ಹಣವಿಲ್ಲದೇ ವಸತಿ ಯೋಜನೆಗಳಿಗೆ ಭಾರಿ ಹಿನ್ನಡೆ: ಡಾ.ಪ್ರಭಾ

| Published : Jan 29 2025, 01:30 AM IST

ಸಾರಾಂಶ

ಬಡವರು, ವಸತಿ ರಹಿತರಿಗಾಗಿ ರೂಪುಗೊಂಡ ವಸತಿ ಯೋಜನೆಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲದಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ವಸತಿ ಯೋಜನೆಯೇ ವಿಫಲವಾಗುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಸೂಚ್ಯವಾಗಿ ಹೇಳಿದ್ದಾರೆ.

- ರಾಜ್ಯ, ಕೇಂದ್ರ ಸಚಿವಾಲಯಕ್ಕೆ ಅಗತ್ಯ ಅನುದಾನ ಕೋರಲು ಮನವಿ ಸಿದ್ಧಪಡಿಸಲು ಸಂಸದೆ ತಾಕೀತು

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಬಡವರು, ವಸತಿ ರಹಿತರಿಗಾಗಿ ರೂಪುಗೊಂಡ ವಸತಿ ಯೋಜನೆಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲದಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ವಸತಿ ಯೋಜನೆಯೇ ವಿಫಲವಾಗುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೂಚ್ಯವಾಗಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ, ಗ್ರಾಮೀಣ ವಸತಿ ಯೋಜನೆಗಳ ಪ್ರಗತಿಯೇ ತೃಪ್ತಿಕರವಾಗಿಲ್ಲ. ಇದೊಂದು ಸ್ಥಗಿತ ಯೋಜನೆಯಾಗಿದ್ದು, ಯಾವುದೇ ಅಭಿವೃದ್ಧಿಯೇ ಕಾಣುತ್ತಿಲ್ಲ ಎಂದರು.

ವಸತಿ ಯೋಜನೆ ಅನುದಾನ ಸಾಲದಾಗಿದ್ದು, ಹೆಚ್ಚಿನ ಅನುದಾನ ಕೋರಿ ನಮ್ಮ ಜಿಲ್ಲೆಯಿಂದ ಒಂದು ಮನವಿ ಸಿದ್ಧಪಡಿಸಿಕೊಂಡು, ರಾಜ್ಯ ಸಚಿವಾಲಯ, ಕೇಂದ್ರ ಸಚಿವಾಲಯಕ್ಕೆ ಮನವಿ ಮಾಡಬೇಕು. ಇಲ್ಲವಾದರೆ ಯೋಜನೆ ಸಂಪೂರ್ಣ ವಿಫಲವೆಂದೇ ಹೇಳಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಲಾಖೆ ಅಧಿಕಾರಿ ಮಾತನಾಡಿ, ಬಹುತೇಕ ಫಲಾನುಭವಿಗಳು ಫೌಂಡೇಷನ್ ಹಾಕುವ ಮುನ್ನವೇ ಹಣ ಕೇಳುತ್ತಾರೆ. ‍ ಆದರೆ, ಬುನಾದಿ ಹಾಕಲು ಹಣ ನೀಡುವ ವ್ಯವಸ್ಥೆಗೆ ಯೋಜನೆಯಲ್ಲಿ ಅವಕಾಶ ಇಲ್ಲ. ಒಟ್ಟಾರೆ, ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲದು ಎಂಬ ಕಾರಣಕ್ಕೆ ಯೋಜನೆ ಸದುಪಯೋಗಕ್ಕೆ ಜನರು ಸಹ ಮುಂದೆ ಬರುತ್ತಿಲ್ಲವೆಂದು ಸಭೆ ಗಮನಕ್ಕೆ ತಂದರು.

ಮೇಯರ್ ಕೆ. ಚಮನ್ ಸಾಬ್ ಮಾತನಾಡಿ, ವಸತಿ ಬೇಕಿರುವವರ ಸರ್ವೇ ಕಾರ್ಯ ಸಮರ್ಪಕವಾಗಿ ಆಗಬೇಕು. ಯಾರಿಗೆ ಅಗತ್ಯವಿದೆಯೋ ಅಲ್ಲಿ ಕೆಲಸ ಆಗಬೇಕು. ಆದರೆ, ಅದು ಆಗುತ್ತಿಲ್ಲ. ಯೋಜನೆಯಲ್ಲಿ ನಗರದಲ್ಲೇ 10 ಸಾವಿರಕ್ಕೂ ಅಧಿಕ ಜನರಿಗೆ ಸೂರು ಬೇಕು. ಮನೆ ಅಗತ್ಯವಿದ್ದವರ ಬಳಿ ಜಾಗ ಸಣ್ಣದಿದೆ. ಕೆಲವರ ಬಳಿ ದೊಡ್ಡ ನಿವೇಶನ ಇದೆ. ಸರಿಯಾಗಿ 600 ಅಡಿಯೂ ಇಲ್ಲದ ಫಲಾನುಭವಿಗಳು 2-3 ಸಾವಿರ ಜನರಿರಬಹುದು. 600 ಅಡಿಗಿಂತ ಕಡಿಮೆ ಇದ್ದವರಿಗೂ ಅವಕಾಶ ಮಾಡಿಕೊಡಿ ಎಂದು ಹೇಳಿದರು. ಅದಕ್ಕೆ ಅಧಿಕಾರಿಯು, ಕೇಂದ್ರ ಸರ್ಕಾರದ ಮಾನದಂಡದ ಪ್ರಕಾಸ 20-30 ಅಡಿ ಜಾಗ ಕಡ್ಡಾಯ ಆಗಿರಬೇಕು ಎಂದರು. ಅದಕ್ಕೆ ಸಂಸದರು, ಯೋಜನೆಯ ಸಂಪೂರ್ಣ ಮಾಹಿತಿ ನೀಡಲು ಸೂಚಿಸಿದರು.

ದಾವಣಗೆರೆ ಜಿಲ್ಲಾಸ್ಪತ್ರೆಗೆ ಎಲ್ಲಾ ತಾಲೂಕು, ನೆರೆ ಹೊರೆಯ ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆ ಬಯಸಿ ಬರುತ್ತಾರೆ. ಅಂತಹವರಿಗೆ ಜಿಲ್ಲಾಸ್ಪತ್ರೆಯ ವೈದ್ಯರು, ಸಿಬ್ಬಂದಿ ಉತ್ತಮ ಸೇವೆ, ಉಪಚಾರ ಮಾಡಬೇಕು. ಜಿಲ್ಲಾಸ್ಪತ್ರೆ ಮೇಲಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಕೆಳಹಂತದ ಅಧಿಕಾರಿಗಳನ್ನೂ ಒಟ್ಟಿಗೆ ಕರೆದೊಯ್ಯಬೇಕು. ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸಹಾಯಕರು ಉತ್ತಮವಾಗಿ ಕೆಲಸ ಮಾಡಿ ಎಂದು ಅಧೀಕ್ಷಕರಿಗೆ ಸಂಸದರು ತಾಕೀತು ಮಾಡಿದರು.

ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಸೆಂಟರ್, ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಇದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಿಲ್ಲಾಸ್ಪತ್ರೆ ಶವಾಗಾರ ಕಟ್ಟಡವನ್ನು ಹೊಸದಾಗಿ, ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕು. ಈ ಬಗ್ಗೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಮನವಿ ಸಲ್ಲಿಸಲಾಗಿದೆ. ಸಚಿವರಿಂದ ಒಪ್ಪಿಗೆಯೂ ಸಿಗಲಿದೆ ಎಂಬುದಾಗಿ ಸಂಸದೆ ಡಾ.ಪ್ರಭಾ ವಿಶ್ವಾಸ ವ್ಯಕ್ತಪಡಿಸಿದರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

- - -

ಬಾಕ್ಸ್‌ * ಜಿಲ್ಲೆಯಲ್ಲೂ ಹೊರಗುತ್ತಿಗೆ ನೌಕರರ ಸೊಸೈಟಿ ಸ್ಥಾಪನೆ

- ಹೊರಗುತ್ತಿಗೆ ನೌಕರರಿಗೆ ಶೋಷಣೆ ತಪ್ಪಬೇಕು: ಸಂಸದೆ ಡಾ.ಪ್ರಭಾ

- ಬೀದರ್, ರಾಯಚೂರು ನಂತರ ದಾವಣಗೆರೆಯಲ್ಲೇ ಸೊಸೈಟಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಹೊರಗುತ್ತಿಗೆ ಏಜೆನ್ಸಿಗಳಿಂದ ಹೊರಗುತ್ತಿಗೆ ನೌಕರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಹೊರಗುತ್ತಿಗೆ ನೌಕರರ ಸೊಸೈಟಿ ಸ್ಥಾಪಿಸಿ, ಅದೇ ಸೊಸೈಟಿ ಮೂಲಕ ನೌಕರರಿಗೆ ಸಂಬಳ, ಇತ್ಯಾದಿ ಅನುಕೂಲ ಕಲ್ಪಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಧ್ಯಕ್ಷತೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯಲ್ಲಿ ಜಿಲ್ಲಾಸ್ಪತ್ರೆ ಹೊರಗುತ್ತಿಗೆ ನೌಕರರಿಗೆ ಆಗುತ್ತಿರುವ ತೊಂದರೆ ಬಗ್ಗೆ ತಮಗೆ ದೂರು ಬರುತ್ತಿರುವ ಬಗ್ಗೆ ಪ್ರಸ್ತಾಪಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರು ಎಷ್ಟು ಜನರಿದ್ದಾರೆ? ಏನು ಕೆಲಸ ಮಾಡುತ್ತಿದ್ದಾರೆ? ಅಂತಹ ನೌಕರರಿಗೆ ನೀಡುವ ಸಂಬಳ, ಸೌಲಭ್ಯಗಳೇನು? ಗುತ್ತಿಗೆದಾರರು ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ವೇತನ, ಸೌಲಭ್ಯ ನೀಡುತ್ತಿದ್ದಾರಾ ಅಥವಾ ಇಲ್ಲವಾ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ, ಹೊರಗುತ್ತಿಗೆ ನೌಕರರ ಸೊಸೈಟಿ ಸ್ಥಾಪಿಸಲು ಸರ್ಕಾರದ ನಿರ್ದೇಶನವಿದೆ. ಅದರಂತೆ ಸೊಸೈಟಿ ಮೂಲಕವೇ ಹೊರ ಗುತ್ತಿಗೆ ನೌಕರರಿಗೆ ವೇತನ, ಸೌಲಭ್ಯ ಸೇರಿದಂತೆ ಹೊರಗುತ್ತಿಗೆ ನೌಕರರ ಸೊಸೈಟಿ ಮೂಲಕವೇ ನೀಡಲಾಗುವುದು. ಇಲ್ಲಿ ಯಾವುದೇ ಗುತ್ತಿಗೆದಾರರೂ ಇರುವುದಿಲ್ಲ ಎಂದು ಸಂಸದರ ಗಮನಕ್ಕೆ ತಂದರು.

ಈಗಾಗಲೇ ಸೊಸೈಟಿ ನೋಂದಣಿಯಾಗಿದ್ದು, ನೌಕರರಿಂದ ಷೇರು ಸಂಗ್ರಹ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನಂತರ ಎಲ್ಲ ಇಲಾಖೆಗಳಲ್ಲೂ ಇರುವ ಎಲ್ಲ ಹೊರಗುತ್ತಿಗೆ ನೌಕರರು ಸೊಸೈಟಿಯ ಸದಸ್ಯರಾಗುತ್ತಾರೆ. ಇಲಾಖೆಗಳಿಂದ ನೇರವಾಗಿ ಸಂಘಕ್ಕೆ ಹಣ ನೀಡುವುದರಿಂದ ಇಲ್ಲಿ ಗುತ್ತಿಗೆದಾರರಾಗಲೀ ಅಥವಾ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಮುಂದಿನ ಒಂದೆರಡು ತಿಂಗಳಲ್ಲಿ ಈ ಸೊಸೈಟಿ ಕಾರ್ಯಾಚರಣೆ ಮಾಡಲಿದೆ ಎಂದು ತಿಳಿಸಿದರು.

ಇಲಾಖೆ ಅಧಿಕಾರಿ ಮಧು ಉತ್ತರಿಸಿ, ಈಗಾಗಲೇ ಎಲ್ಲ ಇಲಾಖೆಗಳಲ್ಲೂ ಇರುವ ನೌಕರರ ಮಾಹಿತಿ ಸಂಗ್ರಹಿಸಿ, ಅಂತಹವರಿಂದ ಷೇರು ಪಡೆಯುವ ಕೆಲಸ ನಡೆಯುತ್ತಿದ್ದು, ಸೊಸೈಟಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುತ್ತಾರೆ ಎಂದರು. ಇದಕ್ಕೆ ಸಂಸದೆ ಡಾ.ಪ್ರಭಾ, ಹೊರಗುತ್ತಿಗೆ ನೌಕರರು ಸಾಕಷ್ಟು ದೂರು ಸಲ್ಲಿಸಿದ್ದಾರೆ. ಇವುಗಳ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದರು.

ಸಿಇಒ ಸುರೇಶ ಇಟ್ನಾಳ್ ಮಾತನಾಡಿ, ಬೀದರ್-ರಾಯಚೂರು ನಂತರ ದಾವಣಗೆರೆಯಲ್ಲಿ ಸೊಸೈಟಿ ಆರಂಭಿಸಲಾಗುತ್ತಿದೆ. ಸೊಸೈಟಿ ಮೂಲಕವೇ ನೇರವಾಗಿ ಸಂಬಳ ನೀಡುವುದರಿಂದ ಇಲ್ಲಿ ಯಾವುದೇ ಶಿಫಾರಸಾಗಲೀ, ಭ್ರಷ್ಟಾಚಾರವಾಗಲಿ ನಡೆಯಲು ಅವಕಾಶವಿಲ್ಲ. ಇದು ಹೊರಗುತ್ತಿಗೆ ನೌಕರರದ್ದೇ ಸಂಘವಾಗಿದ್ದು, ಅಂತಹವರೇ ಸೊಸೈಟಿ ನಡೆಸಿಕೊಂಡು ಹೋಗಬೇಕು ಎಂದು ವಿವರಿಸಿದರು.

ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಹೊರಗುತ್ತಿಗೆ ನೌಕರರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ನೌಕರರಿಗೆ ಪಿಎಫ್ ಸೇರಿದಂತೆ ಇತರೆ ಸೌಲಭ್ಯಗಳೇ ಇಲ್ಲ. ₹18 ಸಾವಿರ ಚೆಕ್ ನೀಡಿ, ಹಣ ಡ್ರಾ ಮಾಡಿಕೊಂಡ ನಂತರ ಗುತ್ತಿಗೆದಾರರು ₹2 ಸಾವಿರ ಪಡೆಯುತ್ತಾರೆ. ಇಂತಹ ನಾನಾ ದೂರುಗಳೂ ಇವೆ. ಈ ಹಿನ್ನೆಲೆಯಲ್ಲಿ ಸೊಸೈಟಿ ಸ್ಥಾಪಿಸುವ ಉದ್ದೇಶ ಉತ್ತಮವಾಗಿದೆ ಎಂದರು.

ಮೇಯರ್ ಕೆ.ಚಮನ್‌ ಸಾಬ್ ಮಾತನಾಡಿ, ದಾವಣಗೆರೆ ಪಾಲಿಕೆಯಲ್ಲಿ ಹೊರಗುತ್ತಿಗೆ ದೊಡ್ಡ ದಂಧೆಯಾಗಿದೆ. 500-600 ಜನರನ್ನು ಹೊರಗುತ್ತಿಗೆ ಪಡೆಯುತ್ತೇವೆ. ಬೆಂಗಳೂರು ಸೇರಿದಂತೆ ಯಾವುದೋ ಊರಿನವರು ಬಂದು ಟೆಂಡರ್ ಪಡೆಯುತ್ತಾರೆ. ಸ್ಥಳೀಯರಿಗೆ ಉಪ ಗುತ್ತಿಗೆ ನೀಡುತ್ತಾರೆ. ಚನ್ನಾಗಿ ಕೆಲಸ ಮಾಡುವವರಿಗೆ ಕೆಲಸದಿಂದ ಬಿಡಿಸುತ್ತಾರೆ. ಕೆಲಸ ಕಾಯಂಗೊಳಿಸುವುದಾಗಿ ನೌಕರರಿಂದ ಹಣ ವಸೂಲಿ ಮಾಡುತ್ತಾರೆ. ಇಂತಹ ಅನೇಕ ನಿದರ್ಶನಗಳಿವೆ. ಆದರೆ, ಹಣ ಕೊಟ್ಟವರು ಯಾರೂ ಮುಂದೆ ಬಂದು ಹೇಳಲ್ಲ. ಸರ್ಕಾರ ನೇರ ಪಾವತಿಗೆ ಈ ವ್ಯವಸ್ಥೆ ಒಳಪಡಿಸಲಿ ಎಂದು ಆಗ್ರಹಿಸಿದರು.

ಸಿಇಒ ಇಟ್ನಾಳ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ಣ ಕಾಲಿಕ, ನೇರ ವೇತನ, ಹೊರ ಗುತ್ತಿಗೆ ಹೀಗೆ ಮೂರು ವಿಧದ ನೌಕರರಿದ್ದು, ಹೊರಗುತ್ತಿಗೆಯಡಿ ಕೆಲಸ ಮಾಡುವವರು ಮಾತ್ರ ಇದರ ವ್ಯಾಪ್ತಿಗೆ ಬರುತ್ತಾರೆ ಎಂದು ಸ್ಪಷ್ಟಪಡಿಸಿದರು.

- - - -28ಕೆಡಿವಿಜಿ10, 11, 12, 13:

ದಾವಣಗೆರೆ ಜಿಪಂ ಸಭಾಂಗಣದಲ್ಲಿ ಗುರುವಾರ ದಿಶಾ ಸಮಿತಿ ಸಭೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿ ಮಾತನಾಡಿದರು.