ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಯುಗವನ್ನೇ ಸೃಷ್ಠಿ ಮಾಡುವ ಶಕ್ತಿ ತಾಯಂದಿರಿಗೆ ಇದೆ. ಭವಿಷ್ಯದ ಮುಂದುವರಿದ ಭಾಗವಾಗಿರುವ ಮಕ್ಕಳಿಗೆ ಮನೆಯಲ್ಲಿಯೇ ತಾಯಂದಿರು ಉತ್ತಮ ಸಂಸ್ಕಾರ ನೀಡಿದ್ದೇ ಆದಲ್ಲಿ ಶಾಲಾ ಕಾಲೇಜುಗಳ ಭಾರ ಕಡಿಮೆಯಾಗುತ್ತದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.ಗಂಗೂರು ಗ್ರಾಮದ ನೆಹರೂ ಸ್ಮಾರಕ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಆಧುನಿಕವಾಗಿರುವಂತಹ ವಿದ್ಯೆ ಆಧುನಿಕ ಜಗತ್ತಿನ ಸಂಹವನ ಮಾಡಲು ಬೇಕು. ಅದನ್ನು ನಮ್ಮ ಬಿಜಿಎಸ್ ಶಿಕ್ಷಣ ಸಂಸ್ಥೆ ಕೊಡಲಿದೆ. ಆದರೆ ಅಂತರಂಗದಲ್ಲಿ ಆಧುನಿಕತೆಗೆ ಇಂಬುಕೊಡುವ ನಿಟ್ಟಿನಲ್ಲಿ ಮೂಲವಾಗಿ ಬೇರಿನ ರೂಪದಲ್ಲಿ ಬೇಕಾಗಿರುವಂತಹ ಶಕ್ತಿಯನ್ನ ತಾಯಂದಿರೇ ಕೊಡಬೇಕು. ಅಂತಹ ಜವಬ್ದಾರಿಯನ್ನು ಎಲ್ಲಾ ತಾಯಂದಿರು ಹೊತ್ತುಕೊಳ್ಳಬೇಕೆಂದು ಹೇಳಿದರು.ಲಕ್ಷಾಂತರ ಮಂದಿಯ ಅಂತಃರಂಗದ ಕರೆ, ಮೊರೆ, ಪ್ರಾರ್ಥನೆ ಚುಂಚನಗಿರಿ ಮಠವನ್ನ ಬೆಳೆಸುತ್ತಿದೆ, ಇನ್ನಷ್ಟು ಬೆಳೆಸುತ್ತದೆ. ಬೆಳೆಯುವಿಕೆ ಸಂದರ್ಭದಲ್ಲಿ ಎಲ್ಲರೂ ಜತೆಯಲ್ಲಿ ನಿಂತ್ತು ಮಠ, ಶಿಕ್ಷಣ ಸಂಸ್ಥೆ ಬೆಳವಣಿಗೆಗೆ ಸದಾ ಸ್ಪಂದಿಸಬೇಕಿದೆ ಎಂದರು.ಮಾಜಿ ಸಚಿವ ನೀರಾವರಿ ತಜ್ಞರೂ ಆಗಿದ್ದ ಎಚ್.ಎನ್.ನಂಜೇಗೌಡರು ಸ್ಪಾಪಿಸಿದ ಗಂಗೂರು ಗ್ರಾಮದ ಸರ್ಕಾರಿ ಅನುದಾನಕ್ಕೆ ಒಳಪಟ್ಟಿರುವ ನೆಹರೂ ಸ್ಮಾರಕ ಪ್ರೌಢಶಾಲೆ ಹಾಗೂ ಶಾಲೆಗೆ ಸಂಬಂಧಿಸಿದ ಸುಮಾರು 5 ಎಕರೆ ಜಾಗವನ್ನು ಆದಿಚುಂಚನಗಿರಿ ಮಠಕ್ಕೆ ಇಂದು ವಿದ್ಯುಕ್ತವಾಗಿ ಆಡಳಿತ ಮಂಡಳಿ ಹಸ್ತಾಂತರ ಕಾರ್ಯ ಮಾಡಿದ್ದೀರಿ. ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ 1 ಲಕ್ಷದ 60 ಸಾವಿರಕ್ಕೂ ಅಧಿಕ ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ. ನೂತನವಾಗಿ ಆರಂಭಗೊಳ್ಳುವ ಈ ಶಾಲೆ ಮಠಕ್ಕೆ ಸೀಮಿತಗೊಳ್ಳದೇ ಇಡೀ ಸಮುದಾಯವನ್ನು ಒಳಗೊಂಡಂತೆ ಸಂಸ್ಥೆ ಕಾರ್ಯನಿರ್ವಹಿಸಲಿದೆ. ಈ ಸಲುವಾಗಿ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ಸಹ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿಬಿಎಸ್‌ಸಿ, ಒಂದನೇ ತರಗತಿಯಿಂದ ಪಿಯುಸಿ ತನಕ ಉತ್ತಮ ಶಿಕ್ಷಣ ಕಲ್ಪಿಸುವ ಕಾರ್ಯ ನಡೆಯಲಿದೆ. ಸುಮಾರು 20 ಕಿ.ಮೀ.ವ್ಯಾಪ್ತಿಯ ಮಕ್ಕಳು ಇಲ್ಲಿಗೆ ಬಂದು ಶಿಕ್ಷಣ ಪಡೆಯುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು. ಶಾಸಕ ಎ.ಮಂಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇವತ್ತು ಗಂಗೂರು ಗ್ರಾಮ ನಮ್ಮ ಚುಂಚನಗಿರಿ ಮಠದ ಹಿರಿಯ ಶ್ರೀಗಳ ಸ್ಪರ್ಶದಿಂದ ಪಾವನಗೊಂಡಿದೆ. ಅಲ್ಲದೆ ನಮ್ಮ ಗ್ರಾಮೀಣ ಶಾಲೆ ಬಿಜಿಎಸ್‌ಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಿರುವುದು ಸಹ ಗ್ರಾಮೀಣ ಭಾಗದ ಎಲ್ಲಾ ವರ್ಗದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ದೊರೆಯುವ ಆಶಾಭಾವನೆಯನ್ನು ಹೊಂದಿದ್ದೇನೆ. ಅದೇ ರೀತಿ ಅರಕಲಗೂಡು ಪಟ್ಟಣದಲ್ಲಿನ ಕುವೆಂಪು ಭವನವನ್ನು ಸಹ ಚುಂಚನಗಿರಿ ಮಠಕ್ಕೆ ವಹಿಸುತ್ತಿದ್ದೇನೆ. ಕಾವೇರಿ ತೀರದಲ್ಲಿ ಮಠಕ್ಕೆ ಸ್ಥಳಾವಕಾಶ ಕಲ್ಪಿಸುವ ಗುರುತರ ಜವಾಬ್ದಾರಿ ಸಹ ನನ್ನ ಮೇಲಿದೆ. ಆ ಕೆಲಸವನ್ನು ಸಹ ನಿರ್ವಹಿಸುವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಶಂಭುನಾಥ ಸ್ವಾಮೀಜಿ ವಹಿಸಿದ್ದರು. ತಾರಾ ಮಂಜು, ಬಿಇಒ ನಾರಾಯಣ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಮಾಜಿ ಜಿಪಂ ಸದಸ್ಯ ಅಪ್ಪಣ್ಣ, ಲೋಕೇಶ ಗೌಡ, ಪ್ರಾಂಶುಪಾಲ ಮಹೇಶ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.