ಸರ್ಕಾರಿ ಬಸ್ ನಿಲ್ದಾಣ ನಿರ್ಮಿಸಲು ಕೈಗಾರಿಕಾ ಪ್ರದೇಶ ಭಾಗದಲ್ಲಿ ಒಂದು ಎಕರೆ ಜಾಗ ಗುರುತಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ. ಇರುವ ಹಳೆಯ ಬಸ್ಸು ನಿಲ್ದಾಣವನ್ನು ನವೀಕರಣ ಸಹ ಮಾಡಲಾಗುವುದು. ಈಗಾಗಲೇ 2 ಕೋಟಿ ರು. ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕೆಲಸ ನಡೆಯುತ್ತಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ರಾಮನಗರ ಕ್ಷೇತ್ರ ವ್ಯಾಪ್ತಿಯ ಕಸಬಾ ಮತ್ತು ಕೈಲಾಂಚ ಹೋಬಳಿಗಳ 47 ಕೆರೆಗಳನ್ನು ತುಂಬಿಸಲು 108 ಕೋಟಿ ರು. ಅನುದಾನ ದೊರಕಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 12 ಕೋಟಿ, 80 ಲಕ್ಷ ರು. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಮಂಚನಬೆಲೆ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ನೀರು ಸರಾಗವಾಗಿ ಹರಿಯಲು ನಾಲೆಗಳ ಪುನಶ್ಚೇತನ ಮಾಡುವ ಅವಶ್ಯಕತೆಯಿದೆ. ಅಧಿಕಾರಿಗಳು ಸರ್ವೇ ನಡೆಸಿ 70 ಕೋಟಿ ರು. ಅಂದಾಜು ವೆಚ್ಚದ ಡಿಪಿಆರ್ ಸಿದ್ಧಪಡಿಸಿದ್ದು, ಅನುದಾನಕ್ಕಾಗಿ ಸರ್ಕಾರ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಲಾಗುವುದು ಎಂದು ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ ಸುಗ್ಗನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 22 ಕೋಟಿ, 80 ಲಕ್ಷ ರು.ಗಳ ವೆಚ್ಚದ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸುಗ್ಗನಹಳ್ಳಿ ಸೇತುವೆ ಮಳೆ ಪ್ರವಾಹದಲ್ಲಿ ಮುರಿದು ಜನರ ಓಡಾಟಕ್ಕೆ ತೊಂದರೆಯಾಗಿತ್ತು. ಅದನ್ನು ಹೊಸದಾಗಿ ನಿರ್ಮಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀರಾವರಿ ಇಲಾಖೆಯಿಂದ 10 ಕೋಟಿ ರು. ಮಂಜೂರು ಮಾಡಿದ್ದಾರೆ.

ಈಗ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸೇರಿದಂತೆ ಗ್ರಂಥಾಲಯ, ರಸ್ತೆ, ಸೇತುವೆಗಳ ಲೋಕಾರ್ಪಣೆ ಮಾಡಲಾಗುತ್ತಿದೆ. ಹರೀಸಂದ್ರದ ಸೇತುವೆ ನಿರ್ಮಾಣ ಮಾಡಲು ಸಹ ಯೋಜನೆ ರೂಪಿಸಿದ್ದು ಕಾರ್ಯಗತ ಮಾಡುವ ಹಂತದಲ್ಲಿದೆ ಎಂದರು.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮನಗರಕ್ಕೆ ಭೇಟಿ ನೀಡಿದಾಗ ನನ್ನ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವ ಭರವಸೆ ನೀಡಿದ್ದರು. ಇದುವರೆಗೆ 30 ಕೋಟಿ ರು.ಗಳ ವಿಶೇಷ ಅನುದಾನ ನೀಡಿದ್ದು, ಇದೀಗ ಮತ್ತೆ 50 ಕೋಟಿ ರು.ಗಳ ಅನುದಾನ ಸಿಗಲಿದ್ದು, ಇದರಲ್ಲಿ ಅಗತ್ಯವಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಸರ್ಕಾರಿ ಬಸ್ ನಿಲ್ದಾಣ ನಿರ್ಮಿಸಲು ಕೈಗಾರಿಕಾ ಪ್ರದೇಶ ಭಾಗದಲ್ಲಿ ಒಂದು ಎಕರೆ ಜಾಗ ಗುರುತಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ. ಇರುವ ಹಳೆಯ ಬಸ್ಸು ನಿಲ್ದಾಣವನ್ನು ನವೀಕರಣ ಸಹ ಮಾಡಲಾಗುವುದು. ಈಗಾಗಲೇ 2 ಕೋಟಿ ರು. ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕೆಲಸ ನಡೆಯುತ್ತಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಅರ್ಪಿತಾ ಹರೀಶ್, ಉಪಾಧ್ಯಕ್ಷೆ ಗೋವಿಂದರಾಜು, ಸದಸ್ಯರಾದ ಚಿಕ್ಕಸ್ವಾಮಿ, ಕೆಡಿಪಿ ಸದಸ್ಯ ಮುಕುಂದ, ಗುತ್ತಿಗೆದಾರರಾದ ವಾಸು, ಗೋವಿಂದು, ಮುಖಂಡರಾದ ಸಿ.ರಾಮಯ್ಯ, ಉಮಾಶಂಕರ್, ಆಂಜನಪ್ಪ, ಚಂದ್ರು, ಕಗ್ಗಲ್ಲಯ್ಯ, ವೆಂಕಟಪ್ಪ, ರವಿ, ಗುರುಪ್ರಸಾದ್, ಲಕ್ಕಸಂದ್ರಶಿವಣ್ಣ, ದಯಾನಿಧಿ, ರಾಮಕೃಷ್ಣಯ್ಯ, ತಾಪಂ ಇಒ ಪೂರ್ಣಿಮಾ, ಪಿಡಿಒ ಸುರೇಶ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

‘ರಾಮನಗರ ವಿಧಾನಸಭಾ ಕ್ಷೇತ್ರ ಒಂದು ಪುಣ್ಯ ಭೂಮಿಯಾಗಿದ್ದು, ಪ್ರಧಾನಮಂತ್ರಿ, ಮುಖ್ಯಮಂತ್ರಿ ಕೊಟ್ಟಂತಹ ವಿಶೇಷ ಶಕ್ತಿಯನ್ನು ಹೊಂದಿರುವ ಕ್ಷೇತ್ರ. ಆದರೆ ಹಲವು ವರ್ಷಗಳಿಂದ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಡಿ.ಕೆ.ಶಿವಕುಮಾರ್ ಸಹಕಾರದಲ್ಲಿ ಅಭಿವೃದ್ಧಿಗೆ ವೇಗ ನೀಡಿದ್ದೇವೆ. ವಸತಿ, ನೀರಾವರಿ, ಶಾಲಾ-ಕಾಲೇಜು ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ನವ ರಾಮನಗರದ ಪರಿಕಲ್ಪನೆ ಸಾಕಾರವಾಗುತ್ತಿದೆ.’

-ಎಚ್.ಎ.ಇಕ್ಬಾಲ್‌ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ.