ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವ ಆಧ್ಯಾತ್ಮಿಕ ಕೇಂದ್ರ ಹಾವೇರಿ ಹುಕ್ಕೇರಿಮಠವಾಗಿದೆ. ಶ್ರೀ ಮಠದಲ್ಲಿ ಶಿಕ್ಷಣ ಪಡೆದ ಎಲ್ಲಾ ವಿದ್ಯಾರ್ಥಿಗಳೇ ಧನ್ಯರು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ಹಾವೇರಿ: ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವ ಆಧ್ಯಾತ್ಮಿಕ ಕೇಂದ್ರ ಹಾವೇರಿ ಹುಕ್ಕೇರಿಮಠವಾಗಿದೆ. ಶ್ರೀ ಮಠದಲ್ಲಿ ಶಿಕ್ಷಣ ಪಡೆದ ಎಲ್ಲಾ ವಿದ್ಯಾರ್ಥಿಗಳೇ ಧನ್ಯರು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ಹುಕ್ಕೇರಿಮಠ ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳ ಸುವರ್ಣ ಮಹೋತ್ಸವ ಪ್ರಯುಕ್ತ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜ ಅಭಿವೃದ್ಧಿ ಆಗಬೇಕಾದರೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ಶಿಲ್ಪಿಗಳಾಗಿ ಮೂರ್ತಿಗಳನ್ನು ಕೆತ್ತನೆ ಮಾಡಿ ಸಮಾಜಕ್ಕೆ ಮಾದರಿ ವ್ಯಕ್ತಿಗಳನ್ನಾಗಿಸಲು ಶ್ರಮಿಸುತ್ತಾರೆ. ನಿಜವಾಗಲೂ ಈ ಗುರುವಂದನೆ ಮತ್ತು ಹಳೇ ವಿದ್ಯಾರ್ಥಿಗಳ ಸಮಾವೇಶ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಹುಕ್ಕೇರಿಮಠ ಹಾಗೂ ಶಿವಲಿಂಗೇಶ್ವರ ವಿದ್ಯಾಪೀಠ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದೆ. ಜಾತಿ, ಧರ್ಮ, ಬೇಧ ಭಾವ ಇಲ್ಲದೆ ಎಲ್ಲರೂ ಒಂದು ಎನ್ನುವ ಭಾವನೆಯಲ್ಲಿ ಶಿಕ್ಷಣವನ್ನು ಧಾರೆ ಎರೆದಿದೆ. ಮುಂದಿನ ಯುವ ಜನಾಂಗ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವಲ್ಲಿ ಮಾದರಿಯಾಗಿದೆ. ನಾನು ಸಹ ಶ್ರೀ ಮಠದ ಭಕ್ತನಾಗಿ ಸೇವೆ ಮಾಡಿಕೊಂಡು ಬಂದಿದ್ದೇನೆ. ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ಕೆ ₹ 10 ಲಕ್ಷ , ಅನುದಾನ ಕೊಡುತ್ತೇನೆ ಎಂದು ವಾಗ್ದಾನ ಮಾಡಿದರು.ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ಜಗತ್ತಿನ ಯಾವುದೇ ರಾಷ್ಟ್ರಕ್ಕೂ ಹೋದರೂ ಗುರುಗಳಿಗೆ ಬಹುದೊಡ್ಡ ಸ್ಥಾನವಿದೆ. ಶಿಕ್ಷಕರು ಪ್ರಾಮಾಣಿಕ, ಶ್ರದ್ಧೆಯಿಂದ ಮಕ್ಕಳಿಗೆ ಪಾಠ ಮಾಡಬೇಕು. ನಮ್ಮ ಕರ್ತವ್ಯವನ್ನು ನಾವು ಸರಿಯಾಗಿ ಮಾಡಬೇಕು. ವಿದ್ಯಾರ್ಥಿಗಳು, ಪೋಷಕರು ಉತ್ತಮ ಶಿಕ್ಷಕರನ್ನು ಯಾವಾಗಲು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. 21ನೇ ಶತಮಾನ ಜ್ಞಾನ ಮತ್ತು ಕೌಶಲ್ಯದ ಯುಗವಾಗಿದೆ. ಇವೆರಡು ಇದ್ದಲ್ಲಿ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಸಿಗುತ್ತದೆ ಎಂದರು.ನಿವೃತ್ತ ಶಿಕ್ಷಕರನ್ನು ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿ ಗುರುವಂದನೆ ಸಲ್ಲಿಸಿದರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುಮಾರ ಮಹಾಸ್ವಾಮೀಜಿ, ಅಭಿನವ ಸಿದ್ದಾರೂಢ ಸ್ವಾಮೀಜಿ, ಚೆನ್ನಬಸವ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಗುರುಬಸವ ದೇವರು, ಡಾ. ಓಂಕಾರ ಕಾಕಡೆ, ಎಂ.ಎಚ್ ಪಾಟೀಲ, ಎಸ್.ಎಸ್ ಮುಷ್ಠಿ, ವೀರಣ್ಣ ಅಂಗಡಿ, ಜಗದೀಶ ತುಪ್ಪದ, ಬಸವರಾಜ ಅರಬಗೊಂಡ, ಮಲ್ಲಿಕಾರ್ಜುನ ಸಾತೆನಹಳ್ಳಿ, ಡಾ.ಬಸವರಾಜ ವೀರಾಪುರ, ಡಾ. ಸಂಜಯ ಡಾಂಗೆ, ಎಸ್.ಎಫ್.ಎನ್. ಗಾಜಿಗೌಡ್ರ, ಪ್ರಕಾಶ ಮತ್ತಿಹಳ್ಳಿ ಸೇರಿದಂತೆ ನಿವೃತ್ತ ಶಿಕ್ಷಕರು, ಗಣ್ಯರು ಉಪಸ್ಥಿತರಿದ್ದರು.ಅನ್ನ, ಅರಿವು ಮತ್ತು ಆಶ್ರಯ ನೀಡಿ ತ್ರಿವಿಧ ದಾಸೋಹದ ಮೂಲಕ ಮಧ್ಯಮ ವರ್ಗವನ್ನು ಸುಧಾರಿಸಿದ ಹೆಗ್ಗಳಿಕೆ ಜೊತೆಗೆ ಎಲ್ಲ ರಂಗಗಳಲ್ಲಿ ವಿದ್ಯಾರ್ಥಿಗಳನ್ನು ನೀಡಿ ನಾಡನ್ನು ಸಂಪನ್ಮೂಲಗೊಳಿಸಿದ ಶ್ರೇಯಸ್ಸು ಶ್ರೀಮಠದ್ದು. ಈ ಸುವರ್ಣ ಸಂದರ್ಭದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಸತಿಯುತ ಉಚಿತ ಪ್ರಸಾದ ನಿಲಯದ ವಿದ್ಯಾರ್ಥಿ ಭವನದ ಮೊದಲ ಮಹಡಿ ಒಂದು ವರ್ಷದೊಳಗೆ ಉದ್ಘಾಟನೆಗೊಳ್ಳಲಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ಇಂದಿನ ಕಾರ್ಯಕ್ರಮ ಹಳೆಯ ಎಲ್ಲ ವಿದ್ಯಾರ್ಥಿಗಳಲ್ಲಿ ಸಂಚಲನ ಮೂಡಿಸಿ ಅನನ್ಯ ಅನುಭೂತಿ ಮೂಡಿಸಿದೆ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಿನ್ನೆಲೆಯಿಂದ ಬಂದಿದ್ದ ನಮ್ಮಂಥ ಬಡ ವಿದ್ಯಾರ್ಥಿಗಳಿಗೆ ಶ್ರೀಮಠ ಶಿಕ್ಷಣವನ್ನು ಕೊಡುಗೆಯಾಗಿ ನೀಡಿದೆ. ಪ್ರೀತಿ, ವಿಶ್ವಾಸ, ಕಾಳಜಿ, ಸಹಕಾರ ನಮ್ಮೆಲ್ಲರನ್ನೂ ಹತ್ತಿರಕ್ಕೆ ಕರೆದುಕೊಂಡು ಬಂದು ಒಂದೇ ಮನೆಯ ಸಹೋದರರಂತೆ, ಕುಸುಮವನ್ನಾಗಿಸಿದೆ. ಅರ್ಥಗರ್ಭಿತ ಅಡಿಪಾಯ ಹಾಕಿಕೊಟ್ಟ ಸಂಸ್ಥೆ ಹುಕ್ಕೇರಿಮಠ ಶಿವಲಿಂಗೇಶ್ವರ ವಿದ್ಯಾಪೀಠಕ್ಕೆ ಸಲ್ಲುತ್ತದೆ. ಯಾವಾಗಲೂ ಸಂಸ್ಥೆಗೆ ಚಿರಋಣಿ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.