲ್ಲಿ 13 ಲಕ್ಷ ವೆಚ್ಚದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ, ಜೊತೆಗೆ ಇಲ್ಲಿನ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಆ ರಸ್ತೆ ಅಭಿವೃದ್ಧಿ ಕಾರ್ಯವನ್ನು ಎಸ್.ಇಪಿ ಅನುದಾನದಲ್ಲಿ ಮುಕ್ತಾಯಗೊಳಿಸುವುದರ ಜೊತೆಗೆ ಹುಲ್ಲಹಳ್ಳಿ ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ದೇವನೂರು ಗ್ರಾಮದಲ್ಲಿ 15 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡ ಹಾಗೂ 15 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಶಾಲಾ ಕೊಠಡಿಯನ್ನು ಉದ್ಘಾಟನೆ ನೆರವೇರಿಸಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಶ್ರೀಕಂಠ ನಾಯಕ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ಕಾಂಗ್ರೆಸ್ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜು, ತಾಪಂ ಮಾಜಿ ಅಧ್ಯಕ್ಷ ಚಾಮರಾಜು, ಮುಖಂಡರಾದ ದೊರೆಸ್ವಾಮಿನಾಯಕ, ಎನ್.ಎಸ್. ಮಾದಪ್ಪ, ರಾಜೇಶ್, ಅಭಿನಂದನ್ ಪಟೇಲ್, ರಾಜು, ಶಿವಪ್ಪ ದೇವರು, ಮಹದೇವು, ಸ್ವಾಮಿ ನಾಯಕ, ಅಣ್ಣಬಸವಣ್ಣ, ಸಾಮಾಜಿಕ ಜಾಲತಾಣ ಅಧ್ಯಕ್ಷ ಎಸ್. ಮಹೇಶ್, ಕೆಆರ್.ಐಡಿಎಲ್ ಅಧಿಕಾರಿಗಳಾದ ಶರಣ್, ಪುರುಷೋತ್ತಮ್, ನಿರ್ಮಿತಿ ಕೇಂದ್ರದ ಎಇ ಯಶವಂತ, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಣ್ಣ ಇದ್ದರು.