ಮಾನವ ಕುಲಕ್ಕೆ ಮಾನವ ಕಳ್ಳ ಸಾಗಾಣಿಕೆ ದೊಡ್ಡ ಶಾಪ: ನ್ಯಾಯಾಧೀಶೆ ದಿವ್ಯಶ್ರೀ

| Published : Sep 13 2025, 02:05 AM IST

ಮಾನವ ಕುಲಕ್ಕೆ ಮಾನವ ಕಳ್ಳ ಸಾಗಾಣಿಕೆ ದೊಡ್ಡ ಶಾಪ: ನ್ಯಾಯಾಧೀಶೆ ದಿವ್ಯಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪ್ರತಿಯೊಬ್ಬರು ಪೊಲೀಸರಾಗಬೇಕು

ಕಾರವಾರ: ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು, ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪ್ರತಿಯೊಬ್ಬರು ಪೊಲೀಸರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ ಹೇಳಿದರು.

ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಬಡ ಮತ್ತು ನಿರ್ಗತಿಕ ಹೆಣ್ಣು ಮಕ್ಕಳನ್ನು ಹಣದ ಆಸೆ, ಆಮಿಷಗಳನ್ನು ತೋರಿಸಿ, ಕಳ್ಳ ಸಾಗಾಣಿಕೆ ಮಾಡಿ, ಕೂಲಿ ಕಾರ್ಮಿಕರಾಗಿ ಹಾಗೂ ವೇಶ್ಯಾವಟಿಕೆಯಲ್ಲಿ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಗಂಡು ಮಕ್ಕಳು ಸಹ ಬಲಿಯಾಗುತ್ತಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಇಡೀ ಮಾನವ ಕುಲಕ್ಕೆ ಮಾನವ ಕಳ್ಳ ಸಾಗಾಣಿಕೆ ಒಂದು ದೊಡ್ಡ ಶಾಪವಾಗಿದೆ. ಕಣ್ಣಿಗೆ ಕಾಣದ ಹಾಗೇ ಮಾನವ ಕಳ್ಳ ಸಾಗಾಣಿಕೆಯೂ ದೇಶದ ಪ್ರತಿ ಮೂಲೆಯಲ್ಲಿ ನಡೆಯುತ್ತಿದೆ. ಆಶಾ ಕಾರ್ಯಕತೆಯರ ಮೂಲಕ ಮನೆ ಮನೆಗೆ ಅರಿವು ಮೂಡಿಸುವುದರ ಮೂಲಕ ದೇಶ ಮತ್ತು ರಾಜ್ಯದಿಂದ ಮಾನವ ಕಳ್ಳ ಸಾಗಾಣಿಕೆಯನ್ನು ತೆಡೆಗಟ್ಟಬಹುದು. ಭಾರತೀಯರಾಗಿ ನಾವೆಲ್ಲರೂ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಎಚ್. ಕೃಷ್ಣಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯು ವಿಶ್ವಾದ್ಯಂತ ಸಾಮಾಜಿಕ ಪಿಡುಗಾಗಿ ವ್ಯಾಪಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಪೋಸ್ಟರ್ ಬಿಡುಗಡೆ ಹಾಗೂ ಸಮೀಕ್ಷೆ ಮಾಡಲು ಅಲ್ಪಸಂಖ್ಯಾತರಿಗೆ ಟ್ಯಾಬ್ ವಿತರಿಸಲಾಯಿತು.

ಇಂಟರ್‌ನ್ಯಾಷನಲ್ ಜೆಸ್ಟೀಸ್ ಮಿಷನ್‌ನ ರಾಜ್ಯ ಮುಖ್ಯಸ್ಥ ವಿಲಿಯಂ ಕ್ರಿಸ್ಟೋಫರ್ ಹಾಗೂ ಪ್ರತಿನಿಧಿ ವೇಣುಗೋಪಾಲ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವ ಕುರಿತು ಉಪನ್ಯಾಸ ನೀಡಿದರು.

ಎಎಸ್ಪಿ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್ ಬಿ.ವಿ, ತರಬೇತಿ ನಿರತ ಐಎಎಸ್ ಅಧಿಕಾರಿ ಝೂಫಿಷಾನ್ ಹಕ್ ಮತ್ತಿತರರು ಇದ್ದರು.