ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ನಾನು ಚುನಾವಣೆ ಸಮಯದಲ್ಲಿ ನನ್ನ ಕಡೆಯ ಚುನಾವಣೆ ಎಂದು ಹೇಳಿದ್ದೇನೆ. ಆದರೆ, ಪಕ್ಷದ ಹೈಕಮಾಂಡ್ ನೀನೇ ನಿಲ್ಲಬೇಕೆಂದಾಗ ಒಲ್ಲೆ ಎನ್ನಲಾಗದು. ಮನುಷ್ಯನಿಗೆ ಗುರಿ ಇರಬೇಕು. ನನಗೆ ಪ್ರಧಾನ ಮಂತ್ರಿ ಆಗಬೇಕೆಂದು ಗುರಿ ಇಟ್ಟುಕೊಂಡಿದ್ದೇನೆ. ಅದು ಗುರಿ ಮಾತ್ರ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಪಟ್ಟಣದ ಧನಶೆಟ್ಟಿ ಮಂಗಲ ಕಾರ್ಯಾಲದಲ್ಲಿ 548ಬಿ ರಾಷ್ಟ್ರೀಯ ಹೆದ್ದಾರಿ ಮಹಾರಾಷ್ಟ್ರದ ಮುರುಮದಿಂದ ಮಾಶ್ಯಾಳ, ಕರಜಗಿ, ಇಂಡಿ, ಅಥರ್ಗಾ, ನಾಗಠಾಣ ಮಾರ್ಗವಾಗಿ ವಿಜಯಪುರದವರೆಗೆ 102 ಕಿಮೀ ಉದ್ದದ ನೂತನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 40 ವರ್ಷದ ರಾಜಕಾರಣದಲ್ಲಿ ರಾಜ್ಯ, ಕೇಂದ್ರದಲ್ಲಿ ನಮ್ಮ ಪಕ್ಷದ ಸರ್ಕಾರ ಇಲ್ಲದಿದ್ದರೂ ಬೇರೆ ಪಕ್ಷದ ಮುಖ್ಯಮಂತ್ರಿ, ಸಚಿವರಿಂದ ಜಿಲ್ಲೆಯ ಅಭಿವೃದ್ಧಿಗಾಗಿ ಮನವಿ ಮಾಡಿಕೊಂಡು ಯೋಜನೆಗಳು ಅನುಷ್ಠಾನಗೊಳಿಸಿದ್ದೇನೆ. ನಾನು ಪ್ರಚಾರ ಪಡೆಯುವುದಕ್ಕಿಂತ ಜನರ ಕೆಲಸ ಮಾಡಿದ್ದೇನೆ ಎಂಬ ಸಮಾಧಾನ, ನೆಮ್ಮದಿ ನನಗಿದೆ ಎಂದು ತಿಳಿಸಿದರು.
ಇಂಡಿ ಜನರ ಉಪಕಾರ ನನ್ನ ಮೇಲಿದೆ. ನನ್ನ ರಾಜಕಾರಣವೇ ಇಂಡಿಯಿಂದ ಆರಂಭಗೊಂಡಿದೆ. ಹಲಸಂಗಿ ಪಟೇಲರು, ತಡವಲಗಾ ಮೇತ್ರಿ ಕಾಕಾ, ಶಾಮರಾವ ಕುಲಕರ್ಣಿ, ಮದಪ್ಪಕಾಕಾ,ನಡಗೇರಿ ಕಾಕಾನವರು ನನಗೆ ಮೊಟ್ಟಮೊದಲು ರಾಜಕಾರಣದ ಮಾರ್ಗ ತೊರಿಸಿದ್ದಾರೆ. ನಂತರ ಜೆ.ಎಚ್.ಪಟೇಲ,ರಾಮಕೃಷ್ಣ ಹೆಗಡೆ ಮಾರ್ಗದಲ್ಲಿ ನಡೆದಿದ್ದರಿಂದ ಇಂದು ನಾನು ದಲಿತ ಸಮುದಾಯದ ವ್ಯಕ್ತಿಯಾಗಿ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ನನಗೆ ರಾಜಕಾರಣದಲ್ಲಿ ದೊಡ್ಡವನನ್ನಾಗಿ ಮಾಡಿದವರನ್ನು ನೆನಪಿಸುವುದಗೋಸ್ಕರ ನಾನು ಕಟ್ಟಿಸಿದ ಮನೆಗೆ ಹೆಗಡೆ, ಪಟೇಲ ನಿವಾಸ ಎಂದು ಹೆಸರಿಟ್ಟು ಅವರನ್ನು ಸ್ಮರಿಸುತ್ತೇನೆ ಎಂದು ತಿಳಿಸಿದರು.ಹೆಗಡೆ ಹಾಗೂ ಪಟೇಲರು ನನಗೆ ಅಧಿಕಾರ, ಹಣದ ಬೆನ್ನು ಹತ್ತಬೇಡ ಎಂದು ಕಿವಿಮಾತು ಹೇಳಿದ್ದಾರೆ. ಸಾವಿರ ಕೋಟಿ ಅನುದಾನದ ಕಾಮಗಾರಿಗೆ ಬೇರೆ ಪಕ್ಷದವರು ಭೂಮಿಪೂಜೆ ಮಾಡುತ್ತಿದ್ದರೆ ಜಾತ್ರೆ ಮಾಡುತ್ತಿದ್ದರು. ಜೀಪ್, ಗಾಡಿ ಕಳಹಿಸಿ ಜನರನ್ನು ಕರೆಸುತ್ತಿದ್ದರು. ಆದರೆ, ನಾನು ಜೀಪ್, ಗಾಡಿ ಕೊಟ್ಟು ಜನರನ್ನು ಕರೆಸಿ ಕಾರ್ಯಕ್ರಮ ಮಾಡುವವನಲ್ಲ. ಗಾಡಿ, ಜೀಪ್ ಕಳುಹಿಸಿ ಜನರನ್ನು ಕರೆಯಿಸಿ ಕಾರ್ಯಕ್ರಮ ಮಾಡಿದರೇ ಗಾಡಿ, ಜೀಪ್‌ದ ಹಣ ತೆಗೆಯಬೇಕಾದರೇ ಬೇರೊಬ್ಬರ ಜೇಬು ಕತ್ತರಿಸಬೇಕಾಗುತ್ತದೆ ಎಂದರು.
10 ವರ್ಷದಲ್ಲಿ ಜಿಲ್ಲೆಯಲ್ಲಿ ₹3516 ಕೋಟಿ ಅನುದಾನದಲ್ಲಿ ಸಾವಿರ ಕಿಮೀ ಉದ್ದದ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ವಿಜಯಪುರ-ಪಂಡರಪೂರ ರಾಷ್ಟ್ರೀಯ ಹೆದ್ದಾರಿ ಸೇರಿ ಒಟ್ಟು 9 ಹೆದ್ದಾರಿಗಳನ್ನು ವಿಜಯಪುರ ಜಿಲ್ಲೆಗೆ ನನ್ನ ಅವಧಿಯಲ್ಲಿ ಮಾಡಿಸಿದ್ದೇನೆ ಎಂದು ತಿಳಿಸಿದರು.ಆಂಧ್ರಪ್ರದೇಶದ ಮಾದರಿಯಲ್ಲಿ ಜೆಜೆಎಂ ಯೋಜನೆ ಅನುಷ್ಠಾನಗೊಳಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಭೀಮಾನದಿಯ ದಂಡೆಯ ಮೇಲಿರುವ ಗ್ರಾಮಗಳು ಸೇರಿದಂತೆ ಇಂಡಿ ತಾಲೂಕಿನ ಪ್ರತಿ ಗ್ರಾಮಗಳಿಗೆ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಕುಡಿಯುವ ನೀರು,ರಸ್ತೆ ಕಾಮಗಾರಿಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅರ್ಧ ಪಾಲು ಇದ್ದರೂ ಯಾವ ಶಾಸಕರು ನಮ್ಮ ಪ್ರಧಾನ ಮಂತ್ರಿಯ ಫೋಟೋ ಹಾಕುವುದಿಲ್ಲ, ನಮ್ಮ ಹೆಸರು ಹೇಳುವುದಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳ ಭೂಮಿಪೂಜೆ ನೆರವೇರಿಸಿ ನಾವು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ನಮ್ಮ ಹೆಸರು ಹೇಳದಿದ್ದರೂ ದೇವರು ಅವರಿಗೆ ಒಳ್ಳೆಯದು ಮಾಡಲಿ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ₹3 ಸಾವಿರ ಕೋಟಿ ಅನುದಾನದಲ್ಲಿ ಹೊರ್ತಿ ಭಾಗದ ನೀರಿವಾರಿಗಾಗಿ ₹3 ಸಾವಿರ ಕೋಟಿ ಅನುದಾನ ಮಂಜೂರು ಮಾಡಿಸಲಾಗಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
ಮಾಜಿ ಎಂಎಲ್ಸಿ ಅರುಣ ಶಹಾಪೂರ, ಮಾಜಿ ಶಾಸಕ ರಮೇಶ ಭೂಸನೂರ, ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ, ಬಿ.ಡಿ.ಪಾಟೀಲ, ಚಂದ್ರಶೇಖರ ಕವಟಗಿ ಮಾತನಾಡಿದರು.ಈ ಸಂದರ್ಭದಲ್ಲಿ ದೇವೆಂದ್ರ ಕುಂಬಾರ, ಸಿದ್ದಲಿಂಗ ಹಂಜಗಿ, ಶೀಲವಂತ ಉಮರಾಣಿ, ಸಂಜೀವ ಐಹೊಳೆ, ಶ್ರೀಶೈಲಗೌಡ ಬಿರಾದಾರ, ಅನೀಲ ಜಮಾದಾರ, ವಿಜಯಲಕ್ಷ್ಮಿ ರೂಗಿಮಠ, ಸುನಂದಾ ವಾಲಿಕಾರ, ರವಿ ವಗ್ಗೆ, ಶ್ರೀಪತಿಗೌಡ ಬಿರಾದಾರ, ಎ.ಎಸ್.ಪಾಟೀಲ, ಎಸ್.ಜೆ.ವಾಲಿಕಾರ, ಹಣಮಂತ್ರಾಯಗೌಡ ಪಾಟೀಲ, ರವಿಕಾಂತ ಬಗಲಿ, ವೆಂಕಟೇಶ ಕುಲಕರ್ಣಿ, ಸಂಜೀವ ದಶವಂತ, ಅನೀಲಗೌಡ ಬಿರಾದಾರ, ಸುನಂದಾ ಗಿರಣಿವಡ್ಡರ, ರಾಮಸಿಂಗ ಕನ್ನೊಳ್ಳಿ, ಅನುಸೂಯಾ ಮದರಿ, ಸುನೀಲ ರಬಶೆಟ್ಟಿ, ರಾಜಕುಮಾರ ಸಗಾಯಿ, ಶಾಂತು ಕಂಬಾರ, ಮಂಜು ದೇವರ, ಮಲ್ಲನಗೌಡ ಬಿರಾದಾರ, ಸಂತೋಷಗೌಡ ಪಾಟೀಲ, ಚನ್ನುಗೌಡ ಪಾಟೀಲ, ಬತ್ತುಸಾಹುಕಾರ ಹಾವಳಗಿ, ಸಿಕಂದರ ಬೊರಾಮಣಿ, ವಿಜು ಮಾನೆ, ಭೀಮರಾಯಗೌಡ ಮದರಖಂಡಿ, ಮಹಾದೇವ ಗುಡ್ಡೊಡಗಿ, ದತ್ತಾ ಬಂಡೆನವರ, ರಮೇಶ ಧರೆನವರ, ಶಿವು ಬಗಲಿ, ಸಚಿನ ಬೊಳೆಗಾಂವ, ಭೀಮರಾಯಗೌಡ ಬಿರಾದಾರ, ವಿರಾಜ ಪಾಟೀಲ, ಶ್ರೀನಿವಾಸ ಕಂದಗಲ್ಲ, ಪ್ರಕಾಶ ಹಿಟ್ನಳ್ಳಿ ಮೊದಲಾದವರು ಇದ್ದರು.
ಕೋಟ್....25 ವರ್ಷಗಳ ಹಿಂದೆ ಪ್ರಧಾನಿ ದೇವೆಗೌಡರ ಕಾಲು ಹಿಡಿದು ಇಂಡಿ ಶಾಖಾ ಕಾಲುವೆ ನಿರ್ಮಾಣಕ್ಕೆ ₹64 ಕೋಟಿಗಳ ಅನುದಾನ ಮಂಜೂರು ಮಾಡಿಸಿದ್ದು, ಕಾಲುವೆ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದರಿಂದ ರೈತರ ಜಮೀನುಗಳಿಗೆ ಸರಿಯಾಗಿ ಕಾಲುವೆ ಮೂಲಕ ನೀರು ಹರಿಯುತ್ತಿಲ್ಲ ಎಂಬ ರೈತರ ದೂರುಗಳ ಬಂದ ಹಿನ್ನೆಲೆಯಲ್ಲಿ ಇಂಡಿ ಶಾಖಾ ಕಾಲುವೆ ದುರಸ್ತಿಗೆ ₹2700 ಕೋಟಿಗಳ ಅನುದಾನದ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರದ ಹಿಂದೆ ಸಲ್ಲಿಸಿ ಬಂದಿದ್ದೇನೆ. ಅನುದಾನ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.-ರಮೇಶ ಜಿಗಜಿಣಗಿ, ಸಂಸದರು.