ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಸೋಲಿಗೆ ವಿಚಲಿತರಾಗದೆ ಮತ್ತಷ್ಟು ಅಭ್ಯಾಸ ಮಾಡಿ ಗೆಲುವಿನ ಹಾದಿಯಲ್ಲಿ ಸಾಗುವುದೇ ನಿಜವಾದ ಸಾಧನೆ ಎಂದು ಅಧಮ್ಯ ಚೇತನ ಸಂಸ್ಥೆಯ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) , ಎಚ್.ಎನ್.ಅನಂತಕುಮಾರ್ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರ ರಾಮನಗರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪದವಿ ಪೂರ್ವ ಶಿಕ್ಷಣ ತಿರುವಿನ ಹಂತ. ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ಸುವರ್ಣ ಸಮಯ. ಪಠ್ಯಕ್ರಮವನ್ನು ಚೆನ್ನಾಗಿ ಅಧ್ಯಯನ ಮಾಡಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ದೇಶಾಭಿವೃದ್ಧಿಗೆ ಶ್ರಮಿಸಿ. ಆಟೋಟಗಳಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ ಗೆಲುವನ್ನು ಹಾಗೂ ಉತ್ತಮ ಆರೋಗ್ಯವನ್ನು ಪಡೆಯಿರಿ. ಪಠ್ಯ ಮತ್ತು ಆಟೋಟಗಳಲ್ಲೂ ಉನ್ನತಿ ಸಾಧಿಸಿ ಎಂದರು.ಅಧ್ಯಕ್ಷತೆ ವಹಿಸಿದ್ದ ಬಿ.ವಿ.ವಿ.ಸಂಘದ ಅಧ್ಯಕ್ಷರಾದ ವೀರಣ್ಣ ಸಿ ಚರಂತಿಮಠ, ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಯೋಜನೆ ಮೂಲಕ ಕ್ರೀಡಾ ಸ್ಪರ್ಧೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಸಂಸತ್ತಿನಲ್ಲಿ ಕ್ರೀಡಾ ಮಸೂದೆ ಪಾಸ್ ಆಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಮತ್ತಷ್ಟು ನೆರವು ಸಿಗಲಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಒಲಂಪಿಕ್ ಸ್ಪರ್ಧೆಗಳ ಆಯೋಜನೆ ಮಾಡಲು ಉದ್ದೇಶಿಸಿರುವುದು ಭವಿಷ್ಯದಲ್ಲಿ ಕ್ರೀಡಾಪಟುಗಳಿಗೆ ಉಜ್ವಲ ಅವಕಾಶಗಳು ಲಭ್ಯವಾಗಲಿವೆ ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಮನವಿ ಮೇರೆಗೆ ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಿದ್ದೇವೆ. 28 ಕಾಲೇಜುಗಳ 1500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದು, ವೈವಿಧ್ಯ ಕ್ರೀಡಾ ಸ್ಪರ್ಧೆಗಳಲ್ಲಿ ತಮ್ಮ ಆಟದ ಪ್ರತಿಭೆಯನ್ನು ಪಣಕ್ಕಿಡಲಿದ್ದಾರೆ. ಕ್ರೀಡಾ ಮನೋಭಾವ ಮೂಲಕ ಸೋಲು- ಗೆಲುವು ಸಮಾನವಾಗಿ ಸ್ವೀಕರಿಸಿ, ತೀರ್ಪುಗಾರರ ತೀರ್ಪನ್ನು ಗೌರವಿಸುವ ಗುಣಧರ್ಮವನ್ನು ರೂಢಿಸಿಕೊಳ್ಳಬೇಕು ಎಂದರು.ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಎಂ.ಮರಿಸ್ವಾಮಿ ಮಾತನಾಡಿ, ಕ್ರಿಕೆಟ್ ದೇವರು ಎಂದು ಜನಪ್ರಿಯರಾಗಿರುವ ಸಚಿನ್ ತೆಂಡೂಲ್ಕರ್ ಅವರು ಅನೇಕ ವಿಶ್ವದಾಖಲೆಗಳನ್ನು ನಿರ್ಮಿಸಿದರು. ಅವರು ಮುಗ್ದತೆಯನ್ನು, ಸಮಚಿತ್ತತೆಯನ್ನು, ಸಮಾಧಾನ ಮನಸ್ಥಿತಿಯನ್ನು ಹೊಂದಿದ್ದರು. ಕ್ರೀಡಾ ಮೌಲ್ಯಗಳನ್ನು ಅನುಸರಣೆ ಮಾಡಿದ್ದರಿಂದಾಗಿ ಅಭಿಮಾನಿಗಳಿಂದ ಕ್ರಿಕೆಟ್ ದೇವರು ಎಂದು ಕರೆಸಿಕೊಂಡರು. ಸೋಲೋ ಇಲ್ಲ ಗೆಲುವೋ ಅಮುಖ್ಯ. ಒಬ್ಬರು ಸೋತರೆ ಮಾತ್ರ ಮತ್ತೊಬ್ಬರು ಗೆಲ್ಲಲು ಸಾಧ್ಯ. ಗೆದ್ದವರನ್ನು ಅಭಿನಂದಿಸುವ, ಮತ್ತಷ್ಟು ಅಭ್ಯಾಸಮಾಡಿ ಗೆಲುವಿಗೆ ಶ್ರಮಿಸುವುದೇ ನಿಜವಾದ ಕ್ರೀಡಾ ಮನೋಭಾವ ಎಂದು ಹೇಳಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ಮಹಾಂತೇಶ್ ಶೆಟ್ಟರ್, ಪ್ರಾಂಶುಪಾಲ ಡಾ.ಬಿ.ರಾಜೇಶ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ, ಕಾರ್ಯದರ್ಶಿ ದೊಡ್ಡಬೋರಯ್ಯ, ಜಿಲ್ಲಾ ಕ್ರೀಡಾಸಂಚಾಲಕ ಎಂ.ಎನ್.ಪ್ರದೀಪ್, ದೈಹಿಕ ಶಿಕ್ಷಣ ಪರಿವೀಕ್ಷಕ ನೀಲಕಂಠ ಸ್ವಾಮಿ ಮಠ, ಪ್ರಾಂಶುಪಾಲರಾದ ರೇಖಾ, ಜೆ.ಬಿ.ಚನ್ನವೀರಯ್ಯ, ಹೆಮೇಗೌಡ, ರಾಜಣ್ಣ, ಚೇತನ್ ಕುಮಾರ್, ರಂಗಸ್ವಾಮಿ ಮೊದಲಾದವರು ಹಾಜರಿದ್ದರು.